ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪರ ಒಲವಿದ್ದು, ಜನರು ನನ್ನನ್ನು ಕೈ ಬಿಡುವುದಿಲ್ಲ ಎಂಬ ನಂಬಿಕೆ ಇದೆ. ನಾನು ಗೆದ್ದೇ ಗೆಲ್ಲುವೆನೆಂಬ ವಿಶ್ವಾಸವಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಹೇಳಿದರು.ತಾಲೂಕಿನ ತುಪ್ಪದಮಡು ಗ್ರಾಮದಲ್ಲಿ ಎಐಸಿಸಿ ಘೋಷಿಸಿರುವ 5 ಗ್ಯಾರಂಟಿ ಕಾರ್ಡ್‌ಗಳ ವಿತರಣೆ ಹಾಗೂ ಜೆಡಿಎಸ್ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಲವಾರು ಮುಖಂಡರು ಅನ್ಯ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಮಾಜಿ ಎಂಎಲ್‌ಎ ಶ್ರೀನಿವಾಸ್, ಮಾಜಿ ಎಂಎಲ್‌ಸಿ ಅಪ್ಪಾಜಿಗೌಡ, ಮರಿತಿಬ್ಬೇಗೌಡ ಅವರು ನನ್ನ ಬೆಂಬಲಿಸಿರುವುದು ನನ್ನ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ದಲಿತ ಸಂಘಟನೆಗಳು, ರೈತ ಸಂಘಟನೆಗಳು ಬೆಂಬಲ ಘೋಷಿಸಿವೆ. ಮಂಡ್ಯ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆಯಾಗಿರುವುದು ನನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ದೇಶದ ರೈತರು, ಕಾರ್ಮಿಕರು, ಮಹಿಳೆಯರೂ ಸೇರಿ ಎಲ್ಲ ವರ್ಗದ ಜನರ ಕುಟುಂಬಗಳನ್ನು ರಕ್ಷಣೆ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷ. ಹಾಗಾಗಿ ಸರಳ, ಸಜ್ಜನಿಕೆಯುಳ್ಳ ವೆಂಕಟೆರಮಣೇಗೌಡ (ಸ್ಟಾರ್ ಚಂದ್ರು) ಅವರನ್ನು ಗೆಲ್ಲಿಸುವ ಮೂಲಕ ಜಿಲ್ಲೆಯ ಸ್ವಾಭಿಮಾನವನ್ನು ಎತ್ತಿಹಿಡಿಯುವ ಜವಾಬ್ದಾರಿ ಜಿಲ್ಲೆಯ ಜನರ ಮೇಲಿದೆ ಎಂದರು.
ಬಿಜೆಪಿ ಹಿಂದುಳಿದ ಮತ್ತು ಶೋಷಿತ ವರ್ಗದ ಜನರ ವಿರುದ್ಧವಾಗಿದೆ. ದೇಶದಲ್ಲಿ ಬಡ ಜನರ ವಿರೋಧಿಯಾಗಿರುವ ಬಿಜೆಪಿಯ ದುರಾಡಳಿತ ಅಂತ್ಯಗೊಳಿಸಬೇಕಾಗಿದೆ. ಡಾ.ಅಂಬೇಡ್ಕರ್ ಅವರ ಸಂವಿಧಾನವನ್ನೇ ಬದಲಾಯಿಸುತ್ತೇವೆ ಎನ್ನುವ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ ಸಂವಿಧಾನ ರಕ್ಷಣೆ ಮಾಡಬೇಕಾದದ್ದು ದೇಶದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.ಇದೇ ವೇಳೆ ತುಪ್ಪದಮಡು ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ಮುಖಂಡರಾದ ಸುರೇಶ್, ಬೆಟ್ಟೇಗೌಡ, ಹಾ.ಉ.ಸ ಸಂಘದ ಸದಸ್ಯರಾದ ರವಿಕುಮಾರ್, ದೊಡ್ಡೇಗೌಡ, ಮಂಜು, ಶಂಕರೇಗೌಡ, ಪ್ರತಾಪ್, ಕೋಳಿ ಅಂಗಡಿ ಪ್ರದೀಪ್, ಚಿಕ್ಕಣ್ಣ, ಯ.ಚಿಕ್ಕಣ್ಣ, ಆಟೋ ಕೃಷ್ಣಮೂರ್ತಿ, ಕಾಶಿ ವಿಶ್ವನಾಥ್, ಪಾಪಣ್ಣ, ಜಯರಾಮು, ಮಧು, ನಾಗರಾಜು, ರಮೇಶ್, ತೇರುಬೀದಿ ಸೇರಿ ಇಪ್ಪತ್ತಕ್ಕೂ ಹೆಚ್ಚು ಮುಖಂಡರು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.
ಜಿಪಂ ಮಾಜಿ ಸದಸ್ಯ ಎಂ.ಪ್ರಸನ್ನ ಮಾತನಾಡಿದರು. ಸಚಿವರ ಸಹೋದರ ಎನ್.ಲಕ್ಷ್ಮೀಕಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಯುವ ಮುಖಂಡ ಸುನಿಲ್ ಲಕ್ಷ್ಮೀಕಾಂತ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಸ್.ಬಿ.ರಮೇಶ್, ಗ್ರಾಪಂ ಸದಸ್ಯೆ ಚಿಕ್ಕಮ್ಮ, ಮುಖಂಡರಾದ ಎಂ. ರಾಘವೇಂದ್ರ, ಅಂಗಡಿ ರೇವಣ್ಣ, ಜಗದೀಶ್ ಸೇರಿ ಹಲವರು ಇದ್ದರು.