ಸಾರಾಂಶ
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಪುರಸಭೆಯ ಅಡಳಿತಾಧಿಕಾರ ಒಂದು ವರ್ಷದಿಂದ ಆಡಳಿತಾಧಿಕಾರಿಗಳ ಅಧಿಕಾರ ವ್ಯಾಪ್ತಿಯಲ್ಲಿತ್ತು. ಚುನಾವಣೆ ಬಳಿಕ ನೂತನ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆದು ಪ್ರಥಮ ಬಾರಿಗೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಅಧ್ಯಕ್ಷತೆಯಲ್ಲಿ ಪುರಸಭೆ ಸಾಮಾನ್ಯ ಸಭೆಯು ಪುರಸಭೆ ಸಭಾಂಗಣದಲ್ಲಿ ನಡೆಯಿತು.ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಸಭೆಯಲ್ಲಿ ಮಾತನಾಡಿ, ದೇಶದಲ್ಲಿ ಪೆಟ್ರೋಲ್ ಬೆಲೆ ಎರಿಕೆಗೆ ಶಾಸಕರನ್ನು ಬೊಟ್ಟು ಮಾಡಿ ಪ್ರತಿಕೃತಿ ದಹನ ಮಾಡುವ ಕೃತ್ಯ ಬಿಟ್ಟು, ನಗರಾಭಿವೃದ್ಧಿಯತ್ತ ಚಿಂತಿಸಬೇಕು. ಚುನಾವಣೆ ರಾಜಕೀಯದಲ್ಲಿ ಯಾರೂ ಶಾಶ್ವತರಲ್ಲಿ ಜಾತಿ ಮತ್ತು ಧರ್ಮದ ರಾಜಕೀಯ ಚುನಾವಣೆಗೆ ಮಾತ್ರ ಸೀಮಿತವಾಗುವಂತಿರಬೇಕು. ಮೊದಲು ನಗರದ ಅಭಿವೃದ್ಧಿಗೆ ಸರ್ವರೂ ಕೈಜೋಡಿಸುವಂತಾಗಬೇಕು ಎಂದು ಸಭೆಯಲ್ಲಿ ಹೇಳಿದರು.
ಮುಖ್ಯಮಂತ್ರಿ ನಿಧಿಯಿಂದ ರಾಜ್ಯದಲ್ಲಿ ಎರಡು ಪುರಸಭೆಗೆ ನೂತನ ಕಟ್ಟಡ ನಿರ್ಮಾಣಕ್ಕಾಗಿ 7.50 ಕೋಟಿ ರು. ಅನುದಾನ ನೀಡಲಾಗಿದೆ. ಈ ಪೈಕಿ ವಿರಾಜಪೇಟೆ ಪುರಸಭೆಯೂ ಒಂದು. ಶೇ.25ರಷ್ಟು ಹಣ ಸ್ಥಳೀಯ ಸಂಸ್ಥೆಯಿಂದ ಭರಿಸಲಾಗುತ್ತದೆ. ನಗರದ ತರಕಾರಿ ಮಾರುಕಟ್ಟೆಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಸುಮಾರು 2.50 ಕೋಟಿ ರು. ಹಣ ಬಿಡುಗಡೆಗೊಳಿಸಲಾಗಿದೆ ಎಂದರು.ಹಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ ರಾಜಕಾಲುವೆ ಬಗ್ಗೆ ಸಂದೇಶಗಳು ಹರಿದಾಡುತ್ತಿವೆ. ಇದರ ಬಗ್ಗೆ ಸದಸ್ಯರು ಅಭಿಪ್ರಾಯ ತಿಳಿಸಬೇಕು ಎಂದು ಅಧ್ಯಕ್ಷೆ ಮನವಿ ಮಾಡಿದರು.
ಪಟ್ಟಡ ರಂಜಿ ಪೂಣಚ್ಚ ಮತ್ತು ಡಿ.ಪಿ ರಾಜೇಶ್ ಉತ್ತರಿಸಿ, ನಮ್ಮಲ್ಲಿ ತೋಡು, ಕಡಂಗ ಮತ್ತು ರಾಜಕಾಲುವೆಗಳ ನಡುವೆ ಗೊಂದಲಗಳಿವೆ. ಮೊದಲು ಗದ್ದೆ ಪ್ರದೇಶಗಳಾಗಿದ್ದ ಸ್ಥಳಗಳು ಇಂದು ವಸತಿ ಪ್ರದೇಶಗಳಾಗಿವೆ. ಅಲ್ಲದೆ ಕೊಡಗಿನಲ್ಲಿ ಅತ್ಯಧಿಕ ಸುಮಾರು 150 ಇಂಚು ಮಳೆಯಾಗುತ್ತಿದೆ. ಮಳೆಯಿಂದಾಗಿ ತೋಡುಗಳಲ್ಲಿ ನೀರಿನ ಹರಿವು ಹೆಚ್ಚಳವಾದಾಗ ನೀರು ರಸ್ತೆಯ ಮೇಲೆ ಹರಿಯುವುದು ಸಾಮಾನ್ಯ ಎಂದರು.ಅಧ್ಯಕ್ಷೆ ಪ್ರತಿಕ್ರಿಯಿಸಿ, ಪುರಸಭೆಯಲ್ಲಿ ರಾಜಕಾಲುವೆ ಬಗ್ಗೆ ಯಾವುದೇ ದಾಖಲೆ ಪತ್ರಗಳು ಇಲ್ಲ. ತಹಸೀಲ್ದಾರ್, ಕಂದಾಯ ಇಲಾಖೆ, ಮತು ಪುರಸಭೆ ಅಧಿಕಾರಿಗಳ ಸಭೆ ಕರೆದು ಒಂದು ತಿಂಗಳ ಅವದಿಯಲ್ಲಿ ರಾಜಕಾಲುವೆ ಬಗ್ಗೆ ಚರ್ಚಿಸಿ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.
ಸರ್ಕಾರದ ಆದೇಶದಂತೆ ಮಳಿಗೆ, ಸಂಸ್ಥೆಗಳ ನಾಮ ಫಲಕದಲ್ಲಿ ಶೇಕಡ ೬೦ ರಷ್ಟು ಕನ್ನಡ ಬಳಸುವಂತೆ ಆದೇಶವಿದ್ದರೂ ನಗರದಲ್ಲಿ ಅನುಷ್ಠಾನ ವಿಳಂಬವಾಗುತ್ತಿದೆ ಎಂದು ರಾಜೇಶ್ ಪದ್ಮನಾಭ ಹೇಳಿದರು.ಸ್ವಲ್ಪ ಅಧ್ಯಕ್ಷರಿಗೆ ಕಾಲಾವಕಾಶ ನೀಡಿ ಎಂದು ಸಿ.ಕೆ. ಪ್ರಥ್ವಿನಾಥ್ ಮನವಿ ಮಾಡಿದರು. ಇದರ ಬಗ್ಗೆ ಕೊಂಚ ಸಮಯ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಅಧ್ಯಕ್ಷೆ ಪ್ರತಿಕ್ರಿಯೆ ನೀಡಿ, ವರ್ಷದ ಹಿಂದೆ ಸರ್ಕಾರದ ಆದೇಶದ ಅನ್ವಯ ಆಟೋ ಮೂಲಕ, ಪತ್ರಿಕೆ ಮಾಧ್ಯಮ ಮೂಲಕ ಪ್ರಚಾರ ನೀಡಲಾಗಿದೆ. ಆದೇಶ ಪಾಲನೆ ಮಾಡದವರ ವಿರುದ್ಧ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದರು.ಒಂದು ತಿಂಗಳ ಕಾಲಾವಕಾಶ ಅಂತಿಮ ಎಂದು ಪರಿಗಣಿಸಿ ಪ್ರಚಾರ ನೀಡಲಾಗುತ್ತದೆ. ಕಾನೂನು ಉಲ್ಲಂಘನೆಯಾದಲ್ಲಿ ನಿಯಮಾನುಸಾರ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.
ಉಪಾಧ್ಯಕ್ಷೆ ಫಸಿಯಾ ತಬ್ಸುಂ, ಪರಿಸರ ಅಭಿಯಂತರಾದ ರೀತು ಸಿಂಗ್, ಕಿರಿಯ ಅಭಿಯಂತರಾದ (ಸಿವಿಲ್) ರಾಮಚಂದ್ರ ಮತ್ತು ಅರೋಗ್ಯ ಅಧಿಕಾರಿ, ಮತ್ತು ಇತರ ಸಿಬ್ಬಂದಿ ಇದ್ದರು.ಪುರಸಭಾ ಸದಸ್ಯರಾದ ಅಬ್ದುಲ್ರ ಜಲೀಲ್, ರಜನಿಕಾಂತ್ ವಿ.ಆರ್, ಸುಭಾಷ್, ಆಶಾ ಸುಬ್ಬಯ್ಯ, ಅನಿತಾ ಕುಮಾರ್, ಯಶೋಧ ಮಂದಣ್ಣ, ಎಚ್.ಆರ್. ಪೂರ್ಣಿಮಾ, ಟಿ.ಆರ್. ಸುಶ್ಮೀತಾ, ನಾಮ ನಿರ್ದೇಶಿತ ಸದ್ಯರಾದ ಮೋಹನ್, ಕೆ.ಇ. ದಿನೇಶ್ ನಂಬಿಯಾರ್ ಸಿ.ಎಂ, ಸಿ.ಬಿ ರವೀಂದ್ರ ಮತ್ತಿತರರಿದ್ದರು.