ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತ ಲೆದರ್ ಬಾಲ್ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಶುಕ್ರವಾರದ ಸಂಘರ್ಷಪೂರ್ಣ ಪಂದ್ಯದಲ್ಲಿ ಕೂರ್ಗ್ ಬ್ಲಾಸ್ಟರ್ಸ್ ತಂಡ ಅಂಜಿಗೇರಿ ನಾಡ್ ತಂಡದ ವಿರುದ್ಧ 5 ರನ್‌ಗಳ ಅಂತರದ ಮಹತ್ವದ ಗೆಲವು ದಾಖಲಿಸಿತು.ಮೊದಲು ಬ್ಯಾಟಿಂಗ್‌ಗೆ ಇಳಿದ ಕೂರ್ಗ್ ಬ್ಲಾಸ್ಟರ್ಸ್ ತಂಡ, ಎದುರಾಳಿ ಅಂಜಿಗೇರಿ ನಾಡ್ ತಂಡದ ಬೌಲಿಂಗ್‌ನ್ನು ವಿಶ್ವಾಸದಿಂದ ಎದುರಿಸಿದ್ದಲ್ಲದೆ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 173 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ತಂಡದ ತಿಮ್ಮಯ್ಯ ಕೇವಲ 56 ಬಾಲ್‌ಗಳಿಗೆ 71 ರನ್‌ಗಳನ್ನು ಕಲೆ ಹಾಕಿ ತಂಡದ ಮೊತ್ತವನ್ನು ಹೆಚ್ಚಿಸಲು ಮಹತ್ವದ ಕಾಣಿಕೆ ನೀಡಿದರು.
ಗೆಲವಿನ ಗುರಿ ಬೆನ್ನು ಹತ್ತಿದ ಅಂಜಿಗೇರಿ ನಾಡ್ ತಂಡ, ವಿಶ್ವಾಸಪೂರ್ಣ ಆಟ ಪ್ರದರ್ಶಿಸಿತು. ಹೀಗಿದ್ದೂ ಕೊನೆಯ ಓವರ್‌ಗಳಲ್ಲಿ ನಿರೀಕ್ಷಿತ ರನ್‌ಗಳನ್ನು ಕಲೆ ಹಾಕಲು ಸಾಧ್ಯವಾಗದೆ ಅಂತಿಮವಾಗಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್‌ಗಳನ್ನಷ್ಟೆ ಮಾಡಲು ಶಕ್ತವಾಗಿ ವೀರೋಚಿತ ಸೋಲಿಗೆ ಶರಣಾಯಿತು.ಸೊಗಸಾದ ಪಂದ್ಯದಲ್ಲಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಕೂರ್ಗ್ ಬ್ಲಾಸ್ಟರ್ಸ್ ತಂಡದ ತಿಮ್ಮಯ್ಯ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಎರಡನೇ ಪಂದ್ಯದಲ್ಲಿ ಕೊಡವ ವಾರಿಯರ್ಸ್ ತಂಡದ ವಿರುದ್ಧ ಎಂಟಿಬಿ ರಾಯಲ್ಸ್ ತಂಡಕ್ಕೆ 2 ವಿಕೆಟ್‌ಗಳ ಜಯ ದಾಖಲಿಸಿತು.ಕೊಡವ ವಾರಿಯರ್ಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 19 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 89 ರನ್ ಗಳನ್ನು ಗಳಿಸಿತು. ಇದನ್ನು ಬೆನ್ನಟ್ಟಿದ ಎಂಟಿಬಿ ರಾಯಲ್ಸ್ ತಂಡ 18 ಓವರ್ ಗಳಲ್ಲಿ 90 ರನ್ ದಾಖಲಿಸಿ ಜಯ ಸಾಧಿಸಿತು. ಸೋಮಣ್ಣ ಸಿ.ಎಂ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು. .............
ಇಂದಿನ ಪಂದ್ಯಬೆಳಗ್ಗೆ 8.30ಕ್ಕೆ: ರಾಯಲ್ ಟೈಗರ್ಸ್ -ಟೀಮ್ ಕೊಡವ ಟ್ರೆಂಬ್ಮಧ್ಯಾಹ್ನ 1:30ಕ್ಕೆ: ಕೂರ್ಗ್ ಯುನೈಟೆಡ್ - ಎಂಟಿಬಿ ರಾಯಲ್ಸ್