ಮಲ್ಪೆಯ ಕೊಚ್ಚಿನ್ ಶಿಪ್‌ಯಾರ್ಡ್ ನಲ್ಲಿ ಮೂರು ತಿಂಗಳ ‘ಕನ್ನಡೇತರಿಗೆ ಕನ್ನಡ ಕಲಿಕಾ ತರಬೇತಿಯ’ ಉದ್ಘಾಟನಾ ಸಮಾರಂಭ ಬುಧವಾರ ಆರಂಭಗೊಂಡಿತು.

ಉಡುಪಿ: ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ವತಿಯಿಂದ ಇಲ್ಲಿನ ಮಲ್ಪೆಯ ಕೊಚ್ಚಿನ್ ಶಿಪ್‌ಯಾರ್ಡ್ ನಲ್ಲಿ ಮೂರು ತಿಂಗಳ ‘ಕನ್ನಡೇತರಿಗೆ ಕನ್ನಡ ಕಲಿಕಾ ತರಬೇತಿಯ’ ಉದ್ಘಾಟನಾ ಸಮಾರಂಭ ಬುಧವಾರ ಆರಂಭಗೊಂಡಿತು. ತರಬೇತಿಯನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ ಶೆಟ್ಟಿ ಉದ್ಘಾಟಿಸಿದರು.

ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡೇತರರಿಗೆ ಕನ್ನಡ ಕಲಿಕಾ ತರಬೇತಿಯು ಕನ್ನಡ ಕಲಿಕಾ ಆಸ್ತಕರಿಗೆ ಉತ್ತಮ ಅವಕಾಶವಾಗಿದ್ದು, ಪ್ರತಿಯೊಬ್ಬರು ತರಬೇತಿಯ ಸದುಪಯೋಗ ಪಡೆದುಕೊಳ್ಳಿ ಎಂದರು. ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿಕುಮಾರ್ ಎ, ಮುಖ್ಯ ಹಣಕಾಸು ಅಧಿಕಾರಿ ಶಂಕರ್ ನಟರಾಜ್, ಉಪಪ್ರಧಾನ ವ್ಯವಸ್ಥಾಪಕ ಎಂ ಅಂಬಲವನನ್, ಡಾ.ಜಿ ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ನಿಕೇತನ, ಶಿಕ್ಷಕಿ ದೀಪಿಕಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿದರು. ರೇಣುಕಾ ನಿರೂಪಿಸಿ ವಂದಿಸಿದರು.