ಶುಂಠಿ ಬೆಳೆಗಾರರನ್ನು ಕಾಡುತ್ತಿರುವ ಎಲೆಚುಕ್ಕೆ ರೋಗ

| Published : Jul 25 2025, 12:31 AM IST

ಸಾರಾಂಶ

ಸೂಕ್ತ ಸಮಯದಲ್ಲಿ ಸರಿಯಾದ ನಿರ್ವಹಣಾ ಕ್ರಮ ತೆಗೆದುಕೊಳ್ಳದಿದ್ದರೆ 2-3 ವಾರಗಳೊಳಗೆ ಬೆಳೆ ಸಂಪೂರ್ಣ ಒಣಗಿಬಿಡುತ್ತದೆ.

ದೇವರಾಜು ಕಪ್ಪಸೋಗೆಕನ್ನಡಪ್ರಭ ವಾರ್ತೆ ಚಾಮರಾಜನಗರಕಳೆದ ವರ್ಷ ಆಗಸ್ಟ್- ಸೆಪ್ಟೆಂಬರ್‌ನಲ್ಲಿ ಕುಶಾಲನಗರದ ಕೆಲವೇ ಕಡೆ ಕಾಣಿಸಿಕೊಂಡಿದ್ದ ಬೆಂಕಿ ರೋಗ, ಈ ವರ್ಷ ಕೊಡಗು, ಹಾಸನ, ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲೆಯ ಅನೇಕ ಕಡೆ ವ್ಯಾಪಕವಾಗಿ ಕಾಣಿಸಿಕೊಂಡು ಶುಂಠಿ ಬೆಳೆಯನ್ನು ಹಲವೆಡೆ ಬಾಧಿಸಿದೆ.ಸೂಕ್ತ ಸಮಯದಲ್ಲಿ ಸರಿಯಾದ ನಿರ್ವಹಣಾ ಕ್ರಮ ತೆಗೆದುಕೊಳ್ಳದಿದ್ದರೆ 2-3 ವಾರಗಳೊಳಗೆ ಬೆಳೆ ಸಂಪೂರ್ಣ ಒಣಗಿಬಿಡುತ್ತದೆ. ಈ ವರ್ಷ ಮಳೆ ಕಳೆದ ಸಲಕ್ಕಿಂತ ಮುನ್ನವೇ ಪ್ರಾರಂಭವಾಗಿದೆ. ಬಹಳಷ್ಟು ಕಡೆ ಹೆಚ್ಚಿನ ಮಳೆ ಮೇನಿಂದ ಇಲ್ಲಿಯವರೆವಿಗೂ ಬರುತ್ತಲೇ ಇದೆ. ಇದು ರೋಗ ಉಲ್ಬಣವಾಗಲು ಪ್ರಮುಖ ಕಾರಣ. ತ್ವರಿತವಾಗಿ ರೋಗ ಹರಡಲು ಮತ್ತಷ್ಟು ಪೂರಕ ಅಂಶಗಳೆಂದರೆ ಮೋಡ, ತಗ್ಗಿದ ಉಷ್ಣಾಂಶ, ತುಂತುರು ಮಳೆ, ಮೋಡ ಮುಸುಕಿದ ವಾತಾವರಣ, ಕಡಿಮೆ ಬಿಸಿಲು, ಮಣ್ಣಿನಲ್ಲಿ ಹೆಚ್ಚಿರುವ ತೇವಾಂಶ, ಸೂಕ್ತ ಬಸಿಗಾಲುವೆ ಇಲ್ಲದಿರುವುದು ಹಾಗೂ ವೇಗವಾಗಿ ಬೀಸುವ ಗಾಳಿ ಪ್ರಮುಖ ಕಾರಣವಾಗಿದೆ. ರೈತರು ಇದಕ್ಕೆ ಬೆಂಕಿ ರೋಗ, ದೊಮ್ಮೆ ರೋಗ ಮುಂತಾದ ಹೆಸರುಗಳಿಂದ ಕರೆಯುತ್ತಿದ್ದಾರೆ. ತೆಂಗಿನ ತೋಟಗಳಲ್ಲಿ ಶುಂಠಿ ಬೆಳೆದಿರುವ ಕಡೆ ರೋಗ ಹೆಚ್ಚು ಉಲ್ಬಣವಾಗಿರುವುದನ್ನು ಅರಿತು ಬಾಗಲಕೋಟೆ ತೋಟಗಾರಿಕೆ ವಿವಿ ಸಮೀಕ್ಷಾ ತಂಡ ರಚಿಸಿ, ಜುಲೈ ಮೂರನೇ ವಾರ ಕೊಡುಗು, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸರ್ವೇಕ್ಷಣೆ ನಡೆಸುವಾಗ ತಿಳಿದುಬಂದಿದೆ. ಇದು ಯಾವುದೇ ವೈರಸ್‌ (ನಂಜಾಣು) ನಿಂದ ಬಂದಿರುವ ರೋಗವಲ್ಲ. ಬದಲಾಗಿ ಇದು ಶಿಲೀಂಧ್ರ ಮೂಲದ ರೋಗವಾಗಿದೆಎಂದು ತಜ್ಞರು ದೃಢಪಡಿಸಿದ್ದಾರೆ.

ಯಾವ ಯಾವ ಶಿಲೀಂಧ್ರಗಳು ಈ ಎಲೆಚುಕ್ಕೆ ರೋಗಕ್ಕೆ ಕಾರಣ?

ಶುಂಠಿಗೆ ಎಲೆಚುಕ್ಕೆ ರೋಗ ಹೊಸದೇನಲ್ಲ. ಆದರೆ ಇಷ್ಟು ತೀವ್ರವಾಗಿ ಈ ಮೊದಲು ಬರುತ್ತಿರಲಿಲ್ಲ ಹಾಗೂ ಸುಲಭವಾಗಿ ನಿರ್ವಹಿಸಬಹುದಿತ್ತು. ಈ ಹಂಗಾಮಿನಲ್ಲೂ ತೋವಿವಿಯ ಸರ್ವೇಕ್ಷಣೆಯ ಪ್ರಕಾರ ವಿವಿಧ ರೀತಿಯ ಶಿಲೀಂಧ್ರ (ಫಂಗಸ್)ಗಳು ಕಾಣಿಸಿಕೊಂಡಿವೆ. ಅವುಗಳಲ್ಲಿ ಪ್ರಮುಖವಾಗಿ ಪೈರಿಕ್ಯುಲೇರಿಯಾ (ಭತ್ತದ ಬೆಂಕಿ ರೋಗಕ್ಕೆ ಕಾರಣವಾದ ಶಿಲೀಂಧ್ರದ ಜಾತಿಗೆ ಸೇರಿದ್ದು), ಫಿಲ್ಲೋಸ್ಟಿಕ್ಟ ಹಾಗೂ ಕೊಲ್ಲೆಟೋಟ್ರೈಕಂ ಬಗೆಗಳು. ಇವುಗಳ ಪೈಕಿ ಪೈರಿಕ್ಯುಲೇರಿಯಾ ಅತಿ ಶೀಘ್ರವಾಗಿ ಹರಡುವ ರೋಗಾಣುವಾಗಿದೆ. ತೋವಿವಿಯು ಸರ್ವೇಕ್ಷಣೆ ನಡೆಸಿದ ಕೊಡಗು (ಕುಶಾಲನಗರ) ಮೈಸೂರು (ಪಿರಿಯಾಪಟ್ಟಣ, ಹುಣಸೂರು) ಮತ್ತು ಹಾಸನ (ಅರಕಲಗೂಡು) ಜಿಲ್ಲೆಗಳಲ್ಲಿನ ಶುಂಠಿ ತಾಕುಗಳಲ್ಲಿ ಈ ರೋಗ ಲಕ್ಷಣಗಳು ಮತ್ತು ರೋಗಾಣುಗಳು ಕಂಡು ಬಂದಿವೆ.

ನಿರಂತರ ಮಳೆಯಿಂದಾಗಿ ರೋಗ ನಿಯಂತ್ರಣಕ್ಕೆ ಅಡ್ಡಿ:ನಿರಂತರ ಮಳೆಯಿಂದಾಗಿ ಬಳಸುತ್ತಿರುವ ಔಷಧಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಶಿಫಾರಸ್ಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚು ಅಥವಾ ಕಡಿಮೆ ಪ್ರಮಾಣದ ಔಷಧಗಳ ಬಳಕೆ ರೋಗವನ್ನು ನಿಯಂತ್ರಿಸುವಲ್ಲಿ ಪ್ರಮುಖ ತೊಡಕಾಗಿವೆ.ರೈತರು ರೋಗಕ್ಕೆ ಹೆದರಿ ಶಿಲೀಂಧ್ರನಾಶಕಗಳ ಜೊತೆ ಬೆಳೆ ಉತ್ತೇಜಕಗಳು, ಹಾರ್ಮೋನುಗಳು, ಅಮೈನೋ ಆಮ್ಲ, ಕಡಲಪಾಚಿ ಆಧಾರಿತ ಉತ್ಪನ್ನಗಳನ್ನು ಅರಿವಿಲ್ಲದೆಯೇ ಒಮ್ಮೆಗೆ ನಾಲ್ಕಾರು ಉತ್ಪನ್ನಗಳನ್ನು ಬಳಸುವುದರಿಂದ ರೋಗ ನಿಯಂತ್ರಣಕ್ಕೆ ಬರುವುದಿಲ್ಲ. ಈ ನಿಟ್ಟಿನಲ್ಲಿ ತಜ್ಞರ ಸಲಹೆ ಪಡೆದು ಸೂಕ್ತ ಔಷಧವನ್ನು ಕಾಲಕಾಲಕ್ಕೆ ಸರಿಯಾದ ಪ್ರಮಾಣದಲ್ಲಿ ಸಿಂಪಡಣೆ ಮಾಡಿದರೆ ರೋಗವನ್ನು ಹತೋಟಿಗೆ ತರಬಹುದು ಎನ್ನುತ್ತಾರೆ ತೋಟಗಾರಿಕೆ ವಿವಿ ಸಹಾಯಕ ಪ್ರಾಧ್ಯಾಪಕ ಹಾಗೂ ಶುಂಠಿ ರೋಗ ಸಮೀಕ್ಷಾ ತಂಡದ ಸದಸ್ಯ ಸಂಚಾಲಕ ಡಾ.ಬಿ.ಎಸ್‌. ಹರೀಶ್‌.

ನಿರ್ವಹಣೆ ಹೇಗೆ?

ರೋಗ ಬರುವ ಮೊದಲು ಶೇ. 1ರ ಬೋರ್ಡೋ ದ್ರಾವಣ, ಮ್ಯಾಂಕೋಝೆಬ್‌ (2 ಗ್ರಾಂ ಪ್ರತಿ ಲೀಟರ್‌ ನೀರಿಗೆ) ಅಥವಾ ತಾಮ್ರದ ಆಕ್ಸಿ ಕ್ಲೋರೈಡ್‌ (3 ಗ್ರಾಂ ಪ್ರತಿ ಲೀಟರ್‌ ನೀರಿಗೆ) ಗಳನ್ನು 12-15 ದಿನಗಳ ಅಂತರದಲ್ಲಿ ಸಿಲಿಕಾನ್‌ ಆಧಾರಿತ ಅಂಟು (ಗಮ್) ಸೇರಿಸಿ ಸಿಂಪಡಿಸಬೇಕು. ಈಗಾಗಲೇ ರೋಗ ಬಂದಿರುವ ಕಡೆ ಮಳೆ ಇಲ್ಲದಿರುವಾಗ (ಕನಿಷ್ಟ 4-5 ಗಂಟೆ) ಪ್ರೋಪಿಕೋನಝೋಲ್‌ 25 ಇ.ಸಿ. (1 ಮಿಲೀ ಪ್ರತಿ ಲೀಟರ್‌ ನೀರಿಗೆ) ಅಥವಾ ಹೆಕ್ಸಾಕೋನಝೋಲ್‌ 5 ಇ.ಸಿ. (1 ಮಿಲೀ ಪ್ರತಿ ಲೀಟರ್‌ ನೀರಿಗೆ) ಅಥವಾ ಟೆಬುಕೋನಝೋಲ್‌ 38.39 ಎಸ್‌ಸಿ (1 ಮಿಲೀ ಪ್ರತಿ ಲೀಟರ್‌ ನೀರಿಗೆ) ಅಂತರ್ವ್ಯಾಪಿ ಶಿಲೀಂಧ್ರನಾಶಕಗಳನ್ನು ಅಥವಾ ಕಾರ್ಬೆಂಡೈಝಿಂ ಶೇ. 12 + ಮ್ಯಾಂಕೋಝೆಬ್‌ ಶೇ. 63 (2 ಗ್ರಾಂ ಪ್ರತಿ ಲೀಟರ್‌ ನೀರಿಗೆ) 8-10 ದಿನಗಳ ಅಂತರದಲ್ಲಿ ಉತ್ತಮ ಗುಣಮಟ್ಟದ ಅಂಟು ಬೆರೆಸಿ ಸಿಂಪಡಿಸಬೇಕು.

ಮುಂದುವರೆದು, ಬಹಳಷ್ಟು ಕೃಷಿಕರು ರೋಗ ಬಂದ ನಂತರ ಟೆಬುಕೋನಝೋಲ್‌ 50 % + ಟ್ರೈಫ್ಲಾಕ್ಸಿಸ್ಟ್ರಾಬಿನ್‌ 25 % ಡಬ್ಲ್ಯೂಜಿ ಸಿಂಪಡಿಸಿ ಉತ್ತಮ ಫಲಿತಾಂಶ ಪಡೆದಿರುವುದು ತಜ್ಞರ ಗಮನಕ್ಕೆ ಬಂದಿದ್ದು ಇದನ್ನು ಸಂಶೋಧನೆಯಿಂದ ದೃಢಪಡಿಸಬೇಕಿದೆ. ಆದಾಗ್ಯೂ ಸ್ಟ್ರಾಬುಲಿನ್‌ ಗುಂಪಿಗೆ ಸೇರಿರುವ ಶಿಲೀಂಧ್ರನಾಶಕಗಳನ್ನು ಪದೇ ಪದೇ ಬಳಕೆ ಮಾಡುವುದರಿಂದ ರೋಗಾಣು ಅಂತಹ ಶಿಲೀಂಧ್ರನಾಶಕಗಳಿಗೆ ಪ್ರತಿರೋಧಕ ಶಕ್ತಿ ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚಿರುವ ಕಾರಣ ಅವುಗಳ ಪುನರಾವರ್ತಿತ ಬಳಕೆ ಮಾಡದಿರಲು ತಿಳಿಸಲಾಗಿದೆ.

--------------ರೋಗದ ತೀವ್ರತೆಯನ್ನು ಮನಗಂಡಿರುವ ತೋವಿವಿಯು ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಶೋಧನೆಯನ್ನು ನಡೆಸಿ ಸೂಕ್ತ ಮತ್ತು ಸಮಗ್ರ ನಿರ್ವಹಣಾ ಕ್ರಮಗಳನ್ನು ಅಭಿವೃದ್ಧಿಪಡಿಸಲಿದೆ. ಅಷ್ಟೇ ಅಲ್ಲದೆ ಶುಂಠಿ ಕೃಷಿಕರಿಗೆ ಅವಶ್ಯವಿರುವ ತರಬೇತಿ ಕಾರ್ಯಕ್ರಮಗಳನ್ನೂ ಆಯೋಜಿಸಲಿದೆ.ಡಾ. ಜಗದೀಶ್‌ ಎಸ್‌ ಎಲ್‌, ತೋವಿವಿಯ ದಕ್ಷಿಣವಲಯದ ಸಹ-ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ---- ಚಿತ್ರಗಳನ್ನು ಕಳುಹಿಸಲಾಗಿದೆ.