ಸಾರಾಂಶ
ಸೊರಬ: ಕರಾಟೆ ಜನಪ್ರಿಯವಾದ ಸಮರ ಕಲೆಯಾಗಿದ್ದು, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕರಾಟೆಯನ್ನು ಕಲಿಯುವುದರಿಂದ ಆತ್ಮರಕ್ಷಣೆಯೊಂದಿಗೆ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕರಾಟೆ ತರಬೇತುದಾರ ಸಿಯಾನ್ ಪಂಚಪ್ಪ ಹೇಳಿದರು.ಪಟ್ಟಣದ ಹೊಸಪೇಟೆ ಬಡಾವಣೆಯ ಆಶಾಕಿರಣ ಪಬ್ಲಿಕ್ ಶಾಲೆಯಲ್ಲಿ ಸಾಗರ ಕರಾಟೆ ಇನ್ಸ್‌ಟಿಟ್ಯೂಟ್ ವತಿಯಿಂದ ಹಮ್ಮಿಕೊಂಡ ಕರಾಟೆ ತರಬೇತಿ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಕ್ಕಳು ಕೇವಲ ಪಠ್ಯದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಮನೋಭಾವದಿಂದ ಪೋಷಕರು ಹೊರ ಬರಬೇಕು. ಶಿಕ್ಷಣ ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಲಭಿಸುತ್ತದೆ. ಗ್ರಾಮೀಣ ಭಾಗದಲ್ಲಿ ಅನೇಕ ಪ್ರತಿಭೆಗಳಿದ್ದು, ಅವರಿಗೆ ತರಬೇತಿ ನೀಡಿದರೆ ಒಲಂಪಿಕ್ ನಂತಹ ಕ್ರೀಡೆಗಳಲ್ಲೂ ಭಾಗವಹಿಸುವರಿದ್ದಾರೆ. ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕರಾಟೆ ತರಬೇತಿಯು ಸ್ವರಕ್ಷಣೆಗೆ ಅತ್ಯಂತ ಸೂಕ್ತವಾಗಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಶಾಕಿರಣ ಪಬ್ಲಿಕ್ ಶಾಲೆ ಮುಖ್ಯಸ್ಥ ಹಾಗೂ ಮಾಜಿ ಯೋಧ ಯು.ಸಂಗಪ್ಪ, ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿದ್ದರೆ ಮಾತ್ರ ಕಲಿಕೆಯಲ್ಲಿ ಆಸಕ್ತಿ ಮೂಡಲು ಸಾಧ್ಯವಾಗುತ್ತದೆ. ಬಹು ಉಪಕಾರಿಯಾದ ಕರಾಟೆ ಹಾಗೂ ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕರಾಟೆ ತರಬೇತಿಯಿಂದ ಸಾಮರ್ಥ್ಯವು ಸಹ ಹೆಚ್ಚುತ್ತದೆ ಮತ್ತು ಕ್ರಿಯಾಶೀಲರಾಗಲು ಸಾಧ್ಯವಾಗುತ್ತದೆ ಎಂದರು.ಪೋಷಕ ಪ್ರತಿನಿಧಿ ರಾಜು ಹಿರಿಯಾವಲಿ, ಸಂಸ್ಥೆಯ ಮುಖ್ಯಶಿಕ್ಷಕಿ ಯು.ಶೋಭಾ, ಸಹ ಶಿಕ್ಷಕರಾದ ಚಂದ್ರಶೇಖರ್, ಹೇಮಾವತಿ, ಸುಮಲತಾ, ಸುಪ್ರಜಾ, ಸಂಪ್ರತಾ, ರಾಧಿಕಾ, ಪ್ರವೀಣ್, ಅಮೃತಾ, ಕರಾಟೆ ತರಬೇತುದಾರರಾದ ಮಧುಕೇಶ್ವರ ಹಾಗೂ ಮಧು.ಯು.ಎನ್ ಮತ್ತಿತರರಿದ್ದರು.