ದಲಿತರಿಗೆ ರಕ್ಷಣೆ ನೀಡುವಂತೆ ಮುಖಂಡರ ಒತ್ತಾಯ

| Published : Oct 05 2025, 01:00 AM IST

ಸಾರಾಂಶ

ಆರೋಪಿಗಳಿಗೆ ಶ್ರೀನಿವಾಸಸಂದ್ರ ರಾಜಕೀಯ ಮುಖಂಡ ಷಣ್ಮುಗಂ ಹಾಗೂ ಮೂರ್ತಿ ರಕ್ಷಣೆ ನೀಡುತ್ತಿದ್ದು ಅವರ ಕುಮ್ಮಕ್ಕಿನಿಂದ ಇದುವರೆಗೂ ಆರೋಪಿಗಳ ಬಂದನವಾಗಿಲ್ಲ,

ಬೇತಮಂಗಲ: ತಾಲೂಕಿನಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಹ ಪರಿಸ್ಥಿತಿ ಇದ್ದು ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಆಗ್ರಹಿಸಿದರು. ಕ್ಯಾಸಂಬಳ್ಳಿ ಪೊಲೀಸ್ ಠಾಣೆ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ದಲಿತ ಮುಖಂಡ ವೆಂಕಟರಾಮ್, ಶ್ರೀನಿವಾಸಸಂದ್ರ ಗ್ರಾಪಂ ವ್ಯಾಪ್ತಿಗೆ ಒಳಪಡುವ ಬೆನ್ನವಾರ ಮಣಿ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಅದೇ ಗ್ರಾಮದ ನಿವಾಸಿಗಳಾದ ಮಣಿಕಂಠ ಹಾಗೂ ಬಾಬು ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದು, ಈ ಕುರಿತು ಕ್ಯಾಸಂಬಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ, ಆರೋಪಿಗಳಿಗೆ ಶ್ರೀನಿವಾಸಸಂದ್ರ ರಾಜಕೀಯ ಮುಖಂಡ ಷಣ್ಮುಗಂ ಹಾಗೂ ಮೂರ್ತಿ ರಕ್ಷಣೆ ನೀಡುತ್ತಿದ್ದು ಅವರ ಕುಮ್ಮಕ್ಕಿನಿಂದ ಇದುವರೆಗೂ ಆರೋಪಿಗಳ ಬಂದನವಾಗಿಲ್ಲ, ಷಣ್ಮುಗಂ ಹಾಗೂ ಮೂರ್ತಿ ಎಂಬುವರು ದಲಿತರ ಮೇಲೆ ಹಲ್ಲೆಗೆ ಪ್ರೇರಣೆ ನೀಡುತ್ತಿದ್ದಾರೆ. ತಾಲೂಕಿನಲ್ಲಿ ದಲಿತ ಕುಟುಂಬಗಳಿಗೆ ರಕ್ಷಣೆ ನೀಡಬೇಕು. ಉಳ್ಳವರು ಬಡ ದಲಿತ ಕುಟುಂಬಗಳ ಮೇಲೆ ನಡೆಸುತ್ತಿರುವ ದೌರ್ಜನ್ಯಗಳ ವಿರುದ್ಧ ಇನ್ನು ಮುಂದೆ ಎಲ್ಲಾ ದಲಿತ ಪರ ಸಂಘಟನೆಗಳು ಹೋರಾಟ ನಡೆಸಲಿವೆ ಎಂದು ಹೇಳಿದರು. ದಲಿತ ಮುಖಂಡರಾದ ದಳವಾಯಿ ಹೊಸಹಳ್ಳಿ ಸುಬ್ಬರಾಯಪ್ಪ, ಸುಬ್ರಮಣಿ, ರಾಮಚಂದ್ರಪ್ಪ, ವೇಣುಗೋಪಾಲ್, ವಿದ್ಯಾಧರ್, ಸತೀಶ್, ಕಮಲ್ ಹಾಸನ್, ಸತ್ಯರಾಜ್, ವಿಜಯಕುಮಾರ್, ಹರೀಶ್ ಇದ್ದರು.