ಸಂಕುಚಿತ ಮನೋಭಾವ ಬಿಟ್ಟು ಧರ್ಮ ಬೆಳೆಸಿರಿ

| Published : Dec 29 2024, 01:19 AM IST

ಸಾರಾಂಶ

ಮಕ್ಕಳು, ಮೊಮ್ಮಕ್ಕಳಲ್ಲಿ ಧರ್ಮದ ಬಗ್ಗೆ ಭಯ ಹುಟ್ಟಿಸುವ ಕೆಲಸವಾಗಬಾರದು. ಅದರ ಬದಲಾಗಿ ಧರ್ಮಾಚರಣೆಗೆ ಇರುವ ಸುಲಭದ ಉಪಾಯಗಳ ಬಗ್ಗೆ ತಿಳಿಹೇಳಬೇಕು

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮನೆ, ಮನೆಗಳಲ್ಲಿ ಧರ್ಮ ಬೆಳೆಯಬೇಕೆಂದರೆ ಅದರ ಬಗ್ಗೆ ಇರುವ ಸಂಕುಚಿತ ಮನೋಭಾವದಿಂದ ಹೊರಬರಬೇಕೆಂದು ಯುವಾತ್ಮ ಸಂಘಟನೆ ಮಾರ್ಗದರ್ಶಕ ಪಂ.ವಿದ್ಯಾಧೀಶಾಚಾರ್ಯ ಗುತ್ತಲ ಕರೆ ನೀಡಿದರು.

ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರ ಬಾಗಲಕೋಟೆ ಭೇಟಿ ಪ್ರಯುಕ್ತ ಶ್ರೀಗಳ ಉಪಸ್ಥಿತಿಯಲ್ಲಿ ನಡೆದ ಯುವಗೋಷ್ಠಿಯಲ್ಲಿ ವಿಶೇಷ ಪ್ರವಚನ ನೀಡಿದ ಅವರು, ಮಕ್ಕಳು, ಮೊಮ್ಮಕ್ಕಳಲ್ಲಿ ಧರ್ಮದ ಬಗ್ಗೆ ಭಯ ಹುಟ್ಟಿಸುವ ಕೆಲಸವಾಗಬಾರದು. ಅದರ ಬದಲಾಗಿ ಧರ್ಮಾಚರಣೆಗೆ ಇರುವ ಸುಲಭದ ಉಪಾಯಗಳ ಬಗ್ಗೆ ತಿಳಿಹೇಳಬೇಕೆಂದರು. ಧರ್ಮವನ್ನು ಇಂದು ಸಂಕುಚಿತ ಭಾವದಿಂದ ಕಾಣಲಾಗುತ್ತಿದೆ. ಪೂಜೆ ಮಾಡುವುದೊಂದೇ ಧರ್ಮವಲ್ಲ ಸಮಾಜದ ಅಭಿವೃದ್ಧಿ, ಕಲ್ಯಾಣ, ಪರೋಪಕಾರದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಮನೆಗಳಲ್ಲಿ ನಿತ್ಯ ಸಂಧ್ಯಾವಂದನೆ ಮಾಡಬೇಕು. ಇದರಿಂದ ದೂರವಾಗಿ ದೇವರು ಯಾಕೆ ಬೇಕು ಎಂದು ಕೇಳುವಷ್ಟರ ಮಟ್ಟಿಗೆ ಸಮಾಜ ಸಂಕುಚಿತ ಭಾವಕ್ಕೆ ತೆರಳಬಾರದು. ಧರ್ಮ ರಕ್ಷಣೆಗೆ ಯವಶಕ್ತಿಯ ಲೇಪನವಾಗಬೇಕಿದೆ ಎಂದರು.

ಒಂದು ಕಾಲದಲ್ಲಿ ಎಲ್ಲದಕ್ಕೂ ದೇಶವನ್ನು ದೂಷಿಸಲಾಗುತಿತ್ತು. ಆದರೆ ದೇಶಕ್ಕೆ ಇರುವ ಸಮಸ್ಯೆಗಳನ್ನು ಅರಿತು ಅದಕ್ಕೆ ಪರಿಹಾರ ಹುಡುಕುವ ಕೆಲಸ ಯುವಜನಾಂಗದಿಂದ ನಡೆಯಿತು. ಅಂತೆಯೇ ಧರ್ಮಕ್ಕೆ ಸಂಕಟ ಬಂದರೆ ದೂರುವುದನ್ನು ನಿಲ್ಲಿಸಿ ಪರಿಹಾರ ಕಂಡು ಹಿಡಿಯುವ ಕೆಲಸವನ್ನು ಯುವಸಮೂಹ ಮಾಡಬೇಕೆಂದರು. ಧರ್ಮ ಮತ್ತು ಧಾಮಿರ್ಕತೆಯಲ್ಲಿ ನಾವೀನ್ಯತೆಬೇಕು. ಧರ್ಮ ಶಾಶ್ವತ ಅದನ್ನು ಬೆಳೆಸುವ ಕೆಲಸವಾಗಬೇಕು. ಧಾರ್ಮಿಕತೆಯಲ್ಲಿ ಯುವಕರು ಬೆರೆಯದಿದ್ದರೆ ಧರ್ಮ ಉಳಿಯುವುದು ಕಷ್ಟವಾಗಲಿದೆ ಎಂದರು.

ಸಭೆಯ ಕೊನೆಯಲ್ಲಿ ಉತ್ತರಾದಿಮಠಾಧೀಶರಾದ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು ಭಾಗವತದ ಕುರಿತಾಗಿ ಪ್ರವಚನ ನೀಡಿದರು. ಆತ್ಮಾಶ್ರಮದ ರಾಘವೇಂದ್ರಾಚಾರ್ಯ ರಾಚೂರಿ ಅವರು ಪ್ರವಚನ ನೀಡಿದರು. ಶ್ರೀಗಳಿಗೆ ಬಾಗಲಕೋಟೆ ವಿಪ್ರ ಸಮಾಜದಿಂದ ಸಂಗ್ರಹಿಸಿದ ದೇಣಿಗೆ ಸಮರ್ಪಿಸಲಾಯಿತು. ಪಂ.ಆನಂದತೀರ್ಥಾಚಾರ್ಯ ನಾಗಸಂಪಿಗೆ, ಪಂ.ರಘೋತ್ತಮಾಚಾರ್ಯ ನಾಗಸಂಪಿಗೆ, ಪಂ.ವಿಜಯೇಂದ್ರಾಚಾರ್ಯ ಕಂಚಿ, ಪಂ.ವಾದಿರಾಜಾಚಾರ್ಯ ಕಂಚಿ, ಪಂ.ಭೀಮಸೇನಾಚಾರ್ಯ ಪಾಂಡುರಂಗಿ, ಪಂ.ಬಿಂದುಮಾಧವಾಚಾರ್ಯ ನಾಗಸಂಪಿಗೆ, ಪಂ.ವಿಜಯೇಂದ್ರಾಚಾರ್ಯ ನಾಗಸಂಪಿಗೆ, ಪಂ.ವಿಜಯೇಂದ್ರಾಚಾರ್ಯ ಯತ್ನಟ್ಟಿ, ಪಂ.ನವೀನಾಚಾರ್ಯ ಜೋಶಿ, ಪಂ.ಆದಿಶೇಷಾಚಾರ್ಯ ಯಲಗೂರ, ಪಂ.ಉಡುಪಿ ಕೃಷ್ಣಾಚಾರ್ಯ ಗುಮಾಸ್ತೆ, ಸಮಾಜದ ಮುಖಂಡರಿದ್ದರು.