ಸಾರಾಂಶ
ಎಚ್.ಎ.ರಘುನಾಥ್
ಕನ್ನಡಪ್ರಭ ವಾರ್ತೆ ಹಳೆಬೀಡುಹೊಯ್ಸಳರ ಕಾಲದ ಹಳೇಬೀಡಿನ ದ್ವಾರಸಮುದ್ರ ಕೆರೆಗೆ ಶಾಶ್ವತವಾಗಿ ನೀರು ಪೂರೈಸುವ ರಣಘಟ್ಟ ಯೋಜನೆಯಲ್ಲಿ ನಿರ್ಮಾಣವಾಗಿರುವ ಸುರಂಗದ ಒಳಾಂಗಣವನ್ನು ಕಾಂಕ್ರಿಟೀಕರಣ ಮಾಡದಿರುವುದರಿಂದ ಆ ಭಾಗದ ಅಂರ್ತಜಲ ಸೋರಿಕೆಯಾಗಿ ಆ ಭಾಗದ ರೈತರ ಕೊಳವೆಬಾವಿಗಳು ಬತ್ತಿಹೋಗುವ ಆತಂಕ ಎದುರಾಗಿದೆ.
ಈ ಯೋಜನೆ ಕುರಿತಂತೆ ಪುಷ್ಪಗಿರಿ ಶ್ರೀಗಳು ಮಾಧ್ಯಮದೊಂದಿಗೆ ಮಾತನಾಡುತ್ತ, ಇಲ್ಲಿಯ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು ಸುರಂಗದ ಮಾರ್ಗದಲ್ಲಿ ಹೆಚ್ಚಿನ ಅಂತರ್ಜಲ ಬರುತ್ತಿದೆ. ಇದನ್ನು ನೋಡಿದರೆ ಈ ಭಾಗದ ಜಮೀನುಗಳಲ್ಲಿ ಸಂಪೂರ್ಣವಾಗಿ ಅಂತರ್ಜಲ ಕುಸಿಯುತ್ತದೆ. ಹಾಗಾಗಿ ಈ ಸುರಂಗಕ್ಕೆ ಪೂರ್ಣವಾಗಿ ಸಿಮೆಂಟ್ ಕಾಂಕ್ರೀಟ್ ವ್ಯವಸ್ಥೆ ಮಾಡಬೇಕು ಎಂಬುದು ನಮ್ಮ ಬೇಡಿಕೆ. ಈ ಸುರಂಗ ಮತ್ತು ಭೂಮಿಯ ಅಂತರದಿಂದ ೧೫೦ ಅಡಿ ಆಳದಲ್ಲಿ ಕೆಲಸವಾಗುವುದರಿಂದ ಭೂಮಿಯ ಮೇಲ್ಭಾಗದ ನೀರು ಸುರಂಗದೊಳಕ್ಕೆ ಇಳಿಯುತ್ತದೆ. ಇದರಿಂದ ರೈತರ ಕೊಳವೆಬಾವಿಗಳು ನಿಂತು ಹೋಗುವ ಸನ್ನಿವೇಶ ಸೃಷ್ಟಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಬಾಗೂರು ನವಿಲೇ ಸುರಂಗದಲ್ಲೂ ಇದೇ ಅನಾನುಕೂಲವಾಗಿದೆ ಎಂದು ಅಲ್ಲಿನ ರೈತರು ನಮಗೆ ತಿಳಿಸಿದ್ದಾರೆ. ಈ ಕಾಮಗಾರಿಗೆ ಹೆಚ್ಚಿನ ೫೦ ಕೋಟಿ ರು. ಹಣವನ್ನು ತಕ್ಷಣವೇ ಬಿಡುಗಡೆ ಮಾಡಿ ಈ ಕಾಮಗಾರಿಯನ್ನು ಪೂರ್ಣಗೊಳಿಸಿದರೆ ಇಲ್ಲಿಯ ಜನತೆಗೆ ಅನುಕೂಲವಾಗುತ್ತದೆ. ಈ ಸುರಂಗದ ೭೫ ಭಾಗ ಕಲ್ಲಿಂದ ಕೂಡಿದೆ. ಮಧ್ಯೆ ಮಧ್ಯೆ ಕೆಲವೊಂದು ಮಣ್ಣಿನ ಜಾಗ ಸಿಕ್ಕಿದೆ. ಹಾಗಾಗಿ ಆ ಜಾಗದಲ್ಲಿ ಮಣ್ಣು ಕುಸಿಯುವ ಸಂಭವವಿದೆ. ಆದಕಾರಣ ಎಲ್ಲವೂ ಸಂಪೂರ್ಣವಾಗಿ ಸಿಮೆಂಟ್ ಮಾಡಿದರೆ ಇಲ್ಲಿನ ಜನಕ್ಕೆ ಅನುಕೂಲವಾಗುತ್ತದೆ. ನೀರಿನ ಸೋರಿಕೆಯೂ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಕಾಮಗಾರಿಯ ಗುತ್ತಿಗೆ ಪಡೆದಿರುವ ಸಂಸ್ಥೆಯ ವ್ಯವಸ್ಥಾಪಕ ಸೆಬಾಸ್ಟಿಯನ್, ಚಿತ್ರದುರ್ಗ- ಶಿವಮೊಗ್ಗ ಸುರಂಗದಲ್ಲೂ ಸಹ ಇದೇ ರೀತಿಯಲ್ಲಿ ಕಾಂಕ್ರೀಟ್ ಲೈನಿಂಗ್ ನಿರ್ಮಿಸಿದ್ದೇವೆ. ಅದರಿಂದ ನೀರಿನ ಅಂತರ್ಜಲ ಕುಸಿಯುವುದಿಲ್ಲ. ಅಲ್ಲಿಯ ಕೊಳವೆಬಾವಿಗಳಲ್ಲಿ ನೀರಿನ ಅಂಶ ಇರುತ್ತದೆ. ನಮ್ಮ ಸಂಸ್ಥೆಗೆ ರಣಘಟ್ಟ ಯೋಜನೆಯಿಂದ ಒಟ್ಟು ೧೧೫ ಕೋಟಿ ರು. ಹಣದಲ್ಲಿ ೭೯ ಕೋಟಿ ಹಣ ಬಿಡುಗಡೆ ಮಾಡಿದ್ದು, ಅದರ ಕೆಲಸವನ್ನು ಮಾಡುತ್ತಿದ್ದೇವೆ. ಇನ್ನು ೩೬ ಕೋಟಿ ರು. ಹಣ ನಮಗೆ ಬರಬೇಕು ಎಂದಿದ್ದಾರೆ.ಹಾಸನ ಜಿಲ್ಲೆಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ. ಕುಮಾರ್,, ಪುಷ್ಪಗಿರಿ ಶ್ರೀಗಳ ನೇತೃತ್ವದಲ್ಲಿ ಹೋರಾಟದ ಪ್ರತಿಫಲವಾಗಿ ಈ ರಣಘಟ್ಟ ಯೋಜನೆ ಬಂದಿದೆ. ಇದರ ಜತೆಗೆ ಇಂದಿನ ಸುರಂಗದ ನೀರು ಸೋರಿಕೆ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು, ನೀರಾವರಿ ಸಚಿವರು ಹಾಗೂ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳಿಗೆ ನಾವು ರೈತ ಸಂಘದ ಮೂಲಕ ಮನವಿಯನ್ನು ಸ್ವೀಕರಿಸಿ ಇದರ ಕೆಲಸ ಶೀಘ್ರವಾಗಿ ನೆರವೇಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಾರಿ ಹೋರಾಟವನ್ನು ನಡೆಸಲಾಗುವುದು. ಶ್ರೀ ಸೋಮಶೇಖರ ಶಿವಾಚಾರ್ಯರೊಂದಿಗೆ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ರೈತರ ಕಷ್ಟವನ್ನು ಅರಿತು ನೀರಿಗಾಗಿ ಹೋರಾಟ ನಡೆಸಿದ ಪ್ರತಿಫಲವೇ ರಣಘಟ್ಟ ಯೋಜನೆ. ಅದೇ ರೀತಿ ಸುರಂಗದ ಒಳ ಕೆಲಸ ಸಹ ಆಗಬೇಕು ಎಂಬುದೇ ನಮ್ಮ ಉದ್ದೇಶ. ಮುಂದಿನ ದಿನಗಳಲ್ಲಿ ಕೆಲಸವಾಗದಿದ್ದರೆ ಹೋರಾಟ ನಡೆಯುತ್ತದೆ.ಪುಷ್ಪಗಿರಿ ಮಹಾಸಂಸ್ಥಾನದ ಸೋಮಶೇಖರ ಶಿವಾಚಾರ್ಯ.
ರಣಘಟ್ಟ ಯೋಜನೆ ಬಗ್ಗೆ ಪುಷ್ಪಗಿರಿ ಶ್ರೀಗಳ ವಿಚಾರವನ್ನು ಆಲಿಸಿದ್ದೇನೆ. ಮುಂದಿನ ವಿಧಾನಸಭಾ ಅಧಿವೇಶದಲ್ಲಿ ಈ ಬಗ್ಗೆ ಮಾತನಾಡಿ ಇದರ ಕೆಲಸವನ್ನು ಮಾಡಿಸುವುದು ನನ್ನ ಉದ್ದೇಶ, ಅದರ ಜತೆಗೆ ಶ್ರೀಗಳ ಹೋರಾಟದಲ್ಲೂ ನಾನು ಭಾಗಿಯಾಗಿರುತ್ತೇನೆ.ಎಚ್.ಕೆ.ಸುರೇಶ್, ಶಾಸಕ.