ಹೆಣ್ಣು ಮಕ್ಕಳ ಆತ್ಮರಕ್ಷಣೆಗೆ ಜೂಡೋ ಕಲಿಕೆ ಸಹಕಾರಿ

| Published : Oct 18 2024, 12:07 AM IST

ಸಾರಾಂಶ

Learning judo is helpful for self-defense of girls

-ರಾಜ್ಯ ಮಟ್ಟದ ಜೂಡೋ ಕ್ರೀಡಾ ಕೂಟದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತಾ ಬಿ.ಎನ್ ಅಭಿಮತ

-----

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಪ್ರಸ್ತುತ ಸಮಾಜದಲ್ಲಿ ಹೆಣ್ಣು ಮಕ್ಕಳ ಆತ್ಮರಕ್ಷಣೆಗೆ ಜೂಡೋ ಕಲಿಕೆ ಸಹಕಾರಿ ಎಂದು ನಗರಸಭೆ ಅಧ್ಯಕ್ಷೆ ಸುಮಿತಾ ಬಿ.ಎನ್ ಅಭಿಮತ ವ್ಯಕ್ತಪಡಿಸಿದರು.

ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗ ಹಾಗೂ ನಮ್ಮ ಎಕ್ಸ್ಪರ್ಟ್ ಪಿಯು ಕಾಲೇಜು ವತಿಯಿಂದ ನಗರದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ಜೂಡೋ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜೂಡೋ ಕ್ರೀಡೆ ಮೂಲತಃ ಆತ್ಮರಕ್ಷಣೆ ಕಲೆಯಾಗಿದೆ. ಇದು ಮೊದಲು ಜಪಾನ್ ದೇಶದಲ್ಲಿ ಆರಂಭವಾಯಿತು. ವಿಶೇಷವಾಗಿ ಮಹಿಳೆಯರ ಸ್ವಯಂ ರಕ್ಷಣೆಗೆ ಜೂಡೋ ತುಂಬಾ ಅನುಕೂಲವಾಗಲಿದೆ. ಪ್ರತಿಯೊಂದು ಶಾಲಾ ಕಾಲೇಜಿನಲ್ಲಿ ಈ ಕ್ರೀಡೆಯನ್ನು ಕಲಿಸಿದಲ್ಲಿ ಮಕ್ಕಳಿಗೆ ಸಹಕಾರಿ ಎಂದರು.

ಕ್ರೀಡೆಯಲ್ಲಿ ಸೋಲು ಗೆಲುವು ಸಹಜ, ಇದನ್ನು ಸಮಾನವಾಗಿ ಸ್ವೀಕರಿಸಿ, ಕ್ರೀಡಾಪಟುಗಳು ಕ್ರೀಡಾ ಸ್ಫೂರ್ತಿ ಮೆರೆಯಬೇಕು. ರಾಜ್ಯಮಟ್ಟದ ಜೂಡೋ ಕ್ರೀಡಾಕೂಟ ಚಿತ್ರದುರ್ಗ ಜಿಲ್ಲೆಯಲ್ಲಿ ಆಯೋಜಿಸಿರುವುದು ಸಂತಸದ ಸಂಗತಿ. ಕ್ರೀಡಾಪಟುಗಳು ಜಾಗರೂಕತೆಯಿಂದ ಕ್ರೀಡೆಯಲ್ಲಿ ಭಾಗವಹಿಸುವಂತೆ ಸುಮಿತಾ ಬಿ.ಎನ್. ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಪುಟ್ಟಸ್ವಾಮಿ, ಜೂಡೋ ಹಿರಿಯ ತರಬೇತುದಾರೆ ಡಾ.ಎಂ.ಎನ್.ತ್ರಿವೇಣಿ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಸ್.ದೇವೇಂದ್ರಪ್ಪ, ಕಾರ್ಯದರ್ಶಿ ಆರ್.ಮುಸ್ತಾಫ್, ಖಜಾಂಚಿ ಜೆ.ರಂಗಸ್ವಾಮಿ, ಜಿಲ್ಲಾ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್.ಮಲ್ಲೇಶ್, ಐಡಿಯಲ್ ಎಜುಕೇಷನ್ ಸೊಸೈಟಿ ಹಾಗೂ ನಮ್ಮ ಎಕ್ಸ್ಪರ್ಟ್ಸ್ ಪಿಯು ಕಾಲೇಜು ಪ್ರಾಂಶುಪಾಲ ಪಿ.ಅರುಣ್ ಕುಮಾರ್ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.

ಜೂಡೋ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 139 ಪುರುಷ, 101 ಮಹಿಳಾ ಕ್ರೀಡಾಪಟುಗಳು ಭಾಗವಹಿಸಿದ್ದರು. ಪುರುಷರ ವಿಭಾಗದಲ್ಲಿ 10 ಮತ್ತು ಮಹಿಳೆಯರ ವಿಭಾಗದಲ್ಲಿ 9 ವಿಧಗಳಲ್ಲಿ ಕ್ರೀಡೆಯನ್ನು ಆಯೋಜಿನೆ ಮಾಡಲಾಗಿತ್ತು. ಈ ಬಾರಿಯ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದ 19 ಕ್ರೀಡಾಪಟುಗಳನ್ನು ಮುಂದಿನ ಡಿಸೆಂಬರ್ ಕೊನೆಯ ವಾರದಲ್ಲಿ ಪಂಜಾಬ್ ರಾಜ್ಯದಲ್ಲಿ ನಡೆಯಲಿರುವ ರಾಷ್ಟ್ರೀಯ ಜೂಡೋ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

ಮಹಿಳೆಯರ ಮೊದಲ ನಾಲ್ಕು ಸುತ್ತಿನಲ್ಲಿ ವಿವಿಧ ವಿಭಾಗಗಳಲ್ಲಿ ವಿಜೇತರಾದ ಬಾಗಲಕೋಟೆ ಜಿಲ್ಲೆಯ ಸ್ವಾತಿ, ಚಿಕ್ಕೋಡಿಯ ಅನುರಾಧ ಹಾಗೂ ಬೆಂಗಳೂರು ದಕ್ಷಿಣ ವಿಭಾಗದ ವರಲಕ್ಷ್ಮಿ ಚಿನ್ನದ ಪದಕ ಪಡೆದು ಮಿಂಚಿದರು.

ಬಾಲಕರ ವಿಭಾಗದಲ್ಲಿ ಬೆಳಗಾವಿ ಜಿಲ್ಲೆಯ ಮನೋಜ್ ಸತ್ಯಪ್ಪ, ದಾವಣಗೆರೆಯ ವಿಕಾಸ್ ನಾಯ್ಕ್, ಕಲಬುರುಗಿ ಜಿಲ್ಲೆಯ ಕೆ.ಆಶಿಶ್ ಜೂಡೋ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕ ಪಡೆದರು.

---------------

ಪೋಟೋ: ಚಿತ್ರದುರ್ಗದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಜೂಡೋ ಕ್ರೀಡಾಕೂಟಕ್ಕೆ ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ ಚಾಲನೆ ನೀಡಿದರು.

-------

17 ಸಿಟಿಡಿ 4