ಸಾರಾಂಶ
ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಬಹಿರಂಗ ಆಹ್ವಾನ
ಕನ್ನಡಪ್ರಭ ವಾರ್ತೆ ಹಾಸನಜಿಲ್ಲೆಯಲ್ಲಿ ಕೇವಲ ಒಂದು ಕುಟುಂಬದೊಳಗೆ ಮಾತ್ರ ಅಧಿಕಾರಿ ಹಂಚಿಕೆಯಾಗುತ್ತಿದ್ದು, ಬೇರೆ ಯಾರಿಗೂ ಬೆಲೆಯೇ ಇಲ್ಲದಂತಾಗಿದೆ. ಹಾಗಾಗಿ ಎಲ್ಲರ ಹಿತ ಕಾಯುವ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಬಹಿರಂಗ ಆಹ್ವಾನ ನೀಡಿದರು.
ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ‘ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ದೇಶದಲ್ಲಿ ಬದಲಾವಣೆ ತರುವ ಗಾಳಿ ಬೀಸಿದ್ದು, ದೇಶದ ಜನರ ಭಾವನೆಗಳೊಂದಿಗೆ ಚೆಲ್ಲಾಟ ಆಡುತ್ತಿರುವ ಕೋಮುವಾದಿ ಶಕ್ತಿಗಳ ವಿರುದ್ಧ ಇಂಡಿಯಾ ಒಕ್ಕೂಟ ಮೇಲುಗೈ ಸಾಧಿಸಲಿದೆ. ಹಾಸನದಲ್ಲೂ ಬದಲಾವಣೆ ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜಾತ್ಯತೀತ ಜನತಾದಳ ಎಂದು ಹೆಸರಿಟ್ಟುಕೊಂಡು ಆ ಪದಕ್ಕೆ ವಿರುದ್ಧವಾಗಿ ಜೆಡಿಎಸ್ ಪಕ್ಷ ನಡೆದುಕೊಳ್ಳುತ್ತಿದೆ. ಜಾತ್ಯತೀತವಾದ ನಿಲುವು ಕಳೆದುಕೊಳ್ಳುತ್ತಿರುವ ಜೆಡಿಎಸ್ ಮುಂದಿನ ದಿನಗಳಲ್ಲಿ ಅಳಿವಿನಂಚಿಗೆ ಹೋಗಲಿದೆ. ಹಾಸನದಲ್ಲಿ ಕುಟುಂಬದೊಳಗೇ ಅಧಿಕಾರ ಹಂಚಿಕೆಯಾಗಿದೆಯೇ ಹೊರತು ಮುಖಂಡರು ಹಾಗೂ ಕಾರ್ಯಕರ್ತರಿಗೆ ಇಲ್ಲಿ ಯಾವುದೇ ಬೆಲೆ ಇಲ್ಲದಂತಾಗಿದೆ. ಹಾಗಾಗಿ ಎಲ್ಲರ ಹಿತ ಕಾಯುವ ಕಾಂಗ್ರೆಸ್ ಪಕ್ಷಕ್ಕೆ ಬರಬೇಕು. ಹಾಲಿ ಸಂಸದ, ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಅಭಿವೃದ್ಧಿ ಕೆಲಸ ಮಾಡದೆ ಕ್ಷೇತ್ರದ ಜನರಿಗೆ ಅನ್ಯಾಯ ಮಾಡಿದ್ದಾರೆ’ ಎಂದು ಟೀಕಿಸಿದರು.
ಆರಂಭದಲ್ಲಿ ಪ್ರಜ್ವಲ್ ನುಡಿದಂತೆ ನಡೆದಿಲ್ಲ. ಅವರಿಗೆ ಪ್ರೀತಿ ಹಾಗೂ ಮತ ಕೊಟ್ಟ ಜನತೆಗೆ ಪ್ರಜ್ವಲ್ ಕೊಡುಗೆ ಏನು? ಜಿಲ್ಲೆಯಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಅದರಲ್ಲೂ ಮಲೆನಾಡು ಭಾಗದಲ್ಲಿ ಕಾಡಾನೆ ದಾಳಿಗೆ ಜನತೆ ನಲುಗುತ್ತಿದ್ದಾರೆ. ಹಾಸನ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕುಂಟುತ್ತ ಸಾಗುತ್ತಿದೆ. ಇದಕ್ಕೆಲ್ಲಾ ಹಾಲಿ ಸಂಸದರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ಪತ್ನಿ ಅಕ್ಷತಾ ಮಾತನಾಡಿ, ‘ನಾನು ಶ್ರೇಯಸ್ ಪಟೇಲ್ ಅವರ ಮದುವೆ ಆದ ದಿನದಿಂದಲೂ ಅವರ ಸ್ವಭಾವ ನನಗೆ ಇಷ್ಟವಾಗಿದೆ. ಪತಿ ಒಳ್ಳೆಯ ವ್ಯಕ್ತಿ. ಮಹಿಳೆಯರಿಗೆ ಗೌರವ ಕೊಡುತ್ತಾರೆ. ಜನರ ಭಾವನೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತೊಬ್ಬರ ಕಷ್ಟ ಸುಖಕ್ಕೆ ಸ್ಪಂದಿಸುತ್ತಾರೆ. ಅವರಿಗೆ ಜನ ಸೇವೆ ಮಾಡುವ ಬಯಕೆ ಇದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರನ್ನು ಈ ಬಾರಿ ಬೆಂಬಲಿಸಿ, ಗೆಲ್ಲಿಸಿ’ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ತಾರಾ ಚಂದನ್, ಹೊಳೆನರಸೀಪುರ ಮಹಿಳಾ ಘಟಕದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶೃತಿ, ರತ್ನಮ್ಮ ಇದ್ದರು.ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮಾತನಾಡಿದರು.