ಸಾರಾಂಶ
ಮದ್ದೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ತೊಡೆತಟ್ಟಿ ಬೇರೆ ಪಕ್ಷಕ್ಕೆ ವಲಸೆ ಹೋಗಿದ್ದ ನಾಯಕರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ. ಈ ಬಗ್ಗೆ ನನಗೆ ಯಾವುದೇ ದ್ವೇಷ ಅಥವಾ ಬೇಸರ ಇಲ್ಲ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಆತ್ಮೀಯತೆಯಿಂದ ನೋಡಿಕೊಳ್ಳುತ್ತೇನೆ ಎಂದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.
ಪಟ್ಟಣದ ಶಿವಪುರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸಂಜೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ ಮತ್ತು ಬೆಂಬಲಿಗರನ್ನು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿದ ನಂತರ ಮಾತನಾಡಿದರು.
ಚುನಾವಣೆಯಲ್ಲಿ ಹಲವು ನಾಯಕರು ನನ್ನ ವಿರುದ್ಧ ಅಪಪ್ರಚಾರ ನಡೆಸಿ ಅವರ ನಾಯಕರ ನಿಷ್ಠೆಯಿಂದ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದರು. ಹೀಗಾಗಿ ಅವರು ನನ್ನ ವಿರೋಧಿಗಳು ಎಂದು ಭಾವಿಸಿಲ್ಲ ಎಂದರು.
ಕೆಲವೊಂದು ಸಂದರ್ಭದಲ್ಲಿ ಮಿತ್ರತ್ವಕ್ಕೆ ಮತ್ತು ಬಾಂಧವ್ಯಕ್ಕೆ ಕಟ್ಟುಬಿದ್ದು ಸಂದರ್ಶ ಕಾಂಗ್ರೆಸ್ ತೊರೆಯುವ ನಿರ್ಧಾರ ತೆಗೆದುಕೊಂಡು ಜೆಡಿಎಸ್ ಸೇರಿದ್ದರು. ಈಗ ಅವರಿಗೆ ತಮ್ಮ ತಪ್ಪಿನ ಅರಿವಾಗಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಬಾವುಟ ಸ್ವೀಕರಿಸಿ ಮಾತನಾಡಿದ ಸಂದರ್ಶ, ನಾನು ಮೂಲತಃ ಕಾಂಗ್ರೆಸ್ಸಿಗ. ನಾನು ರಾಜಕೀಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದು ಕಾಂಗ್ರೆಸ್ ಪಕ್ಷದಿಂದಲೇ. ಕೆಲವೊಂದು ರಾಜಕೀಯ ಸ್ಥಿತ್ಯಂತರದಿಂದಾಗಿ ಕಳೆದೆರಡು ವರ್ಷಗಳ ಹಿಂದೆ ಜೆಡಿಎಸ್ ಸೇರ್ಪಡೆಗೊಂಡಿದ್ದೆ ಎಂದರು.
ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಹಾಗೂ ಶಾಸಕ ಕೆ.ಎಂ. ಉದಯ್ ಅವರ ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚಿ ಅವರ ಜೊತೆ ಮದ್ದೂರು ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಬೇಕೆಂಬ ಉದ್ದೇಶದಿಂದ ನನ್ನ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದ್ದೇನೆ ಎಂದು ತಿಳಿಸಿದರು.
ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಾಸಕ ಉದಯ್ ರೊಂದಿಗೆ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುವ ಮೂಲಕ ಅವರು ನೀಡುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವುದಾಗಿ ಸಂದರ್ಶ ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ. ಚೆಲುವರಾಜು, ಭಾರತಿ ನಗರ ಬ್ಲಾಕ್ ಅಧ್ಯಕ್ಷ ಅಣ್ಣೂರು ರಾಜೀವ್. ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಪುರಸಭೆ ಉಪಾಧ್ಯಕ್ಷ ಟಿ. ಆರ್.ಪ್ರಸನ್ನ ಕುಮಾರ್, ಮುಖಂಡ ಸಿ.ಟಿ.ಶಂಕರ್ ಸೇರಿ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))