ಮಕ್ಕಳ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ ಸಾಧಿಸಲು ಮತ್ತು ದೃಢೀಕರಿಸಲು ಈ ಕಲಿಕಾ ಹಬ್ಬ ಉತ್ತಮ ವೇದಿಕೆಯಾಗಿದೆ. ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಎಲ್ಲಾ ಶಿಕ್ಷಕರು ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ.

ದಾಬಸ್‍ಪೇಟೆ: ಮಕ್ಕಳನ್ನು ಮನೆ ಮತ್ತು ಶಾಲೆಯ ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸದೆ ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಪ್ರೇರೆಪಿಸಿದಾಗ ಮಾತ್ರ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಹೊನ್ನೇನಹಳ್ಳಿ ಗ್ರಾಪಂ ಅಧ್ಯಕ್ಷೆ ಸುಮಿತ್ರಾ ಶ್ರೀನಿವಾಸ್ ತಿಳಿಸಿದರು.

ಸೋಂಪುರ ಹೋಬಳಿಯ ಹೊನ್ನೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪುಟ್ಟರುದ್ರಾರಾಧ್ಯ ಮಾತನಾಡಿ, ಕನ್ನಡ ಶಾಲಾ ಕಲಿಕಾ ಹಬ್ಬಗಳು ಮಕ್ಕಳ ಕಲಿಕೆಯನ್ನು ಉತ್ತೇಜಿಸುತ್ತವೆ. ಸ್ಪರ್ಧೆಗಳು, ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಮಕ್ಕಳಲ್ಲಿ ಕಲಿಕಾ ಪ್ರೇರಣೆ ಮತ್ತು ಪ್ರತಿಭೆಗಳನ್ನು ಹೊರತರಲು ಕಲಿಕಾ ಹಬ್ಬಗಳು ಸಹಕಾರಿಯಾಗಿವೆ ಎಂದರು.

ಸಿಆರ್ ಪಿ ರಾಮಕೃಷ್ಣಯ್ಯ ಮಾತನಾಡಿ, ಮಕ್ಕಳ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ ಸಾಧಿಸಲು ಮತ್ತು ದೃಢೀಕರಿಸಲು ಈ ಕಲಿಕಾ ಹಬ್ಬ ಉತ್ತಮ ವೇದಿಕೆಯಾಗಿದೆ. ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಎಲ್ಲಾ ಶಿಕ್ಷಕರು ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ ಎಂದರು.

ಎಸ್ ಡಿಎಂಸಿ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ಪರಮಶಿವಯ್ಯ, ಕ್ಲಸ್ಟರ್ ನೋಡಲ್ ಅಧಿಕಾರಿ ರಾಮಕೃಷ್ಣಯ್ಯ, ಮುಖ್ಯಶಿಕ್ಷಕರಾದ ಪುಟ್ಟರುದ್ರಾರಾಧ್ಯ, ವೆಂಕಟೇಶ್, ರವಿಕೀರ್ತಿ, ರವಿಕುಮಾರ್, ರಂಗಸ್ವಾಮಿ, ಪೂರ್ಣಿಮಾ, ರೂಪ, ಗ್ರಂಥಾಪಾಲಕಿ ಶಾರದಮ್ಮ ಸೇರಿ ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.