Leaf spot, yellow leaf disease: Chautala appeals for urgent response

ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದ ಸಾವಿರಾರು ಅಡಕೆ ಬೆಳೆಗಾರರಿಗೆ ತೀವ್ರ ಆತಂಕ ತಂದೊಡ್ಡಿರುವ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗ ಸಮಸ್ಯೆಗೆ ತುರ್ತು ಪರಿಹಾರ ಕ್ರಮ ಕೈಗೊಳ್ಳುವಂತೆ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಸಲ್ಲಿಸಿದ್ದಾರೆ.ರಾಜ್ಯದ ಪ್ರಮುಖ ಅಡಕೆ ಬೆಳೆಯುವ ಪ್ರದೇಶಗಳಲ್ಲಿ ಈ ರೋಗಗಳ ವ್ಯಾಪಕ ಹರಡುವಿಕೆಯಿಂದಾಗಿ ರೈತರು ಎದುರಿಸುತ್ತಿರುವ ಗಂಭೀರ ಆರ್ಥಿಕ ಮತ್ತು ಕೃಷಿ ಸಮಸ್ಯೆಗಳನ್ನು ಕ್ಯಾ. ಬ್ರಿಜೇಶ್ ಚೌಟ ಅವರು ವಿವರವಾಗಿ ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.

ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಹಳದಿ ಎಲೆ ರೋಗ ಪ್ರಸ್ತುತ ಸುಮಾರು 16,000 ಹೆಕ್ಟೇರ್ ಪ್ರದೇಶವನ್ನು ಬಾಧಿಸಿದ್ದು, ಇದು ಲಕ್ಷಾಂತರ ರೈತರ ಆರ್ಥಿಕ ಪರಿಸ್ಥಿತಿಯನ್ನು ಹದಗೆಡುವಂತೆ ಮಾಡಿದೆ. ರೋಗಕ್ಕೆ ಕಾರಣವಾಗಿರುವ ಫೈಟೋಪ್ಲಾಸ್ಮಾ ಸೋಂಕು ನಿರ್ಮೂಲನೆಗೆ ಕ್ರಮಗಳಿಲ್ಲ. ಐಸಿಎಆರ್-ಸೆಂಟ್ರಲ್ ಪ್ಲಾಂಟೇಷನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿರುವ ನಿರ್ವಹಣಾ ವಿಧಾನಗಳೇ ಬಾಧಿತ ಬೆಳೆಗಾರರ ಪಾಲಿನ ಏಕೈಕ ಆಶಾಕಿರಣವಾಗಿದೆ.

ಇಂತಹ ಸವಾಲಿನ ಪರಿಸ್ಥಿತಿಯಲ್ಲಿ ಸಿಪಿಸಿಆರ್‌ಐ ಸಂಸ್ಥೆಯು ಗಮನಾರ್ಹ ಪ್ರಗತಿ ಸಾಧಿಸಿರುವುದು ಶ್ಲಾಘನೀಯ. ಇದಕ್ಕೆ ಪೂರಕವಾಗಿ ವಿಟ್ಲದಲ್ಲಿ ಅತ್ಯಾಧುನಿಕ ರೋಗನಿರ್ಣಯ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಹಳದಿ ಎಲೆ ರೋಗವನ್ನು ತಡೆದುಕೊಳ್ಳುವ ಸಾಮರ್ಥ್ಯವಿರುವ ಗಿಡಗಳ ಅಂಗಾಂಶ ಕೃಷಿ ತಂತ್ರಜ್ಞಾನದ ಮೂಲಕ ಯಶಸ್ವಿ ಮರುಸೃಷ್ಟಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಹಳದಿ ರೋಗ ನಿಯಂತ್ರಣಕ್ಕೆ ಸುಧಾರಿತ ತಂತ್ರಜ್ಞಾನಗಳು, ಹೈಟೆಕ್ ನೀರಾವರಿ ವ್ಯವಸ್ಥೆ ಮತ್ತು ಸಮತೋಲಿತ ಪೋಷಕಾಂಶ ನಿರ್ವಹಣಾ ಪದ್ಧತಿಗಳನ್ನು ರೈತರು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ಭಾರಿ ಸಾಂಸ್ಥಿಕ ಹಾಗೂ ಆರ್ಥಿಕ ನೆರವಿನ ಅಗತ್ಯವಿದೆ. ಆದ್ದರಿಂದ ಬಾಧಿತ ರೈತರಿಗೆ ನೆರವಾಗಲು ಸಮಗ್ರ ಬೆಂಬಲ ಪ್ಯಾಕೇಜ್ ಘೋಷಿಸಬೇಕು ಎಂದು ಅವರು ಸಚಿವರಲ್ಲಿ ಮನವಿ ಮಾಡಿದ್ದಾರೆ.ಹಿಂದಿನ ಅನುದಾನ ವಾಪಸ್‌: ಇದರ ಜೊತೆಗೆ ದಕ್ಷಿಣ ಕನ್ನಡ ಹಾಗೂ ಒಟ್ಟಾರೆ ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಎಲೆ ಚುಕ್ಕಿ ರೋಗ ನಿಯಂತ್ರಣದ ಕುರಿತಂತೆ ಸಂಸದರು ಕೃಷಿ ಸಚಿವರ ಗಮನಕ್ಕೆ ತಂದಿದ್ದಾರೆ.

ಎಲೆ ಚುಕ್ಕಿ ರೋಗಕ್ಕೆ ಮಾತ್ರ ಅನ್ವಯವಾಗುವಂತೆ ಸಾಮಾನ್ಯ ಎಂಐಡಿಎಚ್ ವೆಚ್ಚದ ಮಿತಿಯಿಂದ ವಿಶೇಷ ವಿನಾಯಿತಿ ನೀಡಿ ಈ ಹಿಂದೆ ಬಿಡುಗಡೆಗೊಂಡಿದ್ದ ಅನುದಾನವನ್ನು ಮರುಬಿಡುಗಡೆ ಮಾಡಲು ತುರ್ತಾಗಿ ಮಧ್ಯಪ್ರವೇಶಿಸಬೇಕು. ಸಿಪಿಸಿಆರ್‌ಐ ಶಿಫಾರಸು ಮಾಡಿದ ನಿಜವಾದ ವೆಚ್ಚಕ್ಕೆ ಅನುಗುಣವಾಗಿ ಆರ್ಥಿಕ ಸಹಾಯವನ್ನು ಒದಗಿಸುವುದು ರೋಗ ನಿಯಂತ್ರಣ ಕಾರ್ಯಕ್ರಮದ ಯಶಸ್ಸಿಗೆ ಮತ್ತು ಅಡಿಕೆ ವಲಯದ ಉಳಿವಿಗೆ ಅತ್ಯಂತ ಅತ್ಯಗತ್ಯವಾಗಿದೆ ಎಂದು ಕ್ಯಾ. ಬ್ರಿಜೇಶ್ ಚೌಟ ಕೃಷಿ ಸಚಿವರಿಗೆ ಮನವಿ ಮಾಡಿದ್ದಾರೆ.ಕೇಂದ್ರ ಕೃಷಿ ಸಚಿವರಿಗೆ ಮಂಗಳೂರಿಗೆ ಆಹ್ವಾನ: ಕರಾವಳಿ ಕರ್ನಾಟಕದ ಆರ್ಥಿಕತೆಯಲ್ಲಿ ಅಡಕೆ ಕೃಷಿಯ ಪ್ರಾಮುಖ್ಯತೆಯನ್ನು ಮನಗಂಡು, ರೈತ ಸಮುದಾಯದಲ್ಲಿ ಮೂಡಿರುವ ತೀವ್ರ ಆತಂಕವನ್ನು ಪರಿಗಣಿಸಿ, ಇಲ್ಲಿರುವ ವಾಸ್ತವಿಕ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲು ಆದಷ್ಟು ಬೇಗ ಮಂಗಳೂರಿಗೆ ಭೇಟಿ ನೀಡುವಂತೆ ಸಂಸದರು ಕೇಂದ್ರ ಕೃಷಿ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕೇಂದ್ರ ಕೃಷಿ ಸಚಿವಾಲಯ, ಐಸಿಎಆರ್, ಸಿಪಿಸಿಆರ್‌ಐ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳ ಸಮನ್ವಯದೊಂದಿಗೆ ಜಂಟಿ ಕ್ರಮ ಕೈಗೊಂಡು, ವಿಜ್ಞಾನಿಗಳು ಮತ್ತು ತೊಂದರೆಗೊಳಗಾದ ರೈತರೊಂದಿಗೆ ಸಂವಾದ ನಡೆಸುವುದರಿಂದ ಈ ಸಮಸ್ಯೆಯ ಕುರಿತು ವಾಸ್ತವಿಕ ನಿಖರ ಮಾಹಿತಿ ಲಭ್ಯವಾಗಲಿವೆ ಎಂದು ಕ್ಯಾ. ಬ್ರಿಜೇಶ್‌ ಚೌಟ ವಿಶ್ವಾಸ ವ್ಯಕ್ತಪಡಿಸಿದ್ದಾರೆ.