ಮಾದೇಗೌಡ ಸೇರ್ಪಡೆಯ ಬಗ್ಗೆ ಚಾಮುಂಡೇಶ್ವರಿ ಕ್ಷೇತ್ರದ ಯಾವ ಕಾರ್ಯಕರ್ತರು ಅಥವಾ ಮುಖಂಡರಿಗೂ ಮಾಹಿತಿ ಇಲ್ಲ. ಸ್ವತಃ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪಕ್ಷಕ್ಕೆ ಸೇರಿಸಿಕೊಳ್ಳುವುದು ಬೇಡ ಎಂದಿದ್ದಾರೆ. ಹೀಗಿದ್ದರೂ ಮಾಜಿ ಸಚಿವ ಸಾ.ರಾ. ಮಹೇಶ್ ಅವರು ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಕಾಂಗ್ರೆಸ್ ಮುಖಂಡ, ಜಿಪಂ ಮಾಜಿ ಸದಸ್ಯ ಯರಗನಹಳ್ಳಿ ಎಸ್. ಮಾದೇಗೌಡ ಅವರ ಜೆಡಿಎಸ್ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಚಾಮುಂಡೇಶ್ವರಿ ಕ್ಷೇತ್ರದ ಮುಖಂಡರು, ಮಾಜಿ ಸಚಿವ ಸಾ.ರಾ. ಮಹೇಶ್ ಅವರು ಗುಂಪುಗಾರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಶನಿವಾರ ಸುದ್ದಿಗೋಷ್ಠಿ ನಡೆಸಿದ ಮುಖಂಡರು, ಮಾಜಿ ಸಚಿವ ಸಾ.ರಾ. ಮಹೇಶ್ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅನ್ನು ಇಬ್ಭಾಗ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಕೋಟೆಹುಂಡಿ ಮಹದೇವಸ್ವಾಮಿ ಮಾತನಾಡಿ, ಮಾದೇಗೌಡ ಸೇರ್ಪಡೆಯ ಬಗ್ಗೆ ಚಾಮುಂಡೇಶ್ವರಿ ಕ್ಷೇತ್ರದ ಯಾವ ಕಾರ್ಯಕರ್ತರು ಅಥವಾ ಮುಖಂಡರಿಗೂ ಮಾಹಿತಿ ಇಲ್ಲ. ಸ್ವತಃ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪಕ್ಷಕ್ಕೆ ಸೇರಿಸಿಕೊಳ್ಳುವುದು ಬೇಡ ಎಂದಿದ್ದಾರೆ. ಹೀಗಿದ್ದರೂ ಮಾಜಿ ಸಚಿವ ಸಾ.ರಾ. ಮಹೇಶ್ ಅವರು ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಸಿದ್ದಾರೆ. ಇದರ ಹಿಂದಿನ ಉದ್ದೇಶವೇನು? ಕ್ಷೇತ್ರದಲ್ಲಿ ಚೆನ್ನಾಗಿರುವ ಸಂಘಟನೆಯಲ್ಲಿ ಒಡಕು ಮೂಡಿಸುವುದು ನಿಮ್ಮ ಉದ್ದೇಶವೇ ಎಂದು ಪ್ರಶ್ನಿಸಿದರು.ಮುಖಂಡ ಉದ್ಬೂರು ಮಹದೇವಸ್ವಾಮಿ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರಕ್ಕೂ ಸಾ.ರಾ. ಮಹೇಶ್ ಅವರಿಗೂ ಏನು ಸಂಬಂಧ? ಯಾರ ಅನುಮತಿ ಪಡೆದು ಚಾಮುಂಡೇಶ್ವರಿ ಕ್ಷೇತ್ರದ ವಿಚಾರಕ್ಕೆ ಹಸ್ತಕ್ಷೇಪ ಮಾಡುತ್ತಿದ್ದೀರಿ ? ನಾವೆಲ್ಲರೂ ದಶಕಗಳಿಂದ ನಿರಂತರವಾಗಿ ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದೇವೆ. ನಿಮಗೆ ಬೇಕಾದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಗುಂಪುಗಾರಿಕೆ ಮಾಡಲು ಬರಬೇಡಿ ಎಂದು ಸಲಹೆ ನೀಡಿದರು.
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕ ಬೋಗಾದಿ ಚಂದ್ರಶೇಖರ್ ಮಾತನಾಡಿ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಜನರೊಂದಿಗೆ ಜನತಾದಳ ಕಾರ್ಯಕ್ರಮ ಯಶಸ್ವಿಯಾಗಲು ಶಾಸಕ ಜಿ.ಡಿ. ಹರೀಶ್ ಗೌಡ ನೇರ ಕಾರಣ. ಕ್ಷೇತ್ರಾದ್ಯಂತ ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಿರುವ ನಾಯಕ ಯಾರು ಎಂಬುದು ವರಿಷ್ಠರಿಗೂ ಗೊತ್ತಿದೆ. ಕಾರ್ಯಕರ್ತರು ಹಾಗೂ ಮುಖಂಡರ ಅಭಿಪ್ರಾಯಕ್ಕೆ ವಿರುದ್ಧವಾಗಿ ಮಾಜಿ ಸಚಿವ ಸಾ.ರಾ. ಮಹೇಶ್ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.ನಮ್ಮ ಪಾಲಿಗೆ ಎಚ್.ಡಿ. ಕುಮಾರಸ್ವಾಮಿ ಅವರೇ ರಾಜ್ಯದ ನಾಯಕರು. ಅವರ ಮಾತಿಗೆ ಎಲ್ಲರೂ ಬದ್ಧರಾಗಿದ್ದೇವೆ. ಸಾ.ರಾ. ಮಹೇಶ್ ಅವರು ಕೆ.ಆರ್. ನಗರ ಕ್ಷೇತ್ರಕ್ಕೆ ಸೀಮಿತವಾಗಿದ್ದರೆ ಒಳ್ಳೆಯದು, ಮಾದೇಗೌಡ ಅವರ ಸೇರ್ಪಡೆ ಪಕ್ಷ ಸಂಘಟನೆ ಮಾಡುವ ಬದಲು ಪಕ್ಷದಲ್ಲಿ ಆಂತರಿಕವಾಗಿ ಗೊಂದಲ ಸೃಷ್ಟಿಸುವ ನಡೆಯಾಗಿದೆ. ಈ ಬಗ್ಗೆ ವರಿಷ್ಠರಾದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ದೂರು ಸಲ್ಲಿಸುತ್ತೇವೆ ಎಂದು ಮುಖಂಡ ಗೆಜ್ಜಗಳ್ಳಿ ಲೋಕೇಶ್ ಹೇಳಿದರು.
ಮುಖಂಡರಾದ ಲಾರಿ ಸೋಮಣ್ಣ, ಸುರೇಶ್, ಹೂಟಗಳ್ಳಿ ಸುರೇಶ್, ಗೋಪಾಲಪುರ ಬಸವಣ್ಣ, ವಕೀಲ ಸಿದ್ದರಾಜು, ಬೋಗಾದಿ ಆನಂದ್, ಮಂಜು, ಶಶಿ ಬೋಗಾದಿ, ಹೆಚ್ಚಗಳ್ಳಿ ರವಿ, ಕೇಬಲ್ ರವಿ, ಲೋಕೇಶ್ ಚಾಮುಂಡಿಬೆಟ್ಟ, ಬೆಳವಾಡಿ ದೇವರಾಜು, ಮಧು ನಾಡನಹಳ್ಳಿ ಇದ್ದರು.