ಮೊಬೈಲ್ ಗೀಳು ಬಿಟ್ಟು ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಿ

| Published : Apr 21 2025, 12:59 AM IST

ಮೊಬೈಲ್ ಗೀಳು ಬಿಟ್ಟು ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಬಹುತೇಕ ಎಲ್ಲರೂ ಮೊಬೈಲ್‌, ಫೇಸ್‌ ಬುಕ್‌, ವಾಟ್ಸಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳ ದಾಸರಾಗಿದ್ದಾರೆ. ಇದರಿಂದಾಗಿ ಪುಸ್ತಕ ಓದುವ ಸಂಸ್ಕೃತಿಯೇ ಕಡಿಮೆಯಾಗುತ್ತಿದೆ. ಮುಂದಿನ ಪೀಳಿಗೆಗೆ ಪುಸ್ತಕ ಓದುವ ಅಭಿರುಚಿ ಮೂಡಿಸಲು ಆಗದಿರುವುದು ಆತಂಕದ ಸಂಗತಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ ಹೇಳಿದ್ದಾರೆ.

- ಕಸಾಪ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ ಮನವಿ । ಕೃತಿಗಳ ಬಿಡುಗಡೆ, ಪ್ರಶಸ್ತಿ ಪ್ರದಾನ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ಬಹುತೇಕ ಎಲ್ಲರೂ ಮೊಬೈಲ್‌, ಫೇಸ್‌ ಬುಕ್‌, ವಾಟ್ಸಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳ ದಾಸರಾಗಿದ್ದಾರೆ. ಇದರಿಂದಾಗಿ ಪುಸ್ತಕ ಓದುವ ಸಂಸ್ಕೃತಿಯೇ ಕಡಿಮೆಯಾಗುತ್ತಿದೆ. ಮುಂದಿನ ಪೀಳಿಗೆಗೆ ಪುಸ್ತಕ ಓದುವ ಅಭಿರುಚಿ ಮೂಡಿಸಲು ಆಗದಿರುವುದು ಆತಂಕದ ಸಂಗತಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಕಸಾಪ, ಚುಸಾಪ ಹಾಗೂ ಸ್ಫೂರ್ತಿ ಪ್ರಕಾಶ ತೆಲಗಿ, ಶಿರಸಿಯ ಪ್ರಜ್ವಲ್ ಟ್ರಸ್ಟ್‌ ಮತ್ತು ಜ್ಞಾನ ಪ್ರಕಾಶನ ದಾವಣಗೆರೆಯಿಂದ ವಿದ್ಯಾಧರ ಕನ್ನಡ ಪ್ರತಿಷ್ಠಾನ ಕರ್ನಾಟಕ- ಮಹಾರಾಷ್ಟ್ರ- ತೆಲಂಗಾಣದ ಸಹಯೋಗದಲ್ಲಿ ಮಾತೋಶ್ರೀ ಜಾನಕಿ ಬಾಯಿ ರಂಗರಾವ್‌ ಮುತಾಲಿಕ್‌ ದೇಸಾಯಿ ಸಂಸ್ಮರಣೆ ಅಂಗವಾಗಿ ಕನ್ನಡ ನುಡಿ ತೇರು-2025 ಕೃತಿಗಳ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ, ಉಪನ್ಯಾಸ, ಜಾದು ಪ್ರದರ್ಶನ, ಬೇಂದ್ರೆ ತದ್ರೂಪ ದರ್ಶನ ಹಾಗೂ ಕವಿಗೋಷ್ಟಿಗೆ ಚಾಲನೆ ನೀಡಿ ಮಾತನಾಡಿದ ಅವರು ಮಾತನಾಡಿದರು.

ಇಡೀ ಜಗತ್ತನ್ನೇ ಮೊಬೈಲ್, ಸೋಷಿಯಲ್ ಮೀಡಿಯಾ ಆ‍ವರಿಸಿದೆ. ಯಾವುದೇ ಮಾಹಿತಿ ಬೇಕೆಂದರೂ ಅಂಗೈನಲ್ಲೇ ಪ್ರತ್ಯಕ್ಷವಾಗುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆದರೆ, ಪುಸ್ತಕ ಓದಿದರೆ ಸಿಗುವಂತಹ ಆನಂದ, ಜ್ಞಾನವು ಮೊಬೈಲ್‌ನಿಂದಾಗಲೀ, ಸೋಷಿಯಲ್ ಮೀಡಿಯಾದಿಂದಾಗಲೀ ಸಿಗುವುದಿಲ್ಲ. ಪೋಷಕರೂ ಮೊಬೈಲ್‌ ಗೀಳಿಗೆ ಅಂಟಿಕೊಂಡಿರುವುದರಿಂದ ಮಕ್ಕಳಿಗೆ ಪುಸ್ತಕ ಓದುವ ಆಸಕ್ತಿ, ಅಭಿರುಚಿ ಬೆಳೆಸುತ್ತಿಲ್ಲ. ಪುಸ್ತಕ ಓದಿಯೇ ಸಾಕಷ್ಟು ಜ್ಞಾನ ಸಂಪಾದಿಸಿ, ಸಾಧನೆ, ಮಹತ್ವ ಸಾಧನೆ ಮಾಡಿದ ಸಾಧಕರಿದ್ದಾರೆ. ಯುವಜನರು ಪುಸ್ತಕ ಓದುವ ಉತ್ತಮ ಹವ್ಯಾಸ ಮೈಗೂಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಹಿರಿಯ ಸಾಹಿತಿ ಆನಂದ ಋಗ್ವೇದಿ ಮಾತನಾಡಿ, ಬದುಕಿನ ಸಂತೆಯಲ್ಲಿ ನಿಂತು ಎಲ್ಲ ವ್ಯಕ್ತಿತ್ವಗಳನ್ನೊಮ್ಮೆ ನೋಡಿದಾಗ ಮಾತ್ರ ನಮ್ಮಲ್ಲಿ ಪಾತ್ರಗಳು ಹುಟ್ಟಲು ಸಾಧ್ಯವಾಗುತ್ತದೆ. ಕಥೆ, ಕವಿತೆ ಹುಟ್ಟುವುದೇ ಪಾತ್ರಗಳ ಪರಿಚಯವಾದಾಗ. ಪ್ರತಿಯೊಬ್ಬರೂ ಪುಸ್ತಕ ಓದುವ, ಬರೆಯುವ ಸಂಸ್ಕೃತಿ ರೂಢಿಸಿಕೊಳ್ಳಬೇಕು. ಓದುವ ಸಂಸ್ಕೃತಿಯಿಂದ ಯಾವುದೇ ಕಾರಣಕ್ಕೂ ವಿಮುಖರಾಗಬಾರದು ಎಂದರು.

ಸ್ಫೂರ್ತಿ ಪ್ರಕಾಶನ ಅಧ್ಯಕ್ಷ ಎಂ.ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ವಿದ್ಯಾಧರ ಮುತಾಲಿಕ ದೇಸಾಯಿ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಸಾಹಿತಿಗಳಾದ ಸುರೇಶ ಕೊರಕೊಪ್ಪ, ಗಣಪತಿ ಹೆಗಡೆ, ವಿಶ್ವೇಶ್ವರ ಮೇಟಿ, ವೀಣಾ ಕೃಷ್ಣಮೂರ್ತಿ, ಶಿವಯೋಗಿ ಹಿರೇಮಠ್ ಇತರರು ಇದ್ದರು.

ವಿದುಷಿ ಡಾ.ಶಾಮಲಾ ಪ್ರಕಾಶ್ ಪಂಪನ ವಿಕ್ರಮಾರ್ಜುನ ವಿಜಯ ವಿಶೇಷ ವಿಷಯ ಕುರಿತು ಉಪನ್ಯಾಸ ನೀಡಿದರು. ಫಕೀರೇಶ್ ಆದಾಪುರ, ಶೋಭಾ ಮಂಜುನಾಥ, ಲೇಖಕಿ ಸುನೀತಾ ಪ್ರಕಾಶ ಬಿ.ಎಂ.ಜಿ. ವೀರೇಶ ಕಾರ್ಯಕ್ರಮ ನಡೆಸಿಕೊಟ್ಟರು.

ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಮೆಲುಕಾಡತಾವ ನೆನಪುಗಳು ಆತ್ಮಚರಿತ್ರೆ ಕೃತಿ, ಮುಷ್ಟಿಗ್ರಾಹ್ಯ ಕಥಾ ಸಂಕಲನ, ಸುನೀತಾ ಪ್ರಕಾಶ ಅವರ ಪದ್ದವ್ವನ ಕೌದಿ ಮತ್ತು ಇತರ ಕಥೆಗಳು ಕೃತಿಗಳು ಲೋಕಾರ್ಪಣೆಗೊಂಡವು.

- - -

-20ಕೆಡಿವಿಜಿ3:

ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಕನ್ನಡ ನುಡಿ ತೇರು-2025 ಸಮಾರಂಭದಲ್ಲಿ ಕಸಾಪ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ ಕೃತಿಗಳ ಲೋಕಾರ್ಪಣೆ ಮಾಡಿದರು.