ಸಾರಾಂಶ
- ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಸಮಾವೇಶ । ಪ್ರತಿ ಕ್ಷೇತ್ರ ಗೆಲುವು ಮುಖ್ಯ ಎಂದ ಸಂಸದ - - -
ಕನ್ನಡಪ್ರಭ ವಾರ್ತೆ, ದಾವಣಗೆರೆಲೋಕಸಭೆ ಚುನಾವಣೆಯಲ್ಲಿ ಪ್ರತಿ ಓಟು, ಪ್ರತಿ ಕ್ಷೇತ್ರವೂ ಅತ್ಯಂತ ಮಹತ್ವದ್ದಾಗಿದೆ. ತಮಗೆ, ತಮ್ಮವರಿಗೆ ಟಿಕೆಟ್ ಸಿಗಲಿಲ್ಲವೆಂದು ಮುನಿಸಿಕೊಂಡರೆ ದೇಶವು ಒಬ್ಬ ಉತ್ತಮ ಪ್ರಧಾನಿಯನ್ನೇ ಕಳೆ ದುಕೊಳ್ಳಬೇಕಾಗುತ್ತದೆ ಎಂಬ ಅರಿವಿರಲಿ. ನರೇಂದ್ರ ಮೋದಿ ಕೈ ಬಲಪಡಿಸಲು, ಮೂರನೇ ಬಾರಿಗೆ ಪ್ರಧಾನಿ ಮಾಡಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಮೈಸೂರು ಸಂಸದ ಪ್ರತಾಪ ಸಿಂಹ ಹೇಳಿದರು.
ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಮಂಗಳವಾರ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನಿ ಆಗದಿದ್ದರೆ ದೇಶಕ್ಕೆ, ಪಕ್ಷಕ್ಕಷ್ಟೇ ಅಲ್ಲ, ದೇಶದ ಜನತೆಗೂ ಅನ್ಯಾಯವಾಗಲಿದೆ ಎಂದರು.ಇಂದಿರಾ ಗಾಂಧಿಯವರ ತೀವ್ರ ಅಲೆ ಇದ್ದಾಗ 1984ರಲ್ಲಿ ಅಜಾತಶತೃ ಅಟಲ್ ಬಿಹಾರಿ ವಾಜಪೇಯಿ ಸೋತಿದ್ದರು. ಆದರೆ, ತಾವು ಸೋಲನ್ನು ಒಪ್ಪುವುದಿಲ್ಲ ಎಂದು ಆತ್ಮಸ್ಥೈರ್ಯ ತೋರಿಸಿ, 1996ರಲ್ಲಿ ಗೆಲುವು ಕಂಡರಾದರೂ 13 ದಿನಕ್ಕೆ ವಾಜಪೇಯಿ ಸರ್ಕಾರ ಪತನವಾಯಿತು. 1999ರಲ್ಲಿ ಮತ್ತೆ ಪ್ರಧಾನಿಯಾಗಿ 5 ವರ್ಷ ಆಡಳಿತ ನಡೆಸಿದ ವಾಜಪೇಯಿ ಹಲವಾರು ಯೋಜನೆ ಜಾರಿಗೆ ತಂದರು ಎಂದರು.
ಸಿದ್ದರಾಮಯ್ಯ ತಮಟೆ ಬಾರಿಸಿಕೊಂಡು ಹೇಳುವ ಅನ್ನಭಾಗ್ಯ ಯೋಜನೆ ವಾಜಪೇಯಿ ಕೂಸು. ದೇಶದಲ್ಲಿ 13 ಸಾವಿರ ಕಿಮೀ ಚತುಷ್ಪಥ ರಸ್ತೆ ನಿರ್ಮಿಸಿದರು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ವಾಜಪೇಯಿ ಬದ್ಧತೆಗೆ ಸಾಕ್ಷಿ. ದೇಶಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡಿದ್ದ ವಾಜಪೇಯಿ 2004ರಲ್ಲಿ ಕಾರ್ಯಕರ್ತರ ಉದಾಸೀನತೆ, ತಪ್ಪಿನಿಂದ ಸೋಲಬೇಕಾಯಿತು. ದೇಶವು 10 ವರ್ಷ ಕಾಂಗ್ರೆಸ್ ಆಳ್ವಿಕೆಯಲ್ಲಿ ಕಗ್ಗತ್ತಲಲ್ಲಿ ಇರಬೇಕಾಯಿತು. 2004ರಲ್ಲಿ ಮಾಡಿದ ತಪ್ಪನ್ನು ಈಗ ಮತ್ತೆ ಯಾರು ಪುನರಾವರ್ತಿಸಬೇಡಿ ಎಂದ ಅವರು, ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಗೆಲ್ಲಿಸಿ, ಪ್ರಥಮ ಮಹಿಳಾ ಸಂಸದೆಯಾಗಿ ಲೋಕಸಭೆ ಕಳಿಸಿ ಎಂದು ಪ್ರತಾಪ ಸಿಂಹ ಮನವಿ ಮಾಡಿದರು.ಭಾರಿ ಮತಗಳ ಅಂತರದಿಂದ ಗೆಲ್ಲಿಸಿ:
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರ ಪರಿಶ್ರಮದಿಂದಲೇ ನಾವು ಸಂಸದರಾಗಿ, ನರೇಂದ್ರ ಮೋದಿ ಪ್ರಧಾನಿಯಾಗಲು ಸಾಧ್ಯವಾಗಿದೆ. ಒಂದೇ ಒಂದು ದಿನ ರಜೆಯನ್ನು ತೆಗೆದುಕೊಳ್ಳದೇ, ದಿನದ 18 ಗಂಟೆ ಕೆಲಸ ಮಾಡಿರುವ ಪ್ರಧಾನಿ ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ ಮಾತ್ರ. ದಾವಣಗೆರೆ ಕ್ಷೇತ್ರದಲ್ಲಿ ಗಾಯತ್ರಿ ಸಿದ್ದೇಶ್ವರರನ್ನು ಭಾರಿ ಮತಗಳ ಅಂತರದಲ್ಲಿ ಗೆಲ್ಲಿಸಿ, ಲೋಕಸಭೆ ಸದಸ್ಯರಾಗಿ ಮಾಡುವ ಮೂಲಕ ದಾವಣಗೆರೆಯಿಂದ ಮೋದಿ ಅವರಿಗೆ ಕೊಡುಗೆ ನೀಡೋಣ ಎಂದರು.ಅಭಿವೃದ್ಧಿ ಮರೆತ ಕಾಂಗ್ರೆಸ್:
ಅಧ್ಯಕ್ಷತೆ ವಹಿಸಿದ್ದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಎಲ್. ಶಿವಪ್ರಕಾಶ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಂದಿನ ಜನ್ಮದಲ್ಲಿ ಮುಸ್ಲಿಮರಾಗಿ ಹುಟ್ಟಬೇಕಂತೆ. ಕಾಂಗ್ರೆಸ್ ಸರ್ಕಾರದ ಯೋಜನೆ ಅಲ್ಪಸಂಖ್ಯಾತರಿಗಷ್ಟೇ ಇವೆ ಎಂಬಂತಾಗಿದೆ. ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನೂ ಸಿದ್ದರಾಮಯ್ಯ ಸರ್ಕಾರ ಕೈಗೊಂಡಿಲ್ಲ. ಅಭಿವೃದ್ಧಿಗೆ ಬದಲಾಗಿ ಪಾಕಿಸ್ತಾನಕ್ಕೆ ಜಿಂದಾಬಾದ್, ಬಾಂಬ್ ಬ್ಲಾಸ್ಟ್ ಹೀಗೆ ಇಂತಹದ್ದೇ ಈ ಸರ್ಕಾರದ ಸಾಧನೆಗಳಾಗಿವೆ ಎಂದು ಟೀಕಿಸಿದರು.ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಟಿ.ದಾಸಕರಿಯಪ್ಪ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಜಿ.ಎಸ್.ಶ್ಯಾಮ್ ಮಾಯಕೊಂಡ, ರಾಜೀವ್, ಮಾಜಿ ಮೇಯರ್ ಎಸ್.ಟಿ.ವೀರೇಶ, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ ಇತರರು ಇದ್ದರು.
- - - ಬಾಕ್ಸ್ಅನ್ನಭಾಗ್ಯ ಮೂಲ ವಾಜಪೇಯಿ ಯೋಜನೆ
ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತಂದವರೇ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. 2000ರಲ್ಲಿ ದೇಶದ 8 ಸವಾಲಿಗೆ ಪರಿಹಾರ ಕಂಡುಕೊಳ್ಳಲು ರಾಜಸ್ಥಾನದಲ್ಲಿ ಮೊದಲ ಬಾರಿಗೆ 30 ಕೆಜಿ ಅಕ್ಕಿ, ಗೋಧಿ, ಬೇಳೆ ವಿತರಿಸಿದರು. ವಾಜಪೇಯಿ ಅವಧಿಯಲ್ಲಿ ಶೇ.80 ಜನರಿಗೆ ಉಚಿತ ಪಡಿತರ ನೀಡಲಾಗಿತ್ತು. ಅನಂತರ ಅದನ್ನೇ ಕಾಂಗ್ರೆಸ್ ಸರ್ಕಾರವು ಕಾನೂನು ರೂಪವಾಗಿ ಆಹಾರ ಭದ್ರತೆ ಯೋಜನೆಯಾಗಿ ಜಾರಿಗೊಳಿತು. ಆಹಾರ ಭದ್ರತೆ ಯೋಜನೆಯ ಮೂಲ ವಾಜಪೇಯಿ ಎಂದು ಪ್ರತಾಪ ಸಿಂಹ ತಿಳಿಸಿದರು.- - - ಬಾಕ್ಸ್-2 ಶಾಮನೂರು ಪ್ರಧಾನಿ ಮೋದಿ ಅಭಿಮಾನಿ ಕಾಂಗ್ರೆಸ್ಸಿನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅಭಿಮಾನಿ. ಹಾಗಾಗಿಯೇ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಗೆಲ್ಲಬೇಕೆಂದು ಹೇಳಿದ್ದರು. ಶಾಮನೂರು ಪರೋಕ್ಷವಾಗಿ ದಾವಣಗೆರೆಯಲ್ಲೂ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರರನ್ನೇ ಗೆಲ್ಲಿಸುವಂತೆ ಕರೆ ನೀಡಿದ್ದಾರೆ. ಒಂದುವೇಳೆ ಕಾಂಗ್ರೆಸ್ಸಿನ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಗೆದ್ದರೆ ತಮ್ಮ ಮನೆಯಲ್ಲೇ ಬೆಂಕಿ ಹೊತ್ತಿಕೊಳ್ಳುತ್ತದೆಂಬುದು ಶಾಮನೂರು ಶಿವಶಂಕರಪ್ಪ ಅವರಿಗೂ ಗೊತ್ತಿದೆ ಎಂದೂ ಸಂಸದ ಪ್ರತಾಪ ಸಿಂಹ ಹೇಳಿದರು.
- - - ಬಾಕ್ಸ್-3 ಅಭಿವೃದ್ಧಿ ತೋರಿಸಿದರೆ ರಾಜಕೀಯ ನಿವೃತ್ತಿಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಮಾತನಾಡಿ, ದಾವಣಗೆರೆ ಗಂಡು ಅಂದರೆ ಎಸ್.ಎಸ್. ಮಲ್ಲಿಕಾರ್ಜುನ ಅಂತಾ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರಿದ ಪಾಲಿಕೆ ಸದಸ್ಯ ಹೇಳಿದ್ದಾರೆ. ಹಾಗಿದ್ದರೆ, ಆ ಹೇಳಿಕೆ ನೀಡಿದ ಪಾಲಿಕೆ ಸದಸ್ಯ ಶಾಂತಕುಮಾರ ಏನು? ಕಳೆದ ಲೋಕಸಭೆ ಚುನಾವಣೆಯಲ್ಲಿ ನಿಲ್ಲಲು ಧೈರ್ಯವಿಲ್ಲದ್ದಕ್ಕೆ ಪಕ್ಷದ ಜಿಲ್ಲಾಧ್ಯಕ್ಷನನ್ನೇ ಹರಕೆ ಕುರಿ ಮಾಡಿ, ಚುನಾವಣೆಯಲ್ಲಿ ಸೋಲಿಸಿದ್ದು ಇಲ್ಲಿನ ಕಾಂಗ್ರೆಸ್ ನಾಯಕ. ಇವರೆಂತಹ ಗಂಡು? ಜಿಲ್ಲಾ ಮಂತ್ರಿಗೆ ತಾಕತ್ತಿದ್ದರೆ ಕಳೆದ ಒಂದು ವರ್ಷದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ ತೋರಿಸಿದರೆ ರಾಜಕೀಯ ನಿವೃತ್ತಿ ಪಡೆಯುವೆ ಎಂದರು.
- - -ಟಾಪ್ ಕೋಟ್
ಕಾರ್ಯಕರ್ತರ ಮೇಲೆ ಧಮ್ಕಿ ಹಾಕಿಯೇ ಕಾಂಗ್ರೆಸ್‌ನವರು ಕೆಲಸ ಮಾಡಿಸಿಕೊಳ್ಳುತ್ತಾರೆ. ಆದರೆ, ನಮ್ಮ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಸರಳತೆಗೆ ಹೆಸರಾಗಿದ್ದು, ಯಾರಿಗೂ ಧಮ್ಕಿ ಹಾಕುವುದಿಲ್ಲ. ಇಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರರನ್ನು ಗೆಲ್ಲಿಸಿ, ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗಲು ಮಧ್ಯ ಕರ್ನಾಟಕ ಜನತೆ ತಮ್ಮ ಕೊಡುಗೆ ನೀಡಬೇಕು- ಪ್ರತಾಪ ಸಿಂಹ, ಮೈಸೂರು ಸಂಸದ
- - - -(ಫೋಟೋ ಬರಲಿವೆ)