ಸಾರಾಂಶ
ಬೂದಿಹಾಳ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ, ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. 15 ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಕೊಡೇಕಲ್
ಮಕ್ಕಳು ಇಂಗ್ಲಿಷ್‌ನಲ್ಲಿ ಜ್ಞಾನಿಯಾದರೆ ಜಗತ್ತನ್ನೇ ಗೆಲ್ಲಬಲ್ಲರು ಎಂಬ ಭಾವನೆ ಬಹಳಷ್ಟು ಪೋಷಕರಲ್ಲಿದೆ. ಇಂತಹ ಭಾವನೆ ಬಿಟ್ಟುಬಿಡಬೇಕು. ಕನ್ನಡ ಶಾಲೆಯಲ್ಲಿಯೇ ಕಲಿತು ಮಹಾನ್ ಸಾಧನೆ ಮಾಡಿದವರು ನಮ್ಮ ರಾಜ್ಯದಲ್ಲಿದ್ದಾರೆ. ನಮ್ಮ ಮಾತೃ ಭಾಷೆಗೆ ಆದ್ಯತೆ ನೀಡಬೇಕು. ಕನ್ನಡ ಮಾಧ್ಯಮದಲ್ಲೇ ಕಲಿತು ರಾಜ್ಯದ ಕೀರ್ತಿ ಹೆಚ್ಚಿಸಬೇಕು ಎಂದು ಯಾದಗಿರಿ ಡಯಟ್‌ನ ಉಪನಿರ್ದೇಶಕರಾದ ಜಿ.ಎಂ. ವೃಷಬೇಂದ್ರಯ್ಯ ಹೇಳಿದರು.ಸಮೀಪದ ಬೂದಿಹಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಇಲಾಖೆ ಮತ್ತು ಗ್ರಾಮದ ಹಳೆಯ ವಿದ್ಯಾರ್ಥಿಗಳ ಸಹಯೋಗದಲ್ಲಿ ಜರುಗಿದ 7ನೇ ತರಗತಿ ಮಕ್ಕಳ ಬೀಳ್ಕೊಡುಗೆ ಮತ್ತು ವರ್ಗಾವಣೆ ಹಾಗೂ ನೇಮಕಗೊಂಡ ಶಿಕ್ಷಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಇಂದು ಸರ್ಕಾರಿ ಶಾಲೆಗಳು ಯಾವುದರಲ್ಲಿಯೂ ಕಮ್ಮಿ ಇಲ್ಲ. ಹೆಚ್ಚಿನ ಫಲಿತಾಂಶ ಸರ್ಕಾರಿ ಶಾಲೆಗಳಿಂದಲೆ ಬರುತ್ತಿದೆ. ನಮ್ಮ ಜಿಲ್ಲೆ ಶಿಕ್ಷಣದಲ್ಲಿ ಹಿಂದುಳಿದಿದೆ ಎಂಬ ಹಣೆಪಟ್ಟಿಯನ್ನು ಹೊತ್ತಿದೆ. ಆ ಒಂದು ಹಣೆಪಟ್ಟಿಯನ್ನು ಕಿತ್ತುಹಾಕಲು ಶಿಕ್ಷಕರು ಶ್ರಮಿಸಬೇಕು. ಈಗಾಗಲೆ ಇಲಾಖೆ ಹೊಸದಾಗಿ ಶಿಕ್ಷಕರ ನೇಮಕ ಮತ್ತು ಅತಿಥಿ ಶಿಕ್ಷಕರ ನೇಮಕವನ್ನು ಮಾಡುವ ಮೂಲಕ ಶಿಕ್ಷಣಮಟ್ಟ ಸುಧಾರಿಸಲು ಸರ್ವ ಪ್ರಯತ್ನ ಮಾಡುತ್ತಿದೆ. ಬೂದಿಹಾಳ ಗ್ರಾಮದ ಹಳೆಯ ವಿದ್ಯಾರ್ಥಿಗಳು ಸಹಕಾರ ನೀಡುವ ಮೂಲಕ ಇಂತಹ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.ಬಿಆರ್‌ಪಿ ಮಹ್ಮದ್ ರಫಿ ಮಳ್ಳಿಕರ ಮತ್ತು ಸಿಆರ್‌ಪಿ ಮಹಾಂತೇಶ ರೂಪನ್ನವರ ಮಾತನಾಡಿದರು.
ಶಾಲೆಯಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕರಾದ ಮಾಳಪ್ಪ ಮಳ್ಳಿ ಮತ್ತು ಎಂ. ಗಂಗಾಧರ ದಂಪತಿಯನ್ನು ಹಾಗೂ ಹೊಸದಾಗಿ ನೇಮಕಗೊಂಡ ಶಿಕ್ಷಕಿಯರಾದ ಸಾವಿತ್ರಿ ಮತ್ತು ವಿದ್ಯಾವತಿ ಇವರನ್ನು ಜೊತೆಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು.ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಮಲಿಂಗ ಗುಳಬಾಳ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಈಶ್ವರ ನಿರೂಡಗಿ, ಕಿಶೋರ ಪವ್ಹಾರ್, ಗ್ರಾಪಂ ಅಧ್ಯಕ್ಷ ರಾಯನಗೌಡ ಮಾಲಿಪಾಟೀಲ್, ಮುಖ್ಯಗುರು ಶರಣಗೌಡ ಪಾಟೀಲ್, ಮೌನೇಶ ಕಂಬಾರ, ಎಂ.ಸಿ. ಹಂದ್ರಾಳ, ಬಸನಗೌಡ ಮುರಾಳ, ಓಂಪ್ರಕಾಶ, ಶಿವಕುಮಾರ ,ಶಿವರಾಜ ಬಿರಾದಾರ, ಬಸವರಾಜ ಗಡ್ಡಿಗೌಡ್ರ, ಧರೆಪ್ಪ ಮೇಟಿ, ಭೀಮನಗೌಡ ಕಕ್ಕೇರಾ ಇತರರಿದ್ದರು.
ಶಿಕ್ಷಕರಾದ ಬಸನಗೌಡ ವಠಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಣುಕಾ ವಾಲಿ ವರದಿ ವಾಚನ ಮಾಡಿದರು. ಎಸ್.ಎಸ್. ಮಾರನಾಳ ನಿರೂಪಿಸಿದರು. ಮಲ್ಲಿಕಾರ್ಜುನ ಸ್ವಾಗತಿಸಿದರು. ಶ್ರೀಶೈಲ್ ವಂದಿಸಿದರು.