ಉಡುಪಿ: ಡಾ. ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ ಹಾಗೂ ಕಮಲ ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಓನ್ ಗುಡ್ ಸ್ಟೆಪ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾದ ನವಜೀವನ ಲೇ ಕೌನ್ಸಿಲರ್ ತರಬೇತಿ ಕಾರ್ಯಕ್ರಮದ 9ನೇ ಬ್ಯಾಚ್‌ನ ಉದ್ಘಾಟನಾ ಸಮಾರಂಭವು ಡಾ. ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ ಎ. ಬಾಳಿಗ ಸಭಾಂಗಣದಲ್ಲಿ ನೆರವೇರಿತು.

ಕಾರ್ಯಕ್ರಮವನ್ನು ಸಹಾಯ ಹಸ್ತ ಮಣಿಪಾಲ ಲಯನ್ಸ್ ಚಾರಿಟೇಬಲ್ ಫೌಂಡೇಶನ್ ನ ಕಾರ್ಯದರ್ಶಿ ಡಾ. ಎಚ್. ಗಣೇಶ್ ಪೈ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎ.ವಿ. ಬಾಳಿಗ ಸಮೂಹ ಸಂಸ್ಥೆಗಳ ನಿರ್ದೇಶಕ ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ ವಹಿಸಿದ್ದರು. ಈ ಸಂದರ್ಭ ಆಸ್ಪತ್ರೆಯ ಮನೋವೈದ್ಯ ಡಾ. ದೀಪಕ್ ಮಲ್ಯ ಉಪಸ್ಥಿತರಿದ್ದರು.

ವಿಶ್ವೇಶ್ವರ ಹೆಗಡೆ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕಾರ್ಯಕ್ರಮ ಸಂಯೋಜಕಿ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಸ್ವಾಗತಿಸಿ, ಸಮಾಜದಲ್ಲಿ ಮಾನಸಿಕ ಆರೋಗ್ಯದ ಮಹತ್ವ ಹಾಗೂ ಲೇ ಕೌನ್ಸಿಲರ್‌ಗಳ ಪಾತ್ರದ ಕುರಿತು ಮಾತನಾಡಿದರು. ಉದ್ಘಾಟನಾ ಸಮಾರಂಭದ ಬಳಿಕ ತರಬೇತಿ ಕಾರ್ಯಕ್ರಮದ ಮೊದಲ ಅಧಿವೇಶನದಲ್ಲಿ ಡಾ. ಪಿ.ವಿ. ಭಂಡಾರಿ ಅವರು ‘ಮೆದುಳು ಮತ್ತು ಅದರ ಕಾರ್ಯಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಅವರು ಮೆದುಳಿನ ರಚನೆ, ವಿವಿಧ ಭಾಗಗಳ ಕಾರ್ಯವೈಖರಿ, ಭಾವನೆಗಳು, ಚಿಂತನೆ, ವರ್ತನೆ ಮತ್ತು ಮಾನಸಿಕ ಆರೋಗ್ಯದೊಂದಿಗೆ ಅದರ ಸಂಬಂಧವನ್ನು ವಿವರಿಸಿದರು. ಎರಡನೇ ಅಧಿವೇಶನದಲ್ಲಿ ಸೌಜನ್ಯ ಶೆಟ್ಟಿ ಅವರು ‘ಕೌನ್ಸೆಲಿಂಗ್‌ನ ಮೂಲ ತತ್ವಗಳು’ ಎಂಬ ವಿಷಯ ಕುರಿತು ಮಾತನಾಡಿ, ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಅಗತ್ಯವಾದ ಅನುಭೂತಿ, ಸಕ್ರಿಯ ಆಲಿಸುವಿಕೆ, ಗೌಪ್ಯತೆ, ನಿರ್ಣಯರಹಿತ ಮನೋಭಾವ ಹಾಗೂ ಪರಿಣಾಮಕಾರಿ ಸಂವಹನ ಕೌಶಲ್ಯಗಳ ಕುರಿತು ವಿವರಿಸಿದರು.

ಈ ತರಬೇತಿ ಕಾರ್ಯಕ್ರಮವು ಸಮುದಾಯದಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಮೂಡಿಸುವ ಹಾಗೂ ಅಗತ್ಯ ವಿರುವವರಿಗೆ ಮೂಲಭೂತ ಸಮಾಲೋಚನಾ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದು, ಭಾಗವಹಿಸಿದ ತರಬೇತಿದಾರರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.