ದಮನಿತ ವರ್ಗದ ಯುವಕರು ಕೇವಲ ಮೀಸಲಾತಿಯ ಮೇಲೆಯೇ ಅವಲಂಬಿತರಾಗದೆ, ವಿವಿಧ ಕೌಶಲ ಬೆಳೆಸಿಕೊಂಡು ಸ್ವತಂತ್ರವಾಗಿ ಬದುಕುವ ಸಾಮರ್ಥ್ಯ ರೂಢಿಸಿಕೊಳ್ಳಬೇಕು.

ಧಾರವಾಡ:

ದಮನಿತ ವರ್ಗದ ಯುವಕರು ಕೇವಲ ಮೀಸಲಾತಿಯ ಮೇಲೆಯೇ ಅವಲಂಬಿತರಾಗದೆ, ವಿವಿಧ ಕೌಶಲ ಬೆಳೆಸಿಕೊಂಡು ಸ್ವತಂತ್ರವಾಗಿ ಬದುಕುವ ಸಾಮರ್ಥ್ಯ ರೂಢಿಸಿಕೊಳ್ಳಬೇಕು ಎಂದು ಅಂಬೇಡ್ಕರ್ ಚಿಂತಕ ಗೋಪಿನಾಥ್ ಎಂ. ಅಭಿಪ್ರಾಯಪಟ್ಟರು.ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ವಿಭಾಗವು ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ 77ನೇ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಭಾರತದ ಪ್ರತಿಯೊಬ್ಬ ಪ್ರಜೆಗೂ ''''ಒಂದು ಮತ, ಒಂದು ಮೌಲ್ಯ'''' ಎಂಬ ಸಮಾನತೆಯ ಹಕ್ಕನ್ನು ನೀಡಿದ್ದಾರೆ. ದಮನಿತ ಹಾಗೂ ಹಿಂದುಳಿದ ವರ್ಗಗಳಿಗೆ ಸಂವಿಧಾನದ ಮೂಲಕ ಹಲವು ಅವಕಾಶಗಳನ್ನು ಕಲ್ಪಿಸಿದ್ದು, ಯುವಜನರು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಆದರೆ, ಪ್ರಸ್ತುತ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಸಮಾನವಾಗಿಲ್ಲ. ದೇಶದ ಆರ್ಥಿಕತೆಯು ಕೆಲವೇ ಕುಟುಂಬಗಳ ಕೈಯಲ್ಲಿ ನಿಯಂತ್ರಣ ಆಗುತ್ತಿರುವುದರಿಂದ ಇಂದಿಗೂ ಆರ್ಥಿಕ ಸಮಾನತೆ ದೊರಕಿಲ್ಲ. ಅಂಬೇಡ್ಕರ್ ಮತ್ತು ಸಂವಿಧಾನವನ್ನು ಕೇವಲ ದೈವಿ ರೂಪದಲ್ಲಿ ಪೂಜಿಸುತ್ತಿರುವುದು ವಿಷಾದಕರ ಸಂಗತಿ ಎಂದು ಹೇಳಿದರು.

ಇಂದು ಸಂವಿಧಾನದ ಆಶಯಗಳನ್ನು ರಕ್ಷಿಸುವ ಜವಾಬ್ದಾರಿ ಯುವಪೀಳಿಗೆಯ ಮೇಲಿದೆ. ರಾಜಕೀಯ, ಸಾಮಾಜಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಮಾನತೆ ತಂದಾಗ ಮಾತ್ರ ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯ. ದಮನಿತ ವರ್ಗದ ಯುವಕರಿಗೆ ಜಾಗತೀಕರಣ ಒಂದು ವರದಾನವಾಗಿದ್ದು, ಹೊಸ ಕೌಶಲ ಕಲಿಯಬೇಕು. ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಂಡು, ಜೀವನದಲ್ಲಿ ರಿಸ್ಕ್ ತೆಗೆದುಕೊಂಡಾಗ ಮಾತ್ರ ಯಶಸ್ವಿಯಾಗಿ ಬೆಳೆಯಲು ಸಾಧ್ಯ " ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಎ.ಎಂ. ಖಾನ್ ಅವರು ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು. ಕುಲಸಚಿವ ಡಾ. ಅರವಿಂದ ಕರಬಸವನಗೌಡರ ಅತಿಥಿಗಳನ್ನು ಸ್ವಾಗತಿಸಿದರು. ಅಂಬೇಡ್ಕರ್ ಅಧ್ಯಯನ ವಿಭಾಗದ ಸಂಯೋಜಕ ಡಾ. ಸುಭಾಸಚಂದ್ರ ನಾಟೀಕರ ಪ್ರಾಸ್ತಾವಿಕ ಮಾತನಾಡಿದರು. ಇದೇ ವೇಳೆ ಪ್ರೊ. ಶರೀಫ್ ಶಾಡಂಬಿ ಮತ್ತು ತಂಡದವರು ಕ್ರಾಂತಿಗೀತೆ ಹಾಡಿದರು.

ಕಾರ್ಯಕ್ರಮದಲ್ಲಿ ಡಾ. ಶ್ಯಾಮಲಾ ರತ್ನಾಕರ, ಹಣಕಾಸು ಅಧಿಕಾರಿ ಪ್ರದೀಪಕುಮಾರ, ಪ್ರೊ. ಸಿ. ಕೃಷ್ಣಮೂರ್ತಿ, ಡಾ. ರವೀಂದ್ರ ಕಾಂಬಳೆ, ಪ್ರೊ. ಟಿ.ಟಿ. ಬಸವನಗೌಡ, ಸಿಂಡಿಕೇಟ್ ಸದಸ್ಯ ಮಹೇಶ ಹುಲ್ಲಣ್ಣವರ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಸಂಗಪ್ಪ ಚಲುವಾದಿ ಸೇರಿದಂತೆ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು.