ಸೋರುತಿದೆ, ಸೊರಗುತಿದೆ ಮಿನಿವಿಧಾನಸೌಧ!

| Published : Jun 29 2024, 12:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ರಾಮದುರ್ಗ ಒಂದೇ ಸೂರಿನಡಿ ಎಲ್ಲ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿ ಜನರಿಗೆ ಅನುಕೂಲ ಒದಗಿಸುವ ನಿರೀಕ್ಷೆಯಲ್ಲಿ ನಿರ್ಮಾಣಗೊಂಡಡಿರುವ ಮಿನಿ ವಿಧಾನಸೌಧ ಲೋಕಾರ್ಪಣೆಗೆ ಒಂದೂವರೆ ದಶಕ ಕಳೆದಿದೆ. ಆದರೆ, ಇದುವರೆಗೂ ಕಟ್ಟಣ ನಿರ್ಮಾಣ ಮಾಡಿರುವ ಸಂಸ್ಥೆಯಿಂದ ಸಂಬಂಧಿಸಿದ ಇಲಾಖೆಗೆ ಕಟ್ಟಡದ ಹಸ್ತಾಂತರ ಮಾತ್ರ ಇನ್ನೂ ನೆನೆಗುದಿಗೆ ಬಿದ್ದಿದೆ. ಇದರ ಪರಿಣಾಮ ಮಿನಿ ವಿಧಾನಸೌಧದ ನಿರ್ವಹಣೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ದೊಡ್ಡ ಸಮಸ್ಯೆಯಾಗಿದ್ದು, ಕಾರ್ಯನಿರ್ವಹಿಸುತ್ತಿರುವ ಕಂದಾಯ ಇಲಾಖೆಗೆ ನಿರ್ವಹಣೆ ಮಾಡಲಾಗದೇ ಬಾಯೊಳಗಿನ ಬಿಸಿ ತುಪ್ಪ ನುಂಗದಂತಾಗಿದೆ

ಈರಣ್ಣ ಬುಡ್ಡಾಗೋಳ

ಕನ್ನಡಪ್ರಭ ವಾರ್ತೆ ರಾಮದುರ್ಗ

ಒಂದೇ ಸೂರಿನಡಿ ಎಲ್ಲ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿ ಜನರಿಗೆ ಅನುಕೂಲ ಒದಗಿಸುವ ನಿರೀಕ್ಷೆಯಲ್ಲಿ ನಿರ್ಮಾಣಗೊಂಡಡಿರುವ ಮಿನಿ ವಿಧಾನಸೌಧ ಲೋಕಾರ್ಪಣೆಗೆ ಒಂದೂವರೆ ದಶಕ ಕಳೆದಿದೆ. ಆದರೆ, ಇದುವರೆಗೂ ಕಟ್ಟಣ ನಿರ್ಮಾಣ ಮಾಡಿರುವ ಸಂಸ್ಥೆಯಿಂದ ಸಂಬಂಧಿಸಿದ ಇಲಾಖೆಗೆ ಕಟ್ಟಡದ ಹಸ್ತಾಂತರ ಮಾತ್ರ ಇನ್ನೂ ನೆನೆಗುದಿಗೆ ಬಿದ್ದಿದೆ. ಇದರ ಪರಿಣಾಮ ಮಿನಿ ವಿಧಾನಸೌಧದ ನಿರ್ವಹಣೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ದೊಡ್ಡ ಸಮಸ್ಯೆಯಾಗಿದ್ದು, ಕಾರ್ಯನಿರ್ವಹಿಸುತ್ತಿರುವ ಕಂದಾಯ ಇಲಾಖೆಗೆ ನಿರ್ವಹಣೆ ಮಾಡಲಾಗದೇ ಬಾಯೊಳಗಿನ ಬಿಸಿ ತುಪ್ಪ ನುಂಗದಂತಾಗಿದೆ.

2009ರಲ್ಲಿ ₹3 ಕೋಟಿ ವೆಚ್ಚದ ಮಿನಿ ವಿಧಾನ ಸೌಧ ಲೋಕಾರ್ಪಣೆ:

ಬೆಳಗಾವಿ ಜಿಲ್ಲೆಯ ಹಿಂದುಳಿದ ತಾಲೂಕು ರಾಮದುರ್ಗದ ಮಿನಿ ವಿಧಾನಸೌಧ ಕಟ್ಟಡದ ಒಂದೂವರೆ ದಶಕದ ಕಥೆ ಇದು. ಕಳೆದ 2006ರಲ್ಲಿ ರಾಜ್ಯ ಕಂದಾಯ ಇಲಾಖೆಯ ಕಾರ್ಯದರ್ಶಿಗಳಾಗಿದ್ದ, ತಾಲೂಕಿನವರೂ ಆಗಿದ್ದ ಎಸ್.ಎಂ.ಜಾಮದಾರ ಮತ್ತು ಅಂದಿನ ಶಾಸಕ ಮಹಾದೇವಪ್ಪ ಯಾದವಾಡರ ಪ್ರಯತ್ನದ ಫಲವಾಗಿ ಮಿನಿವಿಧಾನ ಸೌಧ ನಿರ್ಮಾಣವಾಗಿದೆ. ಸುಮಾರು ₹3 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಮಿನಿ ವಿಧಾನಸೌಧ ಕಟ್ಟಡವನ್ನು 2009ರ ಫೆ.13 ರಂದು ಲೋಕಾರ್ಪಣೆಗೊಳಿಸಲಾಯಿತು. ಆಗಿನಿಂದ ಪ್ರಮುಖ ಇಲಾಖೆಗಳಾದ ತಹಸೀಲ್ದಾರ್‌ ಕಚೇರಿ, ಉಪ ಖಜಾನೆ, ಉಪ ನೋಂದಣಿ, ಸಿಡಿಪಿಒ, ಸಮಾಜ ಕಲ್ಯಾಣ ಇಲಾಖೆ, ಭೂ ಮಾಪನ, ನಗರ ಭೂ ದಾಖಲೆ ಸೇರಿದಂತೆ ಹಲವು ಇಲಾಖೆಗಳು ಸ್ಥಳಾಂತರವಾಗಿ ಇಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಆದರೆ, ಮಿನಿ ವಿಧಾನಸೌಧದಲ್ಲಿ ಬಹುತೇಕ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದರೂ ಇದರ ನಿರ್ವಹಣೆ ಮಾತ್ರ ಯಾವುದೇ ಇಲಾಖೆಗಳು ವಹಿಸಿಕೊಂಡಿಲ್ಲ ಎನ್ನುವುದೇ ವಿಪರ್ಯಾಸ. ಈ ಬಗ್ಗೆ ತಹಸೀಲ್ದಾರ್‌ ಕಚೇರಿಯಲ್ಲಿ ಕೇಳಿದರೇ ನಿರ್ಮಾಣ ಮಾಡಿರುವ ಗೃಹ ನಿರ್ಮಾಣ ಮಂಡಳಿ ಇದುವರೆಗೆ ಕಟ್ಟಡವನ್ನು ನಮಗೆ ಹಸ್ತಾಂತರವನ್ನೇ ಮಾಡಿಲ್ಲ. ಆದ್ದರಿಂದ ನಿರ್ವಹಣೆಗೆ ತೊಂದರೆಯಾಗಿದೆಂಬ ಸಿದ್ಧ ಉತ್ತರ ಹೇಳುತ್ತಾರೆ. ಗೃಹ ನಿರ್ಮಾಣ ಮಂಡಳಿ ಮಾತ್ರ 2008ರ ನವೆಂಬರ್‌ನಲ್ಲಿ ಕಟ್ಟಡ ಕಾಮಗಾರಿ ಮುಗಿದಿದ್ದು, ಹಸ್ತಾಂತರ ಮಾಡಲಾಗಿದೆಂದು ಹೇಳುತ್ತಾರೆ. ಆದರೆ, ತಹಸೀಲ್ದಾರ್‌ ಕಚೇರಿಯಲ್ಲಿ ಹಸ್ತಾಂತರ ಮಾಡಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ. ಕಟ್ಟಡವನ್ನು ಹಸ್ತಾಂತರ ಮಾಡದ ಮತ್ತು ಸಮರ್ಪಕವಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಮಿನಿ ವಿಧಾನಸೌಧದ ದಕ್ಷಿಣದ ಮೊದಲ ಮಹಡಿಯಲ್ಲಿ ಕಂದಾಯ ಇಲಾಖೆಯ ಕೆಲಸ ಮಾಡುವ ಕೆಲ ಕೊಠಡಿಗಳು, ನಗರ ಭೂ ಮಾಪನ ಕಚೇರಿ, ನೆಲ ಮಹಡಿಯ ಇ ಆಡಳಿತ ಕೊಠಡಿ ಸೇರಿದಂತೆ ಹಲವು ಕೊಠಡಿಗಳು ಮಳೆ ಬಂದರೇ ಸೋರುವ ಮೂಲಕ ಮಿನಿಕೆರೆ ಪ್ರತ್ಯಕ್ಷವಾಗುತ್ತದೆ.

-------------------------------------ಬಾಕ್ಸ್

ಶೌಚಾಲಯಕ್ಕೆ ನೀರಿಲ್ಲದೇ ಬೀಗ: ನಿತ್ಯವೂ ಪರದಾಟ

ನಿರ್ವಹಣೆ ಮಾಡದ್ದರಿಂದ ಕಚೇರಿಯಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳು ಕೂಡ ಸಿಗುತ್ತಿಲ್ಲ. ಸಾರ್ವಜನಿಕರು ಮತ್ತು ಇಲಾಖೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೂಡ ಮಲಮೂತ್ರ ವಿಸರ್ಜನೆಗೆ ಭಾರಿ ತೊಂದರೆ ಅನುಭವಿಸುತ್ತಿದ್ದಾರೆ. ಈ ಮಿನಿ ವಿಧಾನಸೌಧದಲ್ಲಿ ಮುಖ್ಯವಾಗಿ ಕಂದಾಯ ಇಲಾಖೆ ಸೇರಿ ಏಳೆಂಟು ತಾಲೂಕು ಮಟ್ಟದ ಕಚೇರಿಗಳಿದ್ದು, ನಿರ್ವಹಣೆ ಮಾತ್ರ ಯಾರು ಮಾಡುತ್ತಿಲ್ಲ. ಪರಿಣಾಮ ಶೌಚ್ಯಕ್ಕೆ ಪರದಾಡುವುದು ಅನಿವಾರ್ಯ. ಮಿನಿ ವಿಧಾನಸೌಧದ ನೆಲಮಹಡಿಯಲ್ಲಿರುವ ಶೌಚಾಲಯವನ್ನು ಮಹಿಳಾ ನೌಕರರು ಉಪಯೋಗಿಸುತ್ತಾರೆ. ಪಶ್ಚಿಮ ದಿಕ್ಕಿನ ಮೊದಲ ಮಹಡಿಯ ಶೌಚಾಲಯಕ್ಕೆ ಸಮರ್ಪಕ ನೀರಿಲ್ಲದೇ ಅವುಗಳಿಗೆ ಬೀಗ ಜಡಿಯಲಾಗಿದೆ. ಅಲ್ಲದೆ ಮಿನಿ ವಿಧಾನಸೌಧದ ಛಾವಣಿಗೆ ತೆರಳುವ ಮಾರ್ಗದಲ್ಲಿಯೇ ಕೆಲವರು ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಜನರಿಗೆ ಸ್ವಚ್ಛತೆಯ ಪಾಠ ಬೋಧಿಸುವ ಸರ್ಕಾರಿ ಕಚೇರಿಯೇ ದುರ್ವಾಸನೆ ಸೂಸುತ್ತಿದ್ದು, ಯಾವಾಗ ಹಸ್ತಾಂತರವಾಗತ್ತೆ ಎಂಬುವುದೇ ಯಕ್ಷಪ್ರಶ್ನೆ...-----------------------------------

ಬಾಕ್ಸ್‌

ಹಸ್ತಾಂತರವಾಗದ ಮಿನಿವಿಧಾನಸೌದ ಕಟ್ಟಡಗಳು

ಬೆಳಗಾವಿ ಜಿಲ್ಲೆಯಲ್ಲಿ ನಿರ್ಮಾಣಗೊಂಡ ಬಹುತೇಕ ಮಿನಿ ವಿಧಾನಸೌಧಗಳು ನಿರ್ಮಾಣ ಮಾಡಿರುವ ಸಂಸ್ಥೆಗಳಿಂದ ಇನ್ನು ಹಸ್ತಾಂತರವಾಗಿಲ್ಲ. ಬೈಲಹೊಂಗಲ ಮಿನಿ ವಿಧಾನಸೌಧದಲ್ಲಿ ಕಂದಾಯ ಇಲಾಖೆಯ ಯಾವ ವಿಭಾಗವು ಇಲ್ಲ. ಅಲ್ಲಿ ಕೇವಲ ಉಪಖಜಾನೆ, ಉಪನೋಂದಣಿ ಕಚೇರಿಗಳಿವೆ. ಚನ್ನಮ್ಮನ ಕಿತ್ತೂರನಲ್ಲಿ ಉಪಖಜಾನೆಯ ಲಾಕರ್ ಇಲ್ಲದಿರುವ ಪರಿಣಾಮ ಶಿಕ್ಷಣ ಇಲಾಖೆ ಪ್ರಶ್ನೆ ಪತ್ರಿಕೆಗಳನ್ನು ಬೈಲಹೊಂಗಲ ಉಪಖಜಾನೆಯಲ್ಲಿ ಇಡಲಾಗುತ್ತದೆಂಬ ಮಾಹಿತಿ ಇದೆ.

----------------------------------------ಕೋಟ್‌...

ರಾಮದುರ್ಗದ ಮಿನಿ ವಿಧಾನಸೌಧ ಗೃಹ ನಿರ್ಮಾಣ ಮಂಡಳಿಯಿಂದ ತಹಸೀಲ್ದಾರ್‌ರಿಗೆ ಹಸ್ತಾಂತರವಾಗಿರುವ ಬಗ್ಗೆ ಯಾವದೇ ಮಾಹಿತಿ ಇಲ್ಲ. ಹಸ್ತಾಂತರ ಆಗಿರದಿದ್ದರೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ, ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡಿಸಿ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು.

-ಅಶೋಕ ಎಂ.ಪಟ್ಟಣ, ಸರ್ಕಾರದ ಮುಖ್ಯಸಚೇತಕರು, ಶಾಸಕರು.

------

ಮಿನಿ ವಿಧಾನಸೌಧ ಹಸ್ತಾಂತರವಾಗಿಲ್ಲವೆಂದು ತಿಳಿದಿತ್ತು. ಬಿಜೆಪಿ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದಾಗ ಆರ್.ಅಶೋಕ ಗಮನಕ್ಕೆ ತಂದಾಗ ರಾಜ್ಯದಲ್ಲಿ ಹಲವು ಮಿನಿವಿಧಾನಸೌಧ ಕಟ್ಟಡಗಳು ಹಸ್ತಾಂತರವಾಗಿಲ್ಲ. ಎಲ್ಲವನ್ನು ಒಂದೇ ಸಮಯದಲ್ಲಿ ಮಾಡಲಾಗುವುದೆಂದು ಹೇಳಿದ್ದರು. ನಿರ್ವಹಣೆಗೆ ಅನುದಾನ ನೀಡಲು ಸಹಿತ ಕೇಳಲಾಗಿತ್ತು.

-ಮಹಾದೇವಪ್ಪ ಯಾದವಾಡ, ಮಾಜಿ ಶಾಸಕರು.