ಜೆಡಿಎಸ್‌ ಬಿಡಲು ನಾಯಕರ ನಡವಳಿಕೆ ಕಾರಣ

| Published : Feb 11 2024, 01:45 AM IST

ಸಾರಾಂಶ

ನಾವೆಲ್ಲರೂ ಸೇರಿ ಜಿಲ್ಲೆಯಲ್ಲಿ ಜನತಾದಳವನ್ನು ಕಟ್ಟಿ ಬೆಳೆಸಿದೆವು. ನಾವು ಜೆಡಿಎಸ್ ತೊರೆಯಬೇಕಾದರೆ ನಾಯಕರ ನಡವಳಿಕೆಯೇ ಕಾರಣ ಎಂದು ಸಚಿವ ಎನ್.ಚಲುವರಾಯಸ್ವಾಮಿ ನೇರವಾಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ನಾವೆಲ್ಲರೂ ಸೇರಿ ಜಿಲ್ಲೆಯಲ್ಲಿ ಜನತಾದಳವನ್ನು ಕಟ್ಟಿ ಬೆಳೆಸಿದೆವು. ನಾವು ಜೆಡಿಎಸ್ ತೊರೆಯಬೇಕಾದರೆ ನಾಯಕರ ನಡವಳಿಕೆಯೇ ಕಾರಣ ಎಂದು ಸಚಿವ ಎನ್.ಚಲುವರಾಯಸ್ವಾಮಿ ನೇರವಾಗಿ ಹೇಳಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಎರಡನೇ ಹೋಬಳಿ ತಗ್ಗಹಳ್ಳಿ ಗ್ರಾಮದಲ್ಲಿ ನಾಡಕಚೇರಿ ಕಟ್ಟಡದ ಶಂಕುಸ್ಥಾಪನೆ ಹಾಗೂ ಬಿಎಂಸಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಾವು ಪಕ್ಷಾಂತರ ಮಾಡಿದೆವು. ನಾನು ಅಲ್ಲಿಯೂ ಮಂತ್ರಿಯಾಗಿದ್ದೆ. ಇಲ್ಲಿಯೂ ಮಂತ್ರಿಯಾಗಿದ್ದೇನೆ. ಆದರೆ, ಪಕ್ಷಗಳ ನಡುವೆ ಬಹಳ ಅಂತರವಿದೆ ಎಂದು ಮಾರ್ಮಿಕವಾಗಿ ನುಡಿದರು.

ಜಿಲ್ಲೆಯ ಅಭಿವೃದ್ಧಿಗೆ ಜೆಡಿಎಸ್ ನಾಯಕರ ಕೊಡುಗೆ ಶೂನ್ಯ. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ೨೦೧೮ರ ಚುನಾವಣೆಯಲ್ಲಿ ಏಳೂ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರು ಗೆದ್ದಿದ್ದರು. ನಾವು ಸೋತಿದ್ದರೂ ಅಭಿವೃದ್ಧಿ ವಿಚಾರದಲ್ಲಿ ಅಡ್ಡಗಾಲಾಗದೆ, ತಕರಾರು ತೆಗೆಯದೆ ತಟಸ್ಥರಾಗಿದ್ದೆವು. ಅವರು ಜಿಲ್ಲೆಗೆ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬ ಬಗ್ಗೆ ಜನರೇ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಶ್ರೀರಂಗಪಟ್ಟಣ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳು ಶೀಘ್ರದಲ್ಲಿಯೇ ಆರಂಭಗೊಳ್ಳಲಿದ್ದು, ಕೊತ್ತತ್ತಿ ಹೋಬಳಿ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸುತ್ತೇನೆ. ಇನ್ನೊಂದು ತಿಂಗಳೊಳಗೆ ರೈತರ ಆರ್‌ಟಿಸಿ, ಪೌತಿಖಾತೆ ಸಮಸ್ಯೆ, ಠಾಣೆಗಳ ದೂರು ಸೇರಿದಂತೆ ವಿವಿಧ ಸಮಸ್ಯೆಗಳ ಅಹವಾಲನ್ನು ಬಗೆಹರಿಸಲಾಗುವುದು, ಯಾವುದೇ ಸಮಸ್ಯೆ ಇದ್ದರು ನೇರವಾಗಿ ಶಾಸಕರನ್ನು ಮತ್ತು ತಮ್ಮನ್ನು ಭೇಟಿ ಮಾಡುವಂತೆ ಆಹ್ವಾನ ನೀಡಿದರು.ನಾಡಕಚೇರಿ ನಿರ್ಮಾಣಕ್ಕೆ ಸುಮಾರು 30 ರಿಂದ 40 ಲಕ್ಷ ರು.ಬೆಲೆ ಬಾಳುವ ನಿವೇಶನವನ್ನು ತಗ್ಗಹಳ್ಳಿ ಗ್ರಾಮದ ಗುರುಮಲ್ಲಪ್ಪ ಕುಟುಂಬದವರು ದಾನವಾಗಿ ನೀಡಿದ್ದಾರೆ, ಇಂದು ರಾಜಕಾರಣಿಗಳೇ ಇಂತಹ ಉದಾರವಾದ ದಾನವನ್ನು ಮಾಡಲು ಹಿಂದೇಟು ಹಾಕುವ ಸಂದರ್ಭದಲ್ಲಿ ಈ ಕುಟುಂಬದ ಕಾರ್ಯ ಮೆಚ್ಚುವಂತದ್ದು ಗ್ರಾಮದ ಅಭಿವೃದ್ಧಿಗೆ ಕೊಡುಗೆ ನೀಡಿರುವುದು ಅಪಾರಾದುದು, ಈ ಕುಟುಂಬದ ಹಾಗುಹೋಗುಗಳ ಜೊತೆ ಇರುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಚಾವಿಸನಿನಿ ಅಧ್ಯಕ್ಷ ಹಾಗೂ ಶಾಸಕ ಎ.ಬಿ.ರಮೇಶ್‌ಬಾಬು ಬಂಡಿಸಿದ್ದೇಗೌಡ, ತಗ್ಗಹಳ್ಳಿ ಗ್ರಾಪಂ ಅಧ್ಯಕ್ಷೆ ಟಿ.ಜೆ.ಅರ್ಪಿತಾ, ಹಳುವಾಡಿ ಗ್ರಾಪಂ ಅಧ್ಯಕ್ಷ ಸಿ.ಆರ್.ಕೃಷ್ಣ, ಮನ್‌ಮುಲ್‌ ಅಧ್ಯಕ್ಷ ಬೋರೇಗೌಡ, ತಹಸೀಲ್ದಾರ್‌ ಶಿವಕುಮಾರ್‌ ಬಿರಾದರ್, ಉಪ ತಶೀಲ್ದಾರ್‌ ಡಿ.ತಮ್ಮಣ್ಣಗೌಡ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಟಿ.ಸಿ.ಸಂತೋಷ್‌ಕುಮಾರ್, ಮುಖಂಡರಾದ ಮಂಜುನಾಥ್‌, ಹಳುವಾಡಿ ಶಿವಣ್ಣ, ಕೆ.ಎಚ್‌.ನಾಗರಾಜು, ಎಚ್‌.ಡಿ.ರಾಜು, ಪಲ್ಲವಿ, ನಾಗಣ್ಣ, ಯಶೋಧ ಹಾಗೂ ಮತ್ತಿತರರಿದ್ದರು.