ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕಾಶಿ ಎಂದೇ ಖ್ಯಾತವಾದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಆರಂಭವಾದ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರ ರೋಡ್ ಶೋ ಪೇಟೆಯಾದ್ಯಂತ ಸಂಚರಿಸಿತು.ಈ ಸಂದರ್ಭ ಪದ್ಮರಾಜ್ ಆರ್. ಫೂಜಾರಿ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವ ಅಭಿವೃದ್ಧಿಯ ಒಂದಂಶದ ಸಾಧನೆಯನ್ನೂ ಬಿಜೆಪಿ ಸಂಸದರು ಮಾಡಿಲ್ಲ. ಅನ್ಯೋನ್ಯವಾಗಿ ಬಾಳಿಕೊಂಡಿದ್ದ ಜಿಲ್ಲೆಯ ಶಾಂತಿಯನ್ನು ಕೆಡಿಸಿದ್ದೇ ಬಿಜೆಪಿ ಸಾಧನೆ. ಹಾಗಾಗಿ ಈ ಬಾರಿ ಜನ ಬದಲಾವಣೆ ಬಯಸಿದ್ದಾರೆ. ದ್ವೇಷ ಮಾಡದೆ ಪ್ರೀತಿಯಿಂದ ಜನರ ಮನ ಗೆಲ್ಲೋಣ ಎಂದು ಹೇಳಿದರು.
ಉದ್ಯೋಗ, ಆರೋಗ್ಯ ಸೇವೆಗೆ ಆದ್ಯತೆ:ವಿಟ್ಲದಲ್ಲಿ ಪಂಚಲಿಂಗೇಶ್ವರ ದೇವಾಲಯದಿಂದ ರೋಡ್ ಶೋ ಆರಂಭಿಸಿದ ಪದ್ಮರಾಜ್, ಪೇಟೆಯಲ್ಲಿ ಮತಪ್ರಚಾರ ನಡೆಸಿದರು. ಈ ಸಂದರ್ಭ ಮಾತನಾಡಿದ ಅವರು, ಜಿಲ್ಲೆಗೆ ಮೂಲಸೌಕರ್ಯ, ಸವಲತ್ತು ತಂದುಕೊಟ್ಟದ್ದು ಕಾಂಗ್ರೆಸ್ ಸಂಸದರು. ನಂತರ ಬಂದ ಬಿಜೆಪಿ ಸಂಸದರು ಯಾವುದೇ ಕೊಡುಗೆ ನೀಡಿಲ್ಲ. ಕಾಂಗ್ರೆಸ್ ಸಂಸದರು ನೀಡಿದ ಅಭಿವೃದ್ಧಿ ಕೊಡುಗೆಗಳನ್ನು ಉನ್ನತೀಕರಿಸುವ ಕೆಲಸವನ್ನೂ ಮಾಡಿಲ್ಲ. ಆದರೆ ಕಾಂಗ್ರೆಸ್ ಮಾಡಿದ ಅಭಿವೃದ್ಧಿ ಕೆಲಸಗಳು ಜನರ ಮುಂದೆಯೇ ಇವೆ. ಚುನಾವಣೆ ಬಳಿಕ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ, ಆರೋಗ್ಯ ಸೇವೆಗೆ ಆದ್ಯತೆ ನೀಡಲಾಗುವುದು ಎಂದರು.
ಜೆಸಿಬಿಯಲ್ಲಿ ಪುಷ್ಪವೃಷ್ಟಿ ಸ್ವಾಗತ:ಅಡ್ಡೂರಿಗೆ ಪದ್ಮರಾಜ್ ಆರ್. ಪೂಜಾರಿ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಅವರನ್ನು ಹೆಗಲ ಮೇಲೆ ಕುಳ್ಳಿರಿಸಿ ವೇದಿಕೆಗೆ ಕರೆದೊಯ್ದರು. ಕರೆದೊಯ್ಯುವಾಗ ರಸ್ತೆಯ ಇಕ್ಕೆಲಗಳಲ್ಲಿ ಎರಡು ಜೆಸಿಬಿ ಮೂಲಕ ಪದ್ಮರಾಜ್ ಅವರ ಮೇಲೆ ಪುಷ್ಪವೃಷ್ಟಿಗೈದು ವಿಶೇಷವಾಗಿ ಸ್ವಾಗತಿಸಿದರು.ಗುರು ಮಂದಿರ, ದೇವಾಲಯ ಭೇಟಿ:
ಉಪ್ಪಿನಂಗಡಿ ಸಹಸ್ರಲಿಂಗೇಶ್ವರ, ವಿಟ್ಲ ಪಂಚಲಿಂಗೇಶ್ವರ, ಕುಪ್ಪೆಪದವು ಬ್ರಹ್ಮಶ್ರೀ ಗುರುನಗರ ಶ್ರೀ ನಾರಾಯಣ ಗುರು ಮಂದಿರ, ಶ್ರೀ ದುರ್ಗೇಶ್ವರಿ ದೇವಿ ದೇವಸ್ಥಾನ, ಎಡಪದವು ಶ್ರೀರಾಮ ಮಂದಿರ, ಕುಪ್ಪೆಪದವು ಬದ್ರಿಯಾ ಜುಮಾ ಮಸೀದಿ, ಕುಪ್ಪೆಪದವು ಇಮ್ಮೆಕ್ಯುಲೇಟ್ ಹಾರ್ಟ್ ಆಫ್ ಮೇರಿ ಚರ್ಚ್‌ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಪುತ್ತೂರು ಶಾಸಕ ಅಶೋಕ್ ರೈ, ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮುಖಂಡರಾದ ಇನಾಯತ್ ಅಲಿ, ರಮಾನಾಥ ವಿಟ್ಲ, ವಿಟ್ಲ ಅರಮನೆಯ ಕೃಷ್ಣಯ್ಯ, ಪೃಥ್ವಿರಾಜ್, ಸುರೇಂದ್ರ ಕಾಂಬ್ಳಿ, ಗಿರೀಶ್ ಆಳ್ವ, ಹರಿಯಪ್ಪ ಮುತ್ತೂರು, ಶಾಲೆಟ್ ಪಿಂಟೋ, ಡಾ. ರಾಜಾರಾಮ್ ಕೆ.ಪಿ., ಎಂ.ಎಸ್. ಮಹಮ್ಮದ್, ಎಂ.ಬಿ. ವಿಶ್ವನಾಥ ರೈ, ಪ್ರವೀಣ್ ಚಂದ್ರ ಆಳ್ವ, ವಿಟ್ಲ ಜಮಾತ್ ಅಧ್ಯಕ್ಷ ಮಹಮ್ಮದ್ ಅಶ್ರಫ್ ಪೊನ್ನೊಟ್ಟು ಮತ್ತಿತರರು ಇದ್ದರು.