ಸಿ.ಸಿದ್ದರಾಜು, ಮಾದಹಳ್ಳಿ

ಕನ್ನಡಪ್ರಭ ವಾರ್ತೆ ಮಳವಳ್ಳಿ

ಬಡತನವನ್ನೇ ಬಂಡವಾಳ ಮಾಡಿಕೊಂಡಿರುವ ಹೊರ ರಾಜ್ಯದ ಉದ್ಯಮಿಗಳು ರೈತರಿಗೆ ಹಣದಾಸೆ ತೋರಿಸಿ ಭೂಮಿಯ ಫಲವತ್ತತೆಯನ್ನು ನುಂಗುವ ಶುಂಠಿ ಬೆಳೆಯನ್ನು ತಾಲೂಕಿನಾದ್ಯಂತ ಬೆಳೆಯಲು ಮುಂದಾಗಿದ್ದಾರೆ. ಇದರ ಅರಿವಿಲ್ಲದ ರೈತರು ಶುಂಠಿ ಬೆಳೆ ಬೆಳೆಯುವುದಕ್ಕೆ ಭೂಮಿಯನ್ನು ಗುತ್ತಿಗೆ ಕೊಡಲಾರಂಭಿಸಿದ್ದಾರೆ.

ಬಿ.ಜಿ.ಪುರ ಹೋಬಳಿ ಮಳೆಯಾಶ್ರಿತ ಪ್ರದೇಶವಾಗಿರುವುದರ ಜೊತೆಗೆ ಫಲವತ್ತತೆಯ ಕೆಂಪು ಮಣ್ಣಿನಿಂದ ಕೂಡಿದೆ. ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಈ ಪ್ರದೇಶದಲ್ಲಿ ಉತ್ತಮ ವಾತಾವರಣವಿದೆ. ಕೊಳವೆ ಬಾವಿ ನೀರಿನಿಂದ ಹಲವಾರು ರೈತರು ಟೊಮೆಟೋ, ಬೀನ್ಸ್, ಬದನೆಕಾಯಿ ಸೇರಿ ಹಲವು ಮಾದರಿಯ ಬೆಳೆಗಳನ್ನು ಬೆಳೆದು ಜೀವನ ಕಟ್ಟಿಕೊಂಡಿದ್ದಾರೆ.

ಸದ್ಯ ನೀರು, ಹಣದ ಅಭಾವ ಹಾಗೂ ಬೆಳೆ ಬೆಳೆಯಲು ಸಾಧ್ಯವಾಗದ ರೈತರ ಅಸಹಾಯಕತೆಯನ್ನು ಮನಗಂಡಿರುವ ತಮಿಳುನಾಡು ಹಾಗೂ ಕೇರಳ ಭಾಗದ ಉದ್ಯಮಿಗಳು ಪೂರಿಗಾಲಿ ಹೋಬಳಿಯ ರೈತರ ಮನವೊಲಿಸಿ ಶುಂಠಿ ಬೆಳೆಯುವುದಕ್ಕೆ ಭೂಮಿಯನ್ನು ಪಡೆದುಕೊಳ್ಳುತ್ತಿದ್ದಾರೆ.


ರೈತರ ಜಮೀನಿನಲ್ಲಿ ಅವರೇ ಕೊಳವೆಬಾವಿ ನಿರ್ಮಿಸಿ ಎಕರೆಗೆ ಇಂತಿಷ್ಟು ಹಣ ನೀಡುವ ಆಮಿಷಕ್ಕೆ ಒಳಪಡಿಸಿ ಶುಂಠಿ ಬೆಳೆಯಲು ಭೂಮಿ ನೀಡುವಂತೆ ಮಾಡುತ್ತಿದ್ದಾರೆ. ಇದಕ್ಕೆ ಒಪ್ಪಿ ರೈತರು ತಮ್ಮ ಜಮೀನಿನಲ್ಲಿ ಶುಂಠಿ ಬೆಳೆಯಲು ಭೂಮಿ ಬಿಟ್ಟುಕೊಡುತ್ತಿದ್ದಾರೆ. ಈಗಾಗಲೇ ಹೋಬಳಿಯ ಸುಮಾರು ೧೫೦ ಎಕರೆ ಜಮೀನಿನಲ್ಲಿ ಶುಂಠಿ ಬೆಳೆಯಲಾಗಿದೆ ಎಂದು ಅಂದಾಜಿಸಲಾಗಿದೆ.

ಬಿ.ಜಿ.ಪುರ ವ್ಯಾಪ್ತಿಯಲ್ಲಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರ ಕನಸಿನ ಕೂಸು ಪೂರಿಗಾಲಿ ಹನಿ ನೀರಾವರಿ ಯೋಜನೆ ಅಂತಿಮ ಹಂತದಲ್ಲಿದೆ. ಆದರೆ, ರೈತರು ಫಲವತ್ತಾದ ಭೂಮಿಯನ್ನು ಹಣದಾಸೆಗೆ ಮಾರುತ್ತಿರುವುದು ಒಂದು ಕಡೆಯಾದರೆ ಮತ್ತೊಂದಡೆ ಶುಂಠಿ ಬೆಳೆಯಲು ಜಮೀನನ್ನು ಗುತ್ತಿಗೆ ನೀಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಶುಂಠಿ ಬೆಳೆ ಬೆಳೆಯಲು ರೈತರು ಭೂಮಿ ಬಿಟ್ಟುಕೊಟ್ಟರಷ್ಟೇ ಸಾಕು. ಹೊರ ರಾಜ್ಯಗಳಿಂದ ಕೂಲಿಯಾಳುಗಳನ್ನು ಕರೆತಂದು ಇಲ್ಲಿ ಅವರೇ ಕೆಲಸ ಮಾಡಿಸಿಕೊಳ್ಳುತ್ತಾರೆ. ಸ್ಥಳೀಯ ರೈತರಿಗೆ ಶುಂಠಿ ಬೆಳೆ ಬೆಳೆಯುವ ಜ್ಞಾನವಿಲ್ಲ. ಬೆಳೆಗಳಿಗೆ ಬರುವ ರೋಗದ ಬಗ್ಗೆ ಎಚ್ಚರ ವಹಿಸುವುದಿಲ್ಲ. ಕೀಟನಾಶಕಗಳನ್ನು ಸಿಂಪರಣೆ ಮಾಡುವ ಅರಿವಿರುವುದಿಲ್ಲವೆಂಬ ಕಾರಣಕ್ಕೆ ಹೊರ ರಾಜ್ಯದಿಂದಲೇ ಕೂಲಿಯಾಳುಗಳನ್ನು ಇಲ್ಲಿಗೆ ಕರೆತಂದು ಕೆಲಸ ಮಾಡಿಸುವುದಕ್ಕೆ ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ.

ಶುಂಠಿಯು ಒಂದು ಅತಿ ಹೆಚ್ಚು ಪೋಷಕಾಂಶ ಬೇಡುವ ಬೆಳೆಯಾಗಿದ್ದು, ಮಣ್ಣಿನಲ್ಲಿರುವ ಸಾರಜನಕ, ರಂಜಕ ಮತ್ತು ಪೊಟ್ಯಾಷಿಯಂನ್ನು ದೊಡ್ಡ ಪ್ರಮಾಣದಲ್ಲಿ ಹೀರಿಕೊಳ್ಳುವುದರಿಂದ ಮಣ್ಣಿನ ಫಲವತ್ತತೆಯನ್ನು ಕಡಿಮೆಗೊಳಿಸುತ್ತದೆ. ಜೊತೆಗೆ ಶುಂಠಿಗೆ ಬರುವ ಗೆಡ್ಡೆ ಕೊಳೆ, ಸೊರಗು, ಕೀಟಬಾಧೆ, ಗಡ್ಡೆ ತಿನ್ನುವಹುಳ ಸೇರಿದಂತೆ ಇತರೆ ರೋಗಗಳನ್ನು ನಿಯಂತ್ರಿಸಲು ಪೀಡೆ ನಾಶಕಗಳನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಬ್ಯಾಕ್ಟೀರಿಯಾಗಳು ಮಣ್ಣಿನಲ್ಲಿ ದೀರ್ಘಕಾಲ ಉಳಿಯುತ್ತವೆ. ಇದರಿಂದ ಯಾವುದೇ ಬೆಳೆ ಬೆಳೆಯಬೇಕಾದರೂ ಹಲವು ವರ್ಷಗಳ ಕಾಲ ಕಾಯಬೇಕಾಗುತ್ತದೆ.

ಪೀಡೆನಾಶಕಗಳ ಅಂಶ ನೀರಿನೊಂದಿಗೆ ಸೇರಿ ನೀರು ಮಲೀನವಾಗಲಿದೆ. ಇದನ್ನು ಕುಡಿಯುವ ಜಲಚರ, ಪ್ರಾಣಿ, ಪಕ್ಷಿಗಳ ಜೀವಕ್ಕೆ ಕುತ್ತು ಬರುವುದಲ್ಲಿ ಯಾವುದೇ ಸಂಶಯವಿಲ್ಲ.

ಪರಿಹಾರ:

ಶುಂಠಿ ಬೆಳೆದ ನಂತರ ಅದೇ ಜಾಗದಲ್ಲಿ ಸತತವಾಗಿ ಅದೇ ಬೆಳೆಯನ್ನು ಬೆಳೆಯಬಾರದು. ಕನಿಷ್ಠ ೨-೩ ವರ್ಷಗಳ ಕಾಲ ದ್ವಿದಳ ಧಾನ್ಯಗಳು (ಅಲಸಂಧೆ, ಹೆಸರು) ಅಥವಾ ರಾಗಿ, ಜೋಳದಂತಹ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣಿನ ಸಾರ ಮರಳಿ ಬರುತ್ತದೆ. ಶುಂಠಿ ಕೊಯ್ಲಿನ ನಂತರ ಮಣ್ಣಿಗೆ ಸೆಣಬು ಅಥವಾ ಡಯಾಂಚದಂತಹ ಹಸಿರು ಗೊಬ್ಬರಗಳನ್ನು ಸೇರಿಸಿ ಉಳುಮೆ ಮಾಡುವುದರ ಜೊತೆಗೆ ಕೊಟ್ಟಿಗೆ ಗೊಬ್ಬರ ಅಥವಾ ಎರೆಹುಳು ಗೊಬ್ಬರವನ್ನು ಸೇರಿಸುವುದರಿಂದ ಮಣ್ಣಿನ ಜೀವಂತಿಕೆ ಉಳಿಯಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಳವಳ್ಳಿ ತಾಲೂಕಿನಲ್ಲಿ ಶುಂಠಿ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬಂದ ಉದ್ಯಮಿಗಳು ಭೂಮಿಯನ್ನು ಗುತ್ತಿಗೆ ಪಡೆದು ಶುಂಠಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಶುಂಠಿ ವಾಣಿಜ್ಯ ಬೆಳೆಯಾದರೂ ಕೂಡ ಶುಂಠಿ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಕಳೆದುಕೊಳ್ಳಬೇಕಾಗುತ್ತದೆ. ರೈತರು ಶುಂಠಿ ಬೆಳೆಯಲು ಭೂಮಿಯನ್ನು ನೀಡದೆ ಪೂರಿಗಾಲಿ ಹನಿನೀರಾವರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು.

- ರವಿಂದ್ರಕುಮಾರ್, ಬಾಚನಹಳ್ಳಿ

ಹಲವಾರು ವರ್ಷಗಳಿಂದ ನೀರು ಹಾಗೂ ಹಣದ ಸಮಸ್ಯೆಯಿಂದ ನಮಗೆ ಸೇರಿದ ಭೂಮಿಯನ್ನು ವ್ಯವಸಾಯ ಮಾಡಲು ಸಾಧ್ಯವಾಗುತ್ತಿಲ್ಲ. ಶುಂಠಿ ಬೆಳೆಯಲು ಕೊಟ್ಟರೆ ವರ್ಷಕ್ಕೆ ಇಂತಿಷ್ಟು ಹಣ ನೀಡುವುದರ ಜೊತೆಗೆ ಬೋರ್‌ವೆಲ್‌ನ್ನೂ ನಮಗೇ ಬಿಟ್ಟುಹೋಗುತ್ತಾರೆ. ಮಣ್ಣಿನ ಫಲವತ್ತತೆ ಬಗ್ಗೆ ನಮಗೆ ಸರಿಯಾದ ಮಾಹಿತಿ ಇಲ್ಲ. ಆದರೆ ನಮಗೆ ಹಣ ಬೇಕಿರುವುದರಿಂದ ಭೂಮಿಯನ್ನು ನೀಡುತ್ತಿದ್ದೇವೆ.

- ಗುರುಸ್ವಾಮಿ ರೈತ