ಸಾರಾಂಶ
ಈಗಿನ ಮಕ್ಕಳು ಮೊಬೈಲ್ ಫೋನ್ ಗೀಳಿಗೆ ಅಂಟಿಕೊಂಡಿದ್ದಾರೆ. ಈ ಚಟವನ್ನು ಬಿಟ್ಟು ಓದಿನ ಕಡೆಗೆ ಆಸಕ್ತಿ ತೋರಬೇಕು ಎಂದು ಆಲಗಟ್ಟ ಗ್ರಾಪಂ ಪಿಡಿಓ ಬಸವರಾಜ್ ಸಲಹೆ ನೀಡಿದರು.
ಸಿರಿಗೆರೆ: ಈಗಿನ ಮಕ್ಕಳು ಮೊಬೈಲ್ ಫೋನ್ ಗೀಳಿಗೆ ಅಂಟಿಕೊಂಡಿದ್ದಾರೆ. ಈ ಚಟವನ್ನು ಬಿಟ್ಟು ಓದಿನ ಕಡೆಗೆ ಆಸಕ್ತಿ ತೋರಬೇಕು ಎಂದು ಆಲಗಟ್ಟ ಗ್ರಾಪಂ ಪಿಡಿಓ ಬಸವರಾಜ್ ಸಲಹೆ ನೀಡಿದರು.
ಸಮೀಪದ ದೊಡ್ಡಾಲಘಟ್ಟ ಗ್ರಾಮ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ವಿಶೇಷ ಗ್ರಾಮ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿ ಜೀವನ ಅತ್ಯಂತ ಸುಂದರ ಮತ್ತು ಸುಮಧುರವಾದುದು. ಅದನ್ನು ಸಾರ್ಥಕ ಮಾಡಿಕೊಳ್ಳಲು ಮಕ್ಕಳು ಓದಿನ ಕಡೆ ಹೆಚ್ಚು ಗಮನ ನೀಡಬೇಕು. ಜೊತೆಗೆ ಎಲ್ಲಾ ಬಗೆಯ ದುಶ್ಚಟಗಳಿಂದ ದೂರ ಇರಬೇಕು ಎಂದರು.
ಅದೆಷ್ಟೇ ತಿಳುವಳಿಕೆ ನೀಡಿದರೂ ಸುತ್ತಲ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಲೇ ಇವೆ. ಬಾಲ್ಯ ವಿವಾಹಗಳನ್ನು ತಡೆಯುವುದು ಪ್ರತಿಯೊಬ್ಬ ನಾಗರಿಕರ ಹೊಣೆಗಾರಿಕೆ ಆಗಿದೆ. ಮಕ್ಕಳು ಇದನ್ನು ಅರಿತು, ಅಂತಹ ಪ್ರಸಂಗಗಳು ಗಮನಕ್ಕೆ ಬಂದ ಕೂಡಲೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚಿಸಿದರು.ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಎಂ.ನಾಗರಾಜಪ್ಪ ಮಾತನಾಡಿ, 15ನೇ ಹಣಕಾಸಿನ ಯೋಜನೆ ಅಡಿಯಲ್ಲಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಶಾಲೆಗಳ ಮಕ್ಕಳಿಗಾಗಿ ವಿಶೇಷ ಅನುದಾನದ ಮೂಲಕ ಕ್ರೀಡಾ ಸಾಮಗ್ರಿಗಳು, ಅಂಗನವಾಡಿ ಮಕ್ಕಳಿಗೆ ಪೀಠೋಪಕರಣಗಳನ್ನು ಒದಗಿಸಲಾಗುವುದು ಎಂದರು.
ಓಬವ್ವನಾಗತ್ತಿಹಳ್ಳಿ, ಆಲಘಟ್ಟ, ಚಿಕ್ಕಲಘಟ್ಟ, ಚೀಕೆನಹಳ್ಳಿ, ವಡ್ಡರ ಸಿದ್ಧವನಹಳ್ಳಿ, ಬೋಮ್ಮವನಾಗತ್ತಿಹಳ್ಳಿ, ಕೋಣನೂರು ಗ್ರಾಮಗಳ ಸರ್ಕಾರಿ ಸರ್ಕಾರಿ ಶಾಲೆಗಳಿಗೆ ಕ್ರೀಡಾ ಚಟುವಟಿಕೆಗಳ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.ಗ್ರಾಪಂ ಉಪಾಧ್ಯಕ್ಷೆ ಲಲಿತಮ್ಮ, ಸದಸ್ಯರುರಾದ ಪಾಂಡುರಂಗ, ರತ್ನಮ್ಮ, ರಮೇಶ್, ವಿನೋದಮ್ಮ, ಮಂಜುಳಾ, ಇತರರು ಭಾಗವಹಿಸಿದ್ದರು.