ಗುತ್ತಿಗೆ ಅಕ್ರಮ: ರಾಜ್ಯ ಸರ್ಕಾರದ ಬಗ್ಗೆ ಹೈಕೋರ್ಟ್‌ ಗರಂ

| Published : Feb 11 2024, 01:51 AM IST

ಸಾರಾಂಶ

ವಿವಿಧ ಇಲಾಖೆ ಹಾಗೂ ಬಿಬಿಎಂಪಿಯ ಗುತ್ತಿಗೆ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿಚಾರಣೆಗೆ ನೇಮಕವಾದ ನಿವೃತ್ತ ನ್ಯಾಯಮೂರ್ತಿ ಎಚ್‌. ಎನ್‌. ನಾಗಮೋಹನದಾಸ ಅವರ ಏಕ ವ್ಯಕ್ತಿ ಆಯೋಗದ ಮುಂದೆ ಈವರೆಗೆ ಒಂದೂ ಪ್ರಕ್ರಿಯೆ ಸಹ ಯಾಕೆ ನಡೆದಿಲ್ಲವೆಂದು ರಾಜ್ಯ ಸರ್ಕಾರ ತಿಳಿಸಬೇಕು. ಇಲ್ಲದಿದ್ದರೆ ಸೂಕ್ತ ಆದೇಶ ಮಾಡಲಾಗುವುದು ಎಂದು ಹೈಕೋರ್ಟ್‌ ಎಚ್ಚರಿಕೆ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿವಿಧ ಇಲಾಖೆ ಹಾಗೂ ಬಿಬಿಎಂಪಿಯ ಗುತ್ತಿಗೆ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿಚಾರಣೆಗೆ ನೇಮಕವಾದ ನಿವೃತ್ತ ನ್ಯಾಯಮೂರ್ತಿ ಎಚ್‌. ಎನ್‌. ನಾಗಮೋಹನದಾಸ ಅವರ ಏಕ ವ್ಯಕ್ತಿ ಆಯೋಗದ ಮುಂದೆ ಈವರೆಗೆ ಒಂದೂ ಪ್ರಕ್ರಿಯೆ ಸಹ ಯಾಕೆ ನಡೆದಿಲ್ಲವೆಂದು ರಾಜ್ಯ ಸರ್ಕಾರ ತಿಳಿಸಬೇಕು. ಇಲ್ಲದಿದ್ದರೆ ಸೂಕ್ತ ಆದೇಶ ಮಾಡಲಾಗುವುದು ಎಂದು ಹೈಕೋರ್ಟ್‌ ಎಚ್ಚರಿಕೆ ನೀಡಿದೆ.ಕಳೆದ ವರ್ಷ ರಾಜ್ಯ ಸರ್ಕಾರ ನಾಗಮೋಹನ್‌ ದಾಸ್‌ ಅವರ ಏಕವ್ಯಕ್ತಿ ಆಯೋಗ ರಚಿಸಿರುವ ಆದೇಶ ರದ್ದುಪಡಿಸಬೇಕು ಎಂದು ಮೆರ್ಸಸ್‌ ನಿಕ್ಷೇಪ್‌ ಇನ್ಫ್ರಾ ಪ್ರಾಜೆಕ್ಟ್ಸ್‌ ಸೇರಿ ಹಲವು ಗುತ್ತಿಗೆ ಕಂಪೆನಿಗಳು, ಗುತ್ತಿಗೆದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಸಮಿತಿಯ ಮುಂದೆ ಇದುವರೆಗೆ ಯಾಕೆ ಒಂದೂ ಪ್ರಕ್ರಿಯೆ ನಡೆದಿಲ್ಲ ಎಂಬುದರ ಕುರಿತು ಮುಂದಿನ ವಿಚಾರಣೆಯಲ್ಲಿ ತಿಳಿಸಬೇಕು. ಒಂದು ವೇಳೆ ಪ್ರಕ್ರಿಯೆ ನಡೆಯದಿರುವುದನ್ನು ಸಮರ್ಥಿಸಿಕೊಳ್ಳದಿದ್ದರೆ ಅರ್ಜಿದಾರರ ಕೋರಿಕೆಯಂತೆ ಸೂಕ್ತ ಆದೇಶ ಮಾಡಲಾಗುವುದು. ಯಾವುದೇ ಪ್ರಕ್ರಿಯೆ ನಡೆಯದಿರುವುದು ಮತ್ತು ಯಾವ ಬೆಳವಣಿಗೆ ಆಗದಿರುವುದನ್ನು ಗಮನಿಸಿದರೆ ಅರ್ಜಿದಾರರ ವಾದ ಸರಿಯಿರುವಂತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ನಿವೃತ್ತ ನ್ಯಾ। ನಾಗಮೋಹನ್ ದಾಸ್ ಅವರ ನೇತೃತ್ವದ ಏಕ ಸದಸ್ಯ ಸಮಿತಿ ರಚಿಸಿರುವ ಆದೇಶ ರದ್ದು ಪಡಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.ಒಂದೇ ಒಂದು ದಾಖಲೆಯನ್ನೂ ಆಯೋಗಕ್ಕೆ ಸಲ್ಲಿಸಲಾಗಿಲ್ಲ. 2023ರ ಆ. 25 ರಂದು ನ್ಯಾ. ದಾಸ್ ಅವರ ಸಮಿತಿ ರಚಿಸಿದಾಗಿನಿಂದ ಒಂದು ಹಾಳೆಯನ್ನೂ ಅಲುಗಾಡಿಸಿಲ್ಲ ಎಂದು ಈ ಹಿಂದಿನ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಹೇಳಿದ್ದರು. ಗುತ್ತಿಗೆದಾರರಿಗೆ ಹಣ ಪಾವತಿಸುವುದರಿಂದ ಬಚಾವಾಗಲು ರಾಜ್ಯ ಸರ್ಕಾರ ಆಯೋಗ ರಚಿಸಿದೆ ಎಂದು ಅರ್ಜಿದಾರರು ದೂರಿದ್ದರು.