ಸಾರಾಂಶ
* ಪ್ರಧಾನಿ ಬಳಿ ಹೋಗಿ ರಾಜ್ಯ ಎದುರಿಸುತ್ತಿರುವ ಸಮಸ್ಯೆ, ಸಂಕಷ್ಟ ಹೇಳಿ: ಬಿಜೆಪಿಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಲಹೆ ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದಲ್ಲಿ ಬರ ಅಧ್ಯಯನ ಪ್ರವಾಸ ಮಾಡುವುದನ್ನು ಬಿಟ್ಟು, ಪ್ರಧಾನಿ ನರೇಂದ್ರ ಮೋದಿ ಬಳಿ ಹೋಗಲಿ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ವಿಪಕ್ಷದ ನಾಯಕರಿಗೆ ಕಿವಿಮಾತು ಹೇಳಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯ ಎದುರಿಸುತ್ತಿರುವ ಸಮಸ್ಯೆ, ಸಂಕಷ್ಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಗಮನಕ್ಕೆ ತಂದು, ರಾಜ್ಯಕ್ಕೆ ಅಗತ್ಯವಿರುವ ಅನುದಾನ ತರುವ ಕೆಲಸ ಬಿಜೆಪಿ ನಾಯಕರು ಮಾಡಲಿ ಎಂದರು. ಬಿಜೆಪಿಯವರಿಗೆ ಮಾಡುವುದಕ್ಕೆ ಯಾವುದೇ ಕೆಲಸ ಇಲ್ಲ. ಇದೇ ಕಾರಣಕ್ಕೆ ಬರ ಅಧ್ಯಯನ ಸೇರಿ ಹಲವು ಪ್ರವಾಸ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಧೈರ್ಯವಿದ್ದರೆ ಪ್ರಧಾನಿ ಮೋದಿ ಬಳಿ ಹೋಗಿ, ಮಂಡಿಯೂರಿ ಕುಳಿತು ಮಾತನಾಡುವುದು ಬಿಟ್ಟು, ಧೈರ್ಯದಿಂದ ಮಾತನಾಡಿ, ರಾಜ್ಯಕ್ಕೆ ಬರ ಪರಿಹಾರದ ಅನುದಾನ ತರುವ ಕೆಲಸ ಮಾಡಲಿ ಎಂದು ತಿಳಿಸಿದರು.ಕಾಂಗ್ರೆಸ್ ಪಕ್ಷವೆಂದರೆ ಒಂದು ಕುಟುಂಬ ಇದ್ದಂತೆ. ಕುಟುಂಬದಲ್ಲಿ ನಾವೆಲ್ಲರೂ ಚೆನ್ನಾಗಿದ್ದೇವೆ. ನಮ್ಮಲ್ಲಿ ಏನೇ ಸಮಸ್ಯೆ ಇದ್ದರೂ ನಾವು ಬಗೆಹರಿಸಿಕೊಳ್ಳುತ್ತೇವೆ. ಕುಮಾರಸ್ವಾಮಿಯವರಿಗೆ ಯಾಕೆ ನಮ್ಮ ಕುಟುಂಬದ ಚಿಂತೆ? ಡಿಸಿಎಂ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾಗುವುದಾದರೆ ಜೆಡಿಎಸ್ ಬೆಂಬಲಿಸುತ್ತದೆಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ ನಮ್ಮ ಕುಟುಂಬದ ಚಿಂತೆ ಮಾಡುವುದನ್ನು ಬಿಡಲಿ ಎಂದು ಕಿವಿಮಾತು ಹೇಳಿದರು. ................................
ದಾವಣಗೆರೆಗೆ ಏನು ಮಾಡಿದ್ದಾರೆಂದು ಹೇಳಿದ್ರೆ ಸಂಸದರಿಗೆ ಸನ್ಮಾನದಾವಣಗೆರೆ: ಗೆದ್ದರೆ ಕೊರಳ ಪಟ್ಟಿ ಹಿಡಿಯುವುದು, ಸೋತರೆ ಕಾಲು ಹಿಡಿಯುವುದು ಬಿಜೆಪಿಯವರ ಗುಣ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ದಾವಣಗೆರೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ವಿರುದ್ಧ ವಾಗ್ಧಾಳಿ ನಡೆಸಿದರು. ಇಂತಹವರೆಲ್ಲಾ ಒಂದು ರೀತಿ ಗೆದ್ದರೆ ಕೊರಳ ಪಟ್ಟಿ ಹಿಡಿಯುವ, ಸೋತರೆ ಕಾಲು ಹಿಡಿಯುವ ಜಾಯಮಾನದವರು. ಇಷ್ಟು ವರ್ಷ ಸಂಸದರಾಗಿ ದಾವಣಗೆರೆಗೆ ಏನು ಮಾಡಿದ್ದಾರೆಂದು ಹೇಳಲಿ. ಸಂಸದನಾಗಿ ಏನು ಮಾಡಿದ್ದಾರೆಂದು ಹೇಳಿದರೆ, ಹೈಸ್ಕೂಲ್ ಮೈದಾನದಲ್ಲಿ ಸನ್ಮಾನಿಸುವೆ ಎಂದು ಸವಾಲೆಸೆದರು.