ಸಾರಾಂಶ
ಭವಿಷ್ಯದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳು ಇತರ ಆದರ್ಶ ಮತ್ತು ಸಾಧಕರ ಹಿನ್ನಲೆ ಅರಿತುಕೊಂಡು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಪ್ರಯತ್ನಿಸಬೇಕು.
ಕನ್ನಡಪ್ರಭ ವಾರ್ತೆ ಕೊಟ್ಟೂರು
ಭವಿಷ್ಯದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳು ಇತರ ಆದರ್ಶ ಮತ್ತು ಸಾಧಕರ ಹಿನ್ನಲೆ ಅರಿತುಕೊಂಡು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಪತ್ರಾಂಕಿತ ಇಲಾಖೆಯ ಉಪಖಜಾನಾಧಿಕಾರಿ ಅಂಜಿನಪ್ಪ ಹೇಳಿದರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಟ್ಟೂರು ತಾಲೂಕು ಘಟಕದವರು ಪಟ್ಟಣದ ಶಿವಾನಿ ಪ್ಯಾರಾಡೈಸ್‌ನಲ್ಲಿ ಆಯೋಜಿಸಿದ್ದ ಕೊಟ್ಟೂರು ತಾಲೂಕು ಮಟ್ಟದ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಪ್ರತಿಯೊಬ್ಬರು ಜ್ಞಾನ ಸಂಪಾದಿಸುವುದರ ಜೊತೆಗೆ ಲೋಕ, ವ್ಯವಹಾರಿಕ ಜ್ಞಾನ ಕಲಿಯಬೇಕು. ಸಂಬಂಧಗಳು ದೂರಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಸಂಬಂಧಗಳಿಗೆ ಬೆಲೆ ಕೊಡುತ್ತಾ ಬೆಸುಗೆಯಾಗಬೇಕು. ಸಮಾಜದಲ್ಲಿ ಇನ್ನೊಬ್ಬರಿಗೆ ಸ್ಪೂರ್ತಿಯಾದರೆ ನಿಮ್ಮ ಬದುಕು ಸಾರ್ಥಕ ಎಂದರು.ಸಂಘದ ತಾಲೂಕು ಅಧ್ಯಕ್ಷ ಯೋಗೀಶ್ವರ ದಿನ್ನೆಯವರು ಪ್ರಾಸ್ತಾವಿಕವಾಗಿ ಮಾತನಾಡಿದದರು.
ವೇದಿಕೆಯಲ್ಲಿ ಖಜಾಂಚಿ ವೀರೇಶ ತುಪ್ಪದ, ಕಾರ್ಯದರ್ಶಿ ರಮೇಶ ಕೆ., ಹಿರಿಯ ಉಪಾಧ್ಯಕ್ಷ ವೀರಣ್ಣ ಎ.ಕೆ., ಉಪಾಧ್ಯಕ್ಷ ಸಿದ್ದಪ್ಪ ಜಿ., ಸಾಂಸ್ಕೃತಿಕ ಕಾರ್ಯದರ್ಶಿ ಹೇಮಚಂದ್ರ, ಪದಾಧಿಕಾರಿಗಳಾದ ರವಿಕುಮಾರ, ಮೀನಾಕ್ಷಿ, ಚನ್ನೇಶಪ್ಪ ಎಸ್. ಇದ್ದರು. ರಾಜ್ಯ ಪರಿಷತ್ ಸದಸ್ಯರಾದ ಎಸ್.ಎಂ. ಗುರುಬಸವರಾಜ ಹಾಗೂ ಜಂಟಿ ಕಾರ್ಯದರ್ಶಿ ಶಿವಕುಮಾರ್ ಎಂ. ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಮಂಜುನಾಥ ಬಿ.ಟಿ. ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಶೇ.೯೦ ಕ್ಕಿಂತ ಹೆಚ್ಚಿನ ಅಂಕದೊಂದಿಗೆ ಉತ್ತೀರ್ಣರಾದ ಎಸ್‌ಎಸ್‌ಎಲ್‌ಸಿಯ ೧೩ ಹಾಗೂ ಪಿಯುಸಿಯ ೧೩ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಫೈಲು ನೀಡಿ ಸನ್ಮಾನಿಸಲಾಯಿತು. ಶೀಲಾ ಮಹಾದೇವ ಹರಿಪ್ರಿಯ ಭರತನಾಟ್ಯ ಶಾಲಾ ಮಕ್ಕಳ ಭರತನಾಟ್ಯ ಕಾರ್ಯಕ್ರಮದಲ್ಲಿ ಆಕರ್ಷಣೀಯವಾಗಿತ್ತು.