ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ಇಲ್ಲಿನ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಆದಿಜಾಂಬವ ಸಮುದಾಯ (ಪ. ಜಾತಿ)ದ ಕುಂದುಕೊರತೆ ಸಭೆಯಲ್ಲಿ ತಾಲೂಕಿನಾದ್ಯಂತ ಸ್ಮಶಾನಗಳ ಸಮಸ್ಯೆ, ಸಮುದಾಯ ಭವನಗಳ ಕೊರತೆ, ಸಾಗುವಳಿ ಪತ್ರ ಮುಂತಾದ ಸಮಸ್ಯೆಗಳ ಸರಮಾಲೆಯನ್ನು ಅಧಿಕಾರಿಗಳ ಮುಂದೆ ಮುಖಂಡರು ಮಂಡಿಸಿದರು.ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗುರುವಾರ ಶಾಸಕ ಜಿ.ಡಿ. ಹರೀಶ್ ಗೌಡ ಮತ್ತು ವಿಧಾನ ಪರಿಷತ್ ಸದಸ್ಯಡಾ. ಡಿ. ತಿಮ್ಮಯ್ಯ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತಾಲೂಕಿನ ಸಿದ್ದಲಿಂಗಪುರ, ಬಿಳಿಗೆರೆ, ಬನ್ನಿಕುಪ್ಪೆ, ಹಳೇವಾರಂಚಿ ಮುಂತಾದ ಗ್ರಾಮಗಳಲ್ಲಿ ಸ್ಮಶಾನದ ಅಭಿವೃದ್ಧಿಯಲ್ಲಿ ಕೊರತೆ, ಒತ್ತುವರಿ ತೆರವು ಮುಂತಾದ ಸಮಸ್ಯೆಗಳನ್ನು ಗ್ರಾಮದ ಮುಖಂಡರು ತಿಳಿಸಿದರು. ಹಳೆವಾರಂಚಿಯಲ್ಲಿ ಇಂದಿಗೂ ಸ್ಮಶಾನವಿಲ್ಲ, ಜನರು ರಸ್ತೆಬದಿ ಹೂಳುತ್ತಿದ್ದಾರೆ ಎಂದು ತಾಲೂಕು ಆದಿಜಾಂಬವ ಸಂಘದ ಅಧ್ಯಕ್ಷ ಬಿ. ಶಿವಣ್ಣ ದೂರಿಸಿದರು.
ತಾಲೂಕಿನ ಕಟ್ಟೆಮಳಲವಾಡಿ, ಹಳೆವಾರಂಚಿ, ನಾಗನಹಳ್ಳಿ, ತಮ್ಮಡಹಳ್ಳಿ, ಆಯರಹಳ್ಳಿ, ರಂಗಯ್ಯನಕೊಪ್ಪಲು ಮುಂತಾದ ಕಡೆಗಳಲ್ಲಿ ಬಾಬು ಜಗಜೀವನರಾಂ ಸಮುದಾಯ ಭವನ ನಿರ್ಮಿಸಿಕೊಡಲು ಮುಖಂಡರು ಆಗ್ರಹಿಸಿದರು. ನಾಗನಹಳ್ಳಿಯಲ್ಲಿ 1.08 ಎಕರೆ ಗುಂಡುತೋಪು ಇದ್ದು, ಈ ಜಾಗದಲ್ಲಿ ದೇವಾಲಯಗಳನ್ನು ನಿರ್ಮಿಸಿಕೊಡಲು ಗ್ರಾಪಂನವರು ಅವಕಾಶ ಕೊಡುತ್ತಾರೆ. ಆದರೆ ಸಮುದಾಯ ಭವನಕ್ಕೆ ಮಾತ್ರ ಅವಕಾಶ ನೀಡುತ್ತಿಲ್ಲ ಏಕೆ ಎಂದು ಬಿ. ಶಿವಣ್ಣ ಕೇಳಿದಾಗ, ಸಮುದಾಯ ಭವನ ನಿರ್ಮಿಸಲು ಅವಕಾಶವಿದ್ದು, ಈ ಕುರಿತು ಸಂಬಂಧಪಟ್ಟ ಪಿಡಿಒಗೆ ನಿರ್ದೇಶಿಸಲಾಗುವುದು ಎಂದು ತಹಸೀಲ್ದಾರ್ ಜೆ. ಮಂಜುನಾಥ್ ತಿಳಿಸಿದರು.ಅಧಿಕಾರಿಗಳ ಗೈರಿಗೆ ಗರಂ ಆದ ಶಾಸಕ:
ಸಭೆಯಲ್ಲಿ ಮಾತನಾಡಿದ ಶಾಸಕ ಜಿ.ಡಿ. ಹರೀಶ್ ಗೌಡ, ತಿಂಗಳ ಹಿಂದೆ ಆಯೋಜನೆಗೊಂಡಿದ್ದ ಎಸ್ಸಿ, ಎಸ್ಟಿ ಕುಂದುಕೊರತೆ ಸಭೆಯಲ್ಲಿ ಆದಿಜಾಂಬವ ಸಂಘದ ಸದಸ್ಯರು ತಮ್ಮ ಅಹವಾಲುಗಳನ್ನು ಮುಕ್ತವಾಗಿ ಚರ್ಚಿಸಲು ಪ್ರತ್ಯೇಕ ಸಭೆ ನಡೆಸಲು ಕೋರಿದ್ದರು. ಅದರಂತೆ ಇದೀಗ ಮೊದಲ ಸಭೆ ಆಯೋಜಿಸಲಾಗಿದೆ. ಇನ್ನು ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ತಿಂಗಳ ಮೊದಲ ಮಂಗಳವಾರ ಸಭೆ ಆಯೋಜಿಸಲಿದ್ದೇನೆ. ಇಂದಿನ ಈ ಸಭೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದಾರೆ. ಕಾರಣವನ್ನೂ ತಿಳಿಸಿಲ್ಲ ಅಥವಾ ತಮ್ಮ ಅಧೀನ ಅಧಿಕಾರಿಯನ್ನು ಕಳುಹಿಸಿಲ್ಲ. ಇದೀಗ ರಾಜ್ಯ ಸರ್ಕಾರದ ಎಸ್ಸಿ, ಎಸ್ಟಿ ಲೆಜಿಸ್ಲೇಚರ್ ಸಮಿತಿಯ ಸದಸ್ಯರಾಗಿ ವಿಧಾನ ಪರಿಷತ್ ಸದಸ್ಯ ಡಿ. ತಿಮ್ಮಯ್ಯ ನೇಮಕಗೊಂಡಿದ್ದು, ಇನ್ನು ಮುಂದೆ ಸರ್ಕಾರ ಆಯೋಜಿಸುವ ಸಭೆಗಳಿಗೆ ಗೈರಾಗುವ ಅಧಿಕಾರಿಗಳ ಮಾಹಿತಿಯನ್ನು ನಿರ್ಣಯ ಕೈಗೊಂಡು ಡಿ. ತಿಮ್ಮಯ್ಯ ಅವರಿಗೆ ಕಳುಹಿಸುತ್ತೇವೆ. ನಿಮ್ಮ ಸಮಿತಿ ಸಭೆಯಲ್ಲಿ ನೀವು ಸೂಕ್ತ ಶಿಸ್ತು ಕ್ರಮ ಕೈಗೊಳ್ಳಿರೆಂದು ಡಿ. ತಿಮ್ಮಯ್ಯ ಅವರಿಗೆ ಕೋರಿದರು.ಇದಕ್ಕೆ ಶಾಸಕ ಡಿ. ತಿಮ್ಮಯ್ಯ ಸಹಮತ ಸೂಚಿಸಿದರು. ಜನರು ಅಹವಾಲು ನೀಡಿ ಹಾಗೆ ತೆರಳಬೇಡಿ. ಅಧಿಕಾರಿಗಳಿಂದ ಹಿಂಬರಹ ಪಡೆದು ಮುಂದಿನ ಸಭೆಗೆ ಬನ್ನಿ. ಕೆಲಸ ಆಗಿಲ್ಲವೆಂದರೆ ಆಗ ಅಧಿಕಾರಿಗೆ ನಾವು ಮಾತನಾಡುತ್ತೇವೆ ಎಂದರು.
ಇತರರಿಗೆ ಮಾದರಿಯಾದ ಶಾಸಕ ಹರೀಶ್ ಗೌಡ:ಎಂಎಲ್.ಸಿ ಡಿ. ತಿಮ್ಮಯ್ಯ ಮಾತನಾಡಿ, ಜಿಲ್ಲೆಯಲ್ಲೇ ಇದೇ ಮೊದಲ ಬಾರಿಗೆ ಕ್ರಿಯಾಶೀಲ ಶಾಸಕ ಜಿ.ಡಿ. ಹರೀಶ್ ಗೌಡ ಆದಿಜಾಂಬವ ಸಮಾಜದವರಿಗಾಗಿಯೇ ಪ್ರತ್ಯೇಕವಾಗಿ ಕುಂದುಕೊರತೆ ಸಭೆ ಆಯೋಜಿಸುವ ಮೂಲಕ ಮಾದರಿಯಾಗಿದ್ದಾರೆ. ಅವರ ಜನಪರ ಕಾಳಜಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಜಿಲ್ಲೆಯಾದ್ಯಂತ ಇದೇ ಮಾದರಿಯಲ್ಲಿ ಇತರ ತಾಲೂಕುಗಳಲ್ಲೂ ಸಭೆ ಆಯೋಜಿಸಲಿ. ಕಳೆದೆರಡು ವರ್ಷಗಳಲ್ಲಿ ತಮ್ಮ ಶಾಸಕರ ಅನುದಾನದಡಿ ಒಟ್ಟು 75 ಲಕ್ಷ ರು. ಗಳನ್ನು ವಿವಿದ ಅಭಿವೃದ್ಧಿ ಕಾಮಗಾರಿಗಳಿಗೆ ನೀಡಿದ್ದೇನೆ. ಪಟ್ಟಣದ ಬಾಬು ಜಗಜೀವನರಾಂ ಸಮುದಾಯಭವನಕ್ಕೆ 25 ಲಕ್ಷ ರು.ಗಳನ್ನು ನೀಡಿದ್ದೇನೆ ಎಂದರು.
ಸಭೆಯಲ್ಲಿ ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷ ಬಿ. ಶಿವಣ್ಣ, ಜಿಲ್ಲಾ ಸಮಿತಿ ಸದಸ್ಯ ಡಿ. ಕುಮಾರ್, ಆಂಜನೇಯ, ಸರಸ್ವತಿಪುರಂ ನಾಗರಾಜು, ಸಿದ್ದಯ್ಯ, ಮಹದೇವಮ್ಮ, ಮೋಹನ್, ಮಹೇಶ್ ಕುಮಾರ್, ತಹಸೀಲ್ದಾರ್ ಜೆ. ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಸಕ ಅಶೋಕ್‌ಕುಮಾರ್, ಇಒ ಕೆ. ಹೊಂಗಯ್ಯ ಸೇರಿದಂತೆ ಪಿಡಿಒಗಳು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.