ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಮನುಷ್ಯರಲ್ಲಿ ತುಂಬಿಕೊಂಡಿರುವ ಸ್ವಾರ್ಥ, ಅಸೂಯೆ, ನಾನು, ನನ್ನದು ಎಂಬ ನಕಾರಾತ್ಮಕ ಗುಣಗಳಿಂದ ಮನಸ್ತಾಪ, ಕಲಹಗಳು ಹಾಗೂ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿರುವುದು ಹೆಚ್ಚಾಗಿರುವುದರಿಂದ ಎಲ್ಲರೂ ಪರಸ್ಪರ ಪ್ರೀತಿ, ಸಹೋದರತ್ವ, ನಿಸ್ವಾರ್ಥತೆ, ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡು ಹೋಗಬೇಕಿದೆ ಎಂದು ನಿವೃತ್ತ ಎಸಿಪಿ ಲೋಕೇಶ್ವರ ತಿಳಿಸಿದರು.ನಗರದ ಬ್ರಹ್ಮ ಕುಮಾರಿ ಸಮಾಜದ ವತಿಯಿಂದ ಮಹಾಶಿವರಾತ್ರಿಯ ಪ್ರಯುಕ್ತ ೮೮ನೇ ತ್ರಿಮೂರ್ತಿ ಶಿವ ಜಯಂತಿ ಅಂಗವಾಗಿ ಆಯೋಜಿಸಿದ್ದ ಶಿವನ ಜನ್ಮ ದಿನಾಚರಣೆ ಮತ್ತು ಶಾಂತಿಯಾತ್ರೆ ರಥವನ್ನು ಸ್ವಾಗತಿಸಿ, ಧ್ವಜಾರೋಹಣ ನೆರವೇರಿಸಿ, ಮಾತನಾಡಿದ ಅವರು, ವಿಭಕ್ತ ಕುಟುಂಬಗಳ ವ್ಯವಸ್ಥೆಯಿಂದ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಹಿಂದೆಲ್ಲ ಅವಿಭಕ್ತ ಕುಟುಂಬಗಳು ಹಬ್ಬ - ಹರಿದಿನಗಳನ್ನು ಎಲ್ಲರೂ ಕೂಡಿ ಆಚರಿಸುತ್ತಿದ್ದರು. ಆದರೆ ಇತ್ತೀಚಿನವರಿಗೆ ಹಬ್ಬಗಳ ಆಚರಣೆಯೇ ಸರಿಯಾಗಿ ಗೊತ್ತಿಲ್ಲ, ಮಕ್ಕಳಿಗೆ ಅಜ್ಜಿ, ತಾತ, ಇತರೆ ಸಂಬಂಧಗಳ ಬಗ್ಗೆಯೇ ತಿಳಿದಿಲ್ಲ, ಭಯ, ಭಕ್ತಿ ಇಲ್ಲದಂತಾಗಿದೆ. ಕೂಡು ಕುಟುಂಬಗಳಲ್ಲಿರುವ ಸಾಮರಸ್ಯ, ಹೊಂದಾಣಿಕೆ ಮನೋಭಾವ ಮತ್ತೆ ಬರಬೇಕಿದೆ ಎಂದರು.
ಶಿವರಾತ್ರಿಯು ಹಿಂದೂಗಳ ಪವಿತ್ರ ಹಬ್ಬವಾಗಿದೆ. ಶಿವನನ್ನು ಜಪಿಸುವ ಮೂಲಕ ಜೀವನಲ್ಲಿ ನೆಮ್ಮದಿಯನ್ನು ಕಾಣಬಹುದು. ಈಶ್ವರಿ ವಿಶ್ವವಿದ್ಯಾಲಯದಲ್ಲಿ ತ್ರಿಮೂರ್ತಿ ಶಿವಜಯಂತಿ ಕಾರ್ಯಕ್ರಮವನ್ನು ತಿಪಟೂರಿನ ಸೇವಾ ಕೇಂದ್ರದಲ್ಲೂ ಆಚರಿಸಿ, ಆಗಮಿಸಿದ ಶಾಂತಿಯಾತ್ರೆಯನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು. ಬ್ರಹ್ಮಕುಮಾರಿ ಸಮಾಜವು ಸಮಾಜದ ಏಳಿಗೆಗಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ ಎಂದರು.ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ ಮಾತನಾಡಿ, ಶಿವರಾತ್ರಿಯಲ್ಲಿ ಎರಡು ಪದಗಳಿವೆ. ಶಿವ ಎಂದರೆ ಆನಂದ, ರಾತ್ರಿ ಎಂದರೆ ಕತ್ತಲು. ಇದು ಅಜ್ಞಾನದ ಸಂಕೇತ. ಅಜ್ಞಾನವನ್ನು ಕಳೆದು ಸುಜ್ಞಾನದ ಕಡೆ ಹೋಗುವ ಪ್ರಕ್ರಿಯೆಯ ಸಂಕೇತವಾಗಿ ಈ ಹಬ್ಬವನ್ನು ಆಚರಣೆ ಮಾಡುತ್ತೇವೆ ಎಂದರು.
ಪ್ರಜಾಪಿತ ಬ್ರಹ್ಮಕುಮಾರಿ ಸಮಾಜದ ಬಿ.ಕೆ. ಪಾರ್ವತಿ ಅಕ್ಕ ಮಾತನಾಡಿ, ಮಹಾಶಿವರಾತ್ರಿಯು ಎಲ್ಲಾ ಹಬ್ಬಗಳಿಗಿಂತ ಶ್ರೇಷ್ಠವಾದ ಹಬ್ಬವಾಗಿದೆ. ಶಿವರಾತ್ರಿ ಪರಮಾತ್ಮನ ದಿವ್ಯ ಅವತರಣೀಯ ಸ್ಮಾರಕದ ಮಹಾಪರ್ವವಾಗಿದೆ. ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಿ ಸುಭೀಕ್ಷವಾಗಿ ಜನರು ಬದುಕನ್ನು ನಡೆಸಬೇಕು. ಪುರಾತನವಾಗಿ ನಡೆದುಕೊಂಡು ಬಂದಿರುವ ಹಬ್ಬ- ಹರಿದಿನಗಳನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಿ ಪರಮಾತ್ಮನ ಕೃಪೆಗೆ ಎಲ್ಲರೂ ಭಾಗಿಯಾಗಬೇಕಿದೆ. ಈ ಬಾರಿ ಶಿವರಾತ್ರಿ ನೆನಪಿನಾರ್ಥ ಶಿವನ ಸಂದೇಶವಾದ ಅಂಧಕಾರವನ್ನು ಅಳಿಸಿ ಜ್ಞಾನಜ್ಯೋತಿ ಬೆಳಗಿಸುವ ನಿಟ್ಟಿನಲ್ಲಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಶಾಂತಿಯಾತ್ರೆ ಹಮ್ಮಿಕೊಂಡು ಅದರಂತೆ ನಗರದಲ್ಲಿಯೂ ಯಾತ್ರೆಯನ್ನು ಸ್ವಾಗತಿಸಿ ಶಿವಸಂದೇಶವನ್ನು ಸಾರಲಾಯಿತು ಎಂದರು.ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಚನ್ನಬಸವಣ್ಣ, ವಿಶ್ವನಾಥ್, ಹೊನ್ನಪ್ಪ, ಕೇಂದ್ರದ ಸಹೋದರಿಯರು, ಭಕ್ತರು ಭಾಗವಹಿಸಿದ್ದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಶಾಂತಿಯಾತ್ರೆ ರಥ ಸಂಚರಿಸಿತು.