ಧಾರವಾಡ:

ವಿಜ್ಞಾನದ ಪರಿಕಲ್ಪನೆ ಅರ್ಥೈಸಿಕೊಳ್ಳುವ ಬದಲು ಅದನ್ನು ಅನುಭವದ ಮೂಲಕ ಕಲಿಯುವುದರೊಂದಿಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡರೆ ಉತ್ತಮ ಆವಿಷ್ಕಾರಗಳನ್ನು ಮಾಡಬಹುದು ಎಂದು ಕವಿವಿ ಕುಲಪತಿ ಡಾ. ಎ.ಎಂ. ಖಾನ್‌ ಹೇಳಿದರು.

ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ವಿಜ್ಞಾನ ಸಂಭ್ರಮ ಕಾರ್ಯಾಗಾರ ಉದ್ಘಾಟಿಸಿದ ಅವರು, ಪ್ರಸ್ತುತ ಸಂದರ್ಭದಲ್ಲಿ ವಿಜ್ಞಾನಿಗಳಿಗೆ ಹಾಗೂ ಸಂಶೋಧಕರಿಗೆ ಸಾಕಷ್ಟು ಆಧುನಿಕ ರೀತಿಯಲ್ಲಿ ಅವಕಾಶಗಳಿದ್ದು, ಸಮಾಜದ ಅನುಕೂಲಕ್ಕಾಗಿ ಹೊಸ ಹೊಸ ಪ್ರಯೋಗಗಳು ನಡೆಯಬೇಕಿದೆ ಎಂದರು.

ಶಿಕ್ಷಣ ತಜ್ಞ, ವಿಜ್ಞಾನಿ ಡಾ. ಎಸ್.ಎಂ. ಶಿವಪ್ರಸಾದ ಮಾತನಾಡಿ, ನಾವು ಬೇರೆಯವರ ಮಾತುಗಳನ್ನು ಆಲಿಸಿ ಪ್ರತಿಕ್ರಿಯಿಸುವ ಬದಲು ಸ್ವ-ಆಲೋಚನೆಯಿಂದ ಚಿಂತಿಸಿ ಮುಂದುವರಿದರೆ ಜೀವನದಲ್ಲಿ ಉನ್ನತ ಸಾಧನೆ ಮಾಡುವ ಜತೆಗೆ ಹೊಸ ತಂತ್ರಜ್ಞಾನಗಳನ್ನು ರೂಪಿಸಬಹುದು ಎಂದು ಹೇಳಿದರು.

ವಿಶ್ರಾಂತ ಕುಲಪತಿ ಡಾ. ಬಿ.ಜಿ. ಮೂಲಿಮನಿ ಮಾತನಾಡಿ, ರಾಷ್ಟ್ರೀಯ ವಿಜ್ಞಾನ ಆಚರಣೆ ಮಹತ್ವವು ಮಹಿಳಾ ವಿಜ್ಞಾನಿಗಳನ್ನು ಪ್ರೋತ್ಸಾಹಿಸುವುದಾಗಿದೆ. ಈಗಾಗಲೇ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಸಾಕಷ್ಟು ಕೊಡುಗೆ ನೀಡಿದ್ದು, ಇಂತಹ ಅವಕಾಶ ಬಳಸಿಕೊಂಡು ಹೆಚ್ಚಿನ ಸಂಶೋಧನೆ ಮಾಡಬೇಕೆಂದು ಕರೆ ನೀಡಿದರು.


ವಿಜ್ಞಾನಿ ಪ್ರೊ. ಶಿವಾನಂದ ಕಣವಿ, ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಆಗಿರುವ ಅಭಿವೃದ್ಧಿ ತಿಳಿಸುವುದು ಮತ್ತು ಮುಂದಿನ ಅಭಿವೃದ್ಧಿಗೆ ಬೇಕಾಗುವ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಸಲುವಾಗಿ ಈ ವಿಜ್ಞಾನ ಸಂಭ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ. ಜಗದೀಶ ಟೋನಣ್ಣವರ, ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಡಾ. ಆರ್.‌ ಶಂಕರ ಹಾಗೂ ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ಬೋಳಿಶೆಟ್ಟಿ ಮಾತನಾಡಿದರು. ವಿಶಾಲಾಕ್ಷಿ ಎಸ್.ಜೆ. ನಿರೂಪಿಸಿದರು. ಸಿ.ಎಫ್.‌ ಚಂಡೂರ ವಂದಿಸಿದರು. ಡಾ. ಜೆ.ಎಸ್. ಕಾಡದೇವರಮಠ, ಡಾ. ಕೊಟ್ರೇಶ, ಡಾ. ಯು.ಎಸ್.‌ ರಾಯ್ಕರ, ಡಾ. ಅರುಂಧತಿ ಸವದತ್ತಿ ಇದ್ದರು.