ವಿದೇಶದ ಹುಚ್ಚು ಬಿಟ್ಟು ಸ್ವದೇಶ ಪ್ರೀತಿಸಿ: ಸಾಹಿತಿ ಡಾ. ಚಂದ್ರಶೇಖರ ಕಬ್ಬಾರ

| Published : Nov 26 2024, 12:45 AM IST

ವಿದೇಶದ ಹುಚ್ಚು ಬಿಟ್ಟು ಸ್ವದೇಶ ಪ್ರೀತಿಸಿ: ಸಾಹಿತಿ ಡಾ. ಚಂದ್ರಶೇಖರ ಕಬ್ಬಾರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಪಂಚದ ಬೇರೆ ಬೇರೆ ದೇಶಗಳಿಗೂ ಹಾಗೂ ಸ್ವದೇಶಕ್ಕೂ ವ್ಯತ್ಯಾಸವಿದೆ. ಹೊರ ದೇಶದಲ್ಲಿ ಯಂತ್ರದ ಜತೆಗೆ ಜೀವನ ಮಾಡಿದರೆ, ಇಲ್ಲಿ ಮನಸ್ಸು, ಮನುಷ್ಯರ ಜತೆಗೆ ಇರುತ್ತೇವೆ. ಯಾವ ದೇಶದಲ್ಲೂ ಭಾರತದಲ್ಲಿ ಇದ್ದಷ್ಟು ಜೀವಂತಿಕೆಯ ಕಾಣುವುದಿಲ್ಲ.

ಧಾರವಾಡ:

ಇಂದಿನ ಹಾಗೂ ಮುಂದಿನ ಪೀಳಿಗೆಯು ವಿದೇಶದ ಹುಚ್ಚು ಬಿಟ್ಟು ಮತ್ತೆ ಮತ್ತೆ ನಮ್ಮ ದೇಶ ಮತ್ತು ಭಾಷೆಯನ್ನು ಮತ್ತಷ್ಟು ನೋಡಲು, ತಿಳಿಯಲು ಪ್ರಯತ್ನಿಸಬೇಕು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ತಿಳಿ ಹೇಳಿದರು.

ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘ ನಡೆಸುತ್ತಿರುವ ಧರೆಗೆ ದೊಡ್ಡವರು ಸನ್ಮಾನ ಸ್ವೀಕರಿಸಿ ತಮ್ಮ ದೇಶ, ದೇಸೀತನ ಕುರಿತು ಮನದಾಳದ ಮಾತುಗಳನ್ನು ಹಂಚಿಕೊಂಡರು. ನಾನು ಅಮೆರಿಕ, ಶಿಕಾಗೋ ಸೇರಿದಂತೆ ಪ್ರಪಂಚ ಸುತ್ತಿದ್ದೇನೆ. ಆದರೆ, ನಾನು ಆಡಿ-ಬೆಳೆದ, ಓದಿದ-ಸಾಹಿತ್ಯ ರಚಿಸಿದ ಈ ಪುಣ್ಯ ಭೂಮಿ, ಇಲ್ಲಿಯ ಅನುಭವ ಮರೆಯಲು ಸಾಧ್ಯವಿಲ್ಲ. ಧಾರವಾಡ ಕವಿಗಳ, ಸಾಹಿತಿಗಳು ನಡೆದಾಡಿದ, ತಪಸ್ಸು ಮಾಡಿದ ಜಾಗ. ನಾವು ವಯಸ್ಸಿನಲ್ಲಿ ಇಲ್ಲಿ ಬಂದು ತಪ್ಪಸು ಮಾಡಿದ್ದೇವೆ. ದೊಡ್ಡವರ ಸಹವಾಸ ಮಾಡಿ ಬೆಳೆದ ಜಾಗವಿದು ಎಂದು ಸ್ಮರಿಸಿದರು.

ಯಂತ್ರದ ಜತೆಗೆ ಜೀವನ:

ಪ್ರಪಂಚದ ಬೇರೆ ಬೇರೆ ದೇಶಗಳಿಗೂ ಹಾಗೂ ಸ್ವದೇಶಕ್ಕೂ ವ್ಯತ್ಯಾಸವಿದೆ. ಹೊರ ದೇಶದಲ್ಲಿ ಯಂತ್ರದ ಜತೆಗೆ ಜೀವನ ಮಾಡಿದರೆ, ಇಲ್ಲಿ ಮನಸ್ಸು, ಮನುಷ್ಯರ ಜತೆಗೆ ಇರುತ್ತೇವೆ. ಯಾವ ದೇಶದಲ್ಲೂ ಭಾರತದಲ್ಲಿ ಇದ್ದಷ್ಟು ಜೀವಂತಿಕೆಯ ಕಾಣುವುದಿಲ್ಲ. ನಮ್ಮ ನಮ್ಮ ಪ್ರತಿಭೆ ಹೊರ ಹಾಕಲು ಭಾರತದಂತಹ ದೇಶ ಎಲ್ಲೂ ಇಲ್ಲ. ವಿದೇಶದಲ್ಲಿ ಬದುಕಿನ ಸ್ವಾರಸ್ಯವೂ ಸಿಗುವುದಿಲ್ಲ. ನಾವು ಹುಟ್ಟಿ ಬೆಳೆದ ಜಾಗದಲ್ಲಿ ಸಿಗುವ ಸಾರ ಬೇರೆ ಪ್ರಪಂಚದಲ್ಲಿ ಸಿಗುವುದಿಲ್ಲ. ಭಾರತದ ಸ್ವಾತಂತ್ರ್ಯ, ಜೀವನ ಎಲ್ಲೂ ಇಲ್ಲ. ಸಾಹಿತ್ಯ ಹಾಗೂ ಸಾಹಿತಿ ಗೌರವಿಸುವ ಬಗ್ಗೆ ಸಹಜವಾದ ಪ್ರೀತಿ ವಿದೇಶಿದಲ್ಲಿ ಇಲ್ಲ. ಅವರ ಬದುಕಿನಲ್ಲಿ ಸಾಹಿತ್ಯವು ಎಂದಿಗೂ ಮಾರ್ಗದರ್ಶನ ಆಗಿಲ್ಲ. ಈ ವಿಷಯದ ಬಗ್ಗೆ ಗಂಭೀರತೆಯೂ ಇಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ವಿದೇಶದ ಹುಚ್ಚು ತೊರೆದು ಇಲ್ಲಿಯೇ ಉತ್ತಮ ಬದುಕು ಕಟ್ಟಿಕೊಳ್ಳಿ ಎಂದರು ಕಂಬಾರರು.

ಕೀಳರಿಮೆ ಬೇಡ:

ಹಂಪಿ ವಿವಿ ಪ್ರಾಧ್ಯಾಪಕ ಡಾ. ವೀರೇಶ ಬಡಿಗೇರ, ಡಾ. ಚಂದ್ರಶೇಖರ ಕಂಬಾರ ಬದುಕಿನ ಬಗ್ಗೆ ಮಾತನಾಡಿ, ಕನ್ನಡದ ಎಲ್ಲ ದಿಗ್ಗಜರು ಕುಶಲಕರ್ಮಿ ವರ್ಗದಿಂದ ಬಂದವರು. ಹಾಗೆಯೇ ಕಂಬಾರರು ಸಹ. ಬಡತನ, ಹಳ್ಳಿಯವ ಎಂಬ ಕೀಳರಿಮೆ ಯಾರಿಗೂ ಬೇಡ. ಹಳ್ಳಿಯ ಕುಶಲಕರ್ಮಿ ಕುಟುಂಬದಲ್ಲಿ ಬೆಳೆದ ಕಂಬಾರರು ಕೀಳರಿಮೆ ಪಟ್ಟಿದ್ದರೆ ಜ್ಞಾನಪೀಠ ಪಡೆಯಲು ಸಾಧ್ಯವಿರಲಿಲ್ಲ. ಗ್ರಾಮ, ಬಡತನ ಹಾಗೂ ಸರ್ಕಾರಿ ಶಾಲೆ ನಮ್ಮ ಕನ್ನಡದ ಪ್ರಜ್ಞೆ ಎಂದು ಅರಿಯಬೇಕು. ಕನ್ನಡದ ಎಂದರೆ ಬರೀ ಭಾಷೆ ಅಲ್ಲ, ಸಂಸ್ಕೃತಿ, ಸಂಸ್ಕಾರ, ನಡುವಳಿಕೆ ಹಾಗೂ ಜ್ಞಾನವನ್ನು ಮೀರಿ ಪರಸ್ಪರ ಪ್ರೀತಿ, ಗೌರವಿಸುವುದು ಎಂದು ಕಂಬಾರರು ಹೇಳಿದ್ದಾರೆ ಎಂದರು.

ಕಂಬಾರರಿಗೆ ಬಹುತ್ವ, ಅಖಂಡತೆಯ ಪ್ರಜ್ಞೆ ಮನೆಯಲ್ಲಿಯೇ ಶುರುವಾಗುತ್ತದೆ. ತಂದೆ-ತಾಯಿ ಮಾರ್ಗದರ್ಶನ ಅವರ ಬದುಕಿನಲ್ಲಿ ದೊಡ್ಡ ಪಾತ್ರ ವಹಿಸಿದೆ. ಬಾಲ್ಯದಲ್ಲಿಯೇ ಬೇರೆ ಬೇರೆ ಸಂವೇದನೆ, ಜ್ಞಾನ ಹಾಗೂ ಸಂಸ್ಕೃತಿ ಬಂದು ಅಖಂಡ ಪ್ರಜ್ಞೆ ಬಂತು. ಅವರ ಕಥೆ, ಕಾದಂಬರಿ, ಬದುಕು ಬಹುತ್ವದಲ್ಲಿ ಒಳಗೊಂಡಿದೆ ಎಂದರು.

ಮಾತಿಗೆ ಸಿಗದ ಕಂಬಾರರು:

ಕಂಬಾರರು ನಾಡಿಗೆ ನೀಡಿದ ಕೊಡುಗೆ ಕುರಿತು ಸಾಹಿತಿ ಡಾ. ಬಸವರಾಜ ಕಲ್ಗುಡಿ ಮಾತನಾಡಿದರು. ಕಂಬಾರರ ಸಾಧನೆ ದೇಸಿಯಿಂದ ಒಳಗೊಂಡಿದೆ. ಅವರೊಬ್ಬ ಮಾಯಾವಿ ಜಂಗಮ ಇದ್ದಂತೆ. ಯಾರಿಗೂ ಮಾತಿಗೆ ಸಿಗದವರು. ಕಂಬಾರರ ಸಾಹಿತ್ಯ, ಭಾಷೆಯಲ್ಲಿ ಪ್ರಜ್ಞೆ, ತಿಳಿವು ಇದೆ. ಮೌಖಿಕ, ಸತ್ವದ ಪರಂಪರೆಗೆ ಮತ್ತೊಮ್ಮೆ ದಿಕ್ಕು ದೆಸೆ ತೋರಿಸಿದವರು. ಕನ್ನಡದ ಕಾವ್ಯಕ್ಕೆ ಹೊಸ ಮಾರ್ಗ, ಭಾಷ್ಯೆ, ಸತ್ವ, ವಸ್ತುವನ್ನು ಕೊಟ್ಟವರು. ನವ್ಯದ ನಂತರ ದೊಡ್ಡ ಸಮುದಾಯದ ಆಕ್ರಂದನವನ್ನು ಕಾವ್ಯದ ಮೂಲಕ ತೋರಿಸಿದವರು ಕಂಬಾರರು. ಕಾವ್ಯ, ನಾಟಕ ಸೇರಿ ಸಾಹಿತ್ಯವನ್ನು ಕೇಳುವ ಮತ್ತು ಹೇಳುವ ಹುಚ್ಚು ಅವರಲ್ಲಿತ್ತು ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಮಾಲತಿ ಪಟ್ಟಣಶೆಟ್ಟಿ, ಡಾ. ಎಂ.ಡಿ. ವಕ್ಕುಂದ, ನಿಂಗಣ್ಣ ಕುಂಠಿ, ಕವಿವಿ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಡಾ. ಶೈಲಜಾ ಅಮರಶೆಟ್ಟಿ ಇದ್ದರು. ಗಾಯಕಿ ಅರ್ಪಿತಾ ಜಾಗೀರದಾರ ಕಂಬಾರರ ಕುರಿತ ಗಾಯನ ಪ್ರಸ್ತುತ ಪಡಿಸಿದರು. ರವೀಂದ್ರ ಪಾಟೀಲ, ಅನಿಲ ಮೈತ್ರಿ ಸಾಥ್ ನೀಡಿದರು.