ರೈಲ್ವೆ ಆಸ್ತಿ ಕಡಿಮೆ ಬೆಲೆಗೆ ಲೀಸ್‌: ಕಾಂಗ್ರೆಸ್‌ ಪ್ರತಿಭಟನೆ

| Published : Jan 19 2024, 01:45 AM IST

ಸಾರಾಂಶ

ಭಾರತೀಯ ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರದ ಸರಿಸುಮಾರು ₹300 ಕೋಟಿ ಬೆಲೆಬಾಳುವ ಭಾರಿ ಮೌಲ್ಯದ ಜಮೀನು ಕೇವಲ ₹83 ಕೋಟಿಗಳಿಗೆ ರಿಯಲ್‌ ಎಸ್ಟೇಟ್‌ ಕುಳಗಳ ಪಾಲಾಗುವ ಭೀತಿ ಎದುರಾಗಿದೆ. ಕೂಡಲೇ ಹರಾಜು ಪ್ರಕ್ರಿಯೆ ಕೈಬಿಡಬೇಕು

ಹುಬ್ಬಳ್ಳಿ: ನೂರಾರು ಕೋಟಿ ಬೆಲೆ ಬಾಳುವ ರೈಲ್ವೆ ಇಲಾಖೆಯ ಆಸ್ತಿಯನ್ನು ಖಾಸಗಿಯವರಿಗೆ ಕಡಿಮೆ ಬೆಲೆಗೆ ಲೀಸ್‌ ನೀಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಖಾತೆ ಸಚಿವ ಅಶ್ವಿನಕುಮಾರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ ನೇತೃತ್ವದಲ್ಲಿ ಕಾಂಗ್ರೆಸ್‌ ಕಚೇರಿಯಿಂದ ಎಂಟಿಎಸ್‌ ಕಾಲನಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಯಿತು.

ನೈರುತ್ಯ ರೈಲ್ವೆ ವಲಯದ ಕೇಂದ್ರ ಕಚೇರಿ ಇರುವ ಹುಬ್ಬಳ್ಳಿಯ ರೈಲು ನಿಲ್ದಾಣದಿಂದ ಕೇವಲ 4 ಕಿಮೀ ದೂರದಲ್ಲಿರುವ ಹಾಗೂ ಹುಬ್ಬಳ್ಳಿ ಕೇಂದ್ರ ಬಸ್‌ ನಿಲ್ದಾಣದಿಂದ 2 ಕಿಮೀ ಅಂತರ ಇರುವ ಹುಬ್ಬಳ್ಳಿಯ ಎಂಟಿಎಸ್‌ ಕಾಲನಿಯ ಸಂಪೂರ್ಣ 13 ಎಕರೆ ಭೂಮಿ ಹಾಗೂ ಹಾಲಿ ಇರುವ ಕಟ್ಟಡಗಳ ಸಹಿತ ಈಗ ₹ 83 ಕೋಟಿಗೆ 99 ವರ್ಷಗಳ ಲೀಸ್‌ ನೀಡಲು ಮುಂದಾಗಿದೆ. ಇದರಲ್ಲಿ ಬಿಜೆಪಿಯ ಭ್ರಷ್ಟಾಚಾರ ಅಡಗಿದೆ ಎಂದು ಆರೋಪಿಸಿದರು.

ಈ ವೇಳೆ ಮಾತನಾಡಿದ ಧಾರವಾಡ ಜಿಲ್ಲಾ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಬೆಲೆ ಬಾಳುವ ಸಾರ್ವಜನಿಕ ರೈಲ್ವೆ ಆಸ್ತಿಯನ್ನು ಯಾರಿಗೂ ಗೊತ್ತಾಗದಂತೆ ಖಾಸಗಿಯವರಿಗೆ ಲೀಸ್‌ ಕೊಡುತ್ತಿರುವುದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಸಾರ್ವಜನಿಕ ಆಸ್ತಿ ಸದ್ಬಳಕೆ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಆಲಿಸಬೇಕಿತ್ತು. ಏನು ಮಾಡದೇ ಏಕಾಏಕಿ ಆಸ್ತಿಯನ್ನು ಕಡಿಮೆ ದರದಲ್ಲಿ ಖಾಸಗಿಯವರಿಗೆ ಲೀಸ್‌ ಕೊಡುತ್ತಿರುವುದರ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕೈವಾಡ ಇದೆ ಎಂಬ ಶಂಕೆ ಬರುತ್ತಿದೆ ಎಂದು ಆರೋಪಿಸಿದರು.

ಭಾರತೀಯ ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರದ ಸರಿಸುಮಾರು ₹300 ಕೋಟಿ ಬೆಲೆಬಾಳುವ ಭಾರಿ ಮೌಲ್ಯದ ಜಮೀನು ಕೇವಲ ₹83 ಕೋಟಿಗಳಿಗೆ ರಿಯಲ್‌ ಎಸ್ಟೇಟ್‌ ಕುಳಗಳ ಪಾಲಾಗುವ ಭೀತಿ ಎದುರಾಗಿದೆ. ಕೂಡಲೇ ಹರಾಜು ಪ್ರಕ್ರಿಯೆ ಕೈಬಿಡಬೇಕು ಎಂದು ಒತ್ತಾಯಿಸಿದರು.

ನಗರ ಮಧ್ಯದಲ್ಲಿರುವ ಈ ಜಾಗದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಜನೋಪಯೋಗಿ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರವೇ ಕೈಗೊಳ್ಳಬೇಕು ಎಂದರು.

ಪ್ರತಿಭಟನೆಯಲ್ಲಿ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ ಹಳ್ಳೂರ, ಪಾರಸಮಲ್‌ ಜೈನ್‌, ಸತೀಶ ಮೆಹರವಾಡೆ, ಸದಾನಂದ ಡಂಗನವರ, ಗಂಗಾಧರ ದೊಡ್ಡವಾಡ, ಶರಣಪ್ಪ ಕೊಟಗಿ, ರಾಜಶೇಖರ ಮೆಣಸಿನಕಾಯಿ ಸೇರಿದಂತೆ ಹಲವರು ಇದ್ದರು.