ಕನ್ನಡಪ್ರಭ ಪತ್ರಿಕೆಯಲ್ಲಿ 2026, ಏಪ್ರಿಲ್ 6 ರಂದು ಪ್ರಕಟವಾದ ಲಾಯಿಲ ಗ್ರಾಮ ರಸ್ತೆಗೆ ಡಾಂಬರು ದರ್ಶನ ಮರೀಚಿಕೆ ಎಂಬ ವರದಿಗೆ ದ.ಕ. ಜಿಲ್ಲಾ ಪಂಚಾಯತ್ ಸ್ಪಂದಿಸಿದ್ದು ರಸ್ತೆ ಅಭಿವೃದ್ಧಿಗೆ 140 ಲಕ್ಷ ರು. ಕಾಮಗಾರಿಯ ಅಂದಾಜು ಪಟ್ಟಿಯನ್ನು ತಯಾರಿಸಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ನೀಡಿದೆ.
ಬೆಳ್ತಂಗಡಿ: ಕನ್ನಡಪ್ರಭ ಪತ್ರಿಕೆಯಲ್ಲಿ 2026, ಏಪ್ರಿಲ್ 6 ರಂದು ಪ್ರಕಟವಾದ ಲಾಯಿಲ ಗ್ರಾಮ ರಸ್ತೆಗೆ ಡಾಂಬರು
ದರ್ಶನ ಮರೀಚಿಕೆ ಎಂಬ ವರದಿಗೆ ದ.ಕ. ಜಿಲ್ಲಾ ಪಂಚಾಯತ್ ಸ್ಪಂದಿಸಿದ್ದು ರಸ್ತೆ ಅಭಿವೃದ್ಧಿಗೆ 140 ಲಕ್ಷ ರು. ಕಾಮಗಾರಿಯ ಅಂದಾಜು ಪಟ್ಟಿಯನ್ನು ತಯಾರಿಸಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ನೀಡಿದೆ.ಕನ್ನಡಪ್ರಭದಲ್ಲಿ ಪ್ರಕಟವಾದ ರಸ್ತೆ ಸಮಸ್ಯೆಯನ್ನು ಗಮನಿಸಿದ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ. ವೈಷ್ಣವಿ ಅವರು, ವಿಷಯದ ವಾಸ್ತವಾಂಶದ ಬಗ್ಗೆ ಆದ್ಯತೆಯ ಮೇರೆಗೆ ಪರಿಶೀಲಿಸಿ ತಕ್ಷಣವೇ ಅಗತ್ಯಕ್ರಮ ಕೈಗೊಂಡು ಅನುಪಾಲನಾ ವರದಿಯನ್ನು ಕಳುಹಿಸುವಂತೆ, ಮುಖ್ಯಮಂತ್ರಿಯವರ ನಿರ್ದೇಶನದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಏಪ್ರಿಲ್ 6 ರಂದು ಪತ್ರ ಬರೆದಿದ್ದರು. ಅದರಂತೆ ಪಂಚಾಯತ್ ಇಂಜಿನಿಯರಿಂಗ್ ಬೆಳ್ತಂಗಡಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸ್ಥಳ ಪರಿಶೀಲಿಸಿದ್ದಾರೆ. ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಲಾಯಿಲ ಸ್ಮಶಾನದಿಂದ ಹೊಳೆ ಬದಿ ಕಾವಟೆ, ಬೆರ್ಕೆ-ಲಾಯಿಲ ಬೈಲು-ಗಾಣದಕೊಟ್ಯ-ಚಂದ್ಕೂರು ದೇವಸ್ಥಾನ ರಸ್ತೆಯು ಒಟ್ಟು 3 ಕಿಮೀ ಉದ್ದವಿದ್ದು, ಇದರಲ್ಲಿ ಈಗಾಗಲೇ 0.40 ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಹಾಲಿ ಅಭಿವೃದ್ಧಿ ಪಡಿಸಬೇಕಾದ ರಸ್ತೆಯು 2.60 ಕಿ.ಮೀ ಉದ್ದವಿದ್ದು, ಮಣ್ಣಿನ ರಸ್ತೆಯಾಗಿರುತ್ತದೆ. ರಸ್ತೆ ಕಾಂಕ್ರೀಟೀಕರಣಗೊಳಿಸಲು 140 ಲಕ್ಷ ರು. ಅನುದಾನದ ಅವಶ್ಯಕತೆ ಇದ್ದು, ಅಂದಾಜು ಪಟ್ಟಿಯನ್ನು ಮೇ 12ರಂದು ಅವರು ತಯಾರಿಸಿದ್ದು, ಪ್ರಸ್ತಾವನೆಯನ್ನು ಮಂಗಳೂರಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರಿಗೆ ಸಲ್ಲಿಸಿದ್ದಾರೆ.
ರಸ್ತೆಯ ದಾರಿ ಮತ್ತು ಚರಂಡಿಗಳಿಗಾಗಿ ಗಟ್ಟಿ ಮಣ್ಣನ್ನು ಅಗೆಯವುದು, ವೆಟ್ ಮಿಕ್ಸ್ ಜೆಲ್ಲಿಬೆಡ್‌ಗಾಗಿ ಒದಗಿಸುವುದು ಸೇರಿದಂತೆ ಎಂ.20 ಕಾಂಕ್ರೀಟನ್ನು ರಸ್ತೆಗಾಗಿ ಒದಗಿಸುವಂತೆ ವರದಿ ಸಿದ್ದಪಡಿಸಿ ತಾಂತ್ರಿಕ ಹಾಗೂ ಆಡಳಿತಾತ್ಮಕ ಮಂಜೂರಾತಿಗೆ ಸಲ್ಲಿಸಲಾಗಿದೆ. ರಸ್ತೆ ಕಾಂಕ್ರೀಟೀಕರಣವಾದಲ್ಲಿ ಅಲ್ಲಿನ ಪರಿಸರದ 17 ಪ.ಜಾತಿ ಮತ್ತು 8 ಇತರೇ ಕುಟುಂಬದವರಿಗೆ ಪ್ರಯೋಜನಕಾರಿಯಾಗಲಿದೆ.