ಸಾರಾಂಶ
- ಮಕ್ಕಳಿಗೆ ಮೊಟ್ಟೆ ನೀಡದ ಹೆಮ್ಮನಬೇತೂರು ಸರ್ಕಾರಿ ಶಾಲೆ: ಶಾಸಕ ಬಸವಂತಪ್ಪ ಕಿಡಿ
- - - ಕನ್ನಡಪ್ರಭ ವಾರ್ತೆ ದಾವಣಗೆರೆರಜೆ ಹಾಕಿದ್ದರೂ ರಜೆ ಚೀಟಿ ಇಲ್ಲದಿರುವುದು, ಹಾಜರಾತಿ ಪುಸ್ತಕದಲ್ಲಿ ದಾಖಲಿಸದೇ ಇರುವುದು, ಕರ್ತವ್ಯಕ್ಕೆ ಹಾಜರಾಗಿದ್ದರೂ ಹಾಜರಾತಿಯಲ್ಲಿ ಸಹಿ ಮಾಡಿಲ್ಲ, ಸಂಜೆ ಮಾಡಬೇಕಾದ ಸಹಿಯನ್ನು ಬೆಳಗ್ಗೆಯೇ ಮಾಡಿರುತ್ತಾರೆ...
ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಶಿಸ್ತು, ನಿಯಮ ಪಾಲನೆ ಬಗ್ಗೆ ಬೋಧಿಸುವ ಶಿಕ್ಷಕರೇ ಅವುಗಳನ್ನು ಉಲ್ಲಂಘಿಸಿರುವ ಕುರಿತ ಮಾಹಿತಿಗಳಿವು. ಹೆಮ್ಮನಬೇತೂರು ಶಾಲೆಗೆ ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ದಿಢೀರ್ ಭೇಟಿ ನೀಡಿದ್ದಾಗ ಕಂಡುಬಂದ ಲೋಪಗಳಿವು.ತಾಲೂಕಿನ ಹೆಮ್ಮನಬೇತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿಯಿತ್ತರು. ಶಾಲೆಯ ಭೋಜನಾಲಯ, ಶೌಚಾಲಯ, ಮಕ್ಕಳ ಹಾಜರಿ, ಶಿಕ್ಷಣದ ಗುಣಮಟ್ಟ, ಶೈಕ್ಷಣಿಕ ಪ್ರಗತಿ ಬಗ್ಗೆ ಪರಿಶೀಲಿಸಿದರು. ಆಗ ಸರ್ಕಾರಿ ಶಾಲೆಯ ಶಿಕ್ಷಕ-ಶಿಕ್ಷಕಿಯರ ಹಾಜರಾತಿ ಪುಸ್ತಕವನ್ನು ಗಮನಿಸಿದಾಗ ಶಾಲೆಯಲ್ಲಿ ಆಗುತ್ತಿರುವ ಅಸಡ್ಡೆಯನ್ನು ಶಾಸಕರು ಖುದ್ದಾಗಿ ಗಮನಿಸಿ, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಕರಿಗೆ ಶಾಸಕ ತರಾಟೆ:ಶಾಲಾ ಶಿಕ್ಷಕರ ಹಾಜರಾತಿ ಪುಸ್ತಕ, ಮಧ್ಯಾಹ್ನದ ಬಿಸಿಯೂಟದ ಮೆನು, ಮಕ್ಕಳ ಹಾಜರಿ ಪರಿಶೀಲಿಸಿದ ನಂತರ ಶಾಲೆಯ ನಾಲ್ವರು ಶಿಕ್ಷಕರ ಪೈಕಿ ಇಬ್ಬರು ಶಿಕ್ಷಕರು ರಜೆ ಇದ್ದರು. ಆದರೆ, ರಜೆ ಚೀಟಿ ಬರೆದಿರಲಿಲ್ಲ. ರಜೆಯಲ್ಲಿ ಹೋಗಿದ್ದರೂ ಹಾಜರಾತಿ ಪುಸ್ತಕದಲ್ಲಿ ರಜೆ ಮಾಡಿರುವ ಬಗ್ಗೆ ದಾಖಲಿಸಿರಲಿಲ್ಲ. ಉಳಿದಿಬ್ಬರು ಶಾಲೆಯ ಹಾಜರಿ ಪುಸ್ತಕದಲ್ಲಿ ಸಂಜೆ ಮಾಡುವ ಸಹಿಯನ್ನು ಸಹ ಬೆಳಗ್ಗೆಯೇ ಮಾಡಿದ್ದನ್ನು ಶಾಸಕ ಕೆ.ಎಸ್.ಬಸವಂತಪ್ಪ ಶಿಕ್ಷಕರನ್ನು ಕಂಡರು, ಬಳಿಕ ತಪ್ಪಿತಸ್ಥರನ್ನು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಶಾಲೆ ಮಕ್ಕಳು ತಮಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ಕೊಡುತ್ತಿಲ್ಲ. ವಾರಕ್ಕೆ2 ಮೊಟ್ಟೆ ಕೊಡಬೇಕು. ಆದರೆ, ಒಂದೇ ಮೊಟ್ಟೆ ಕೊಡುತ್ತಾರೆ. ಇಲ್ಲದಿದ್ದರೆ ಇಲ್ಲವೆಂದು ಶಾಲೆಯಲ್ಲಿ ಆಗುತ್ತಿರುವ ಬಿಸಿಯೂಟದ ಲೋಪದ ಬಗ್ಗೆ ಮಕ್ಕಳು ಶಾಸಕರ ಬಳಿ ಅಳಲು ತೋಡಿಕೊಂಡರು.ಅದಕ್ಕೆ ಇನ್ನಷ್ಟು ಅಸಮಾಧಾನಗೊಂಡ ಬಸವಂತಪ್ಪ ಅವರು, ಸರ್ಕಾರ ಗ್ರಾಮೀಣ ಬಡಮಕ್ಕಳು ಶಾಲೆಗೆ ಸೇರಿ ಒಳ್ಳೆಯ ಅಕ್ಷರ ಕಲಿತು ಭವಿಷ್ಯದಲ್ಲಿ ಉತ್ತಮ ಸತ್ಪ್ರಜೆಗಳಾಗಲೆಂದು ಅನೇಕ ಸೌಲಭ್ಯ ಕೊಡುತ್ತಿದೆ. ಆದರೆ, ಸರ್ಕಾರ ಕೊಡುವ ಸೌಲಭ್ಯಗಳನ್ನೇ ಮಕ್ಕಳಿಗೆ ಸರಿಯಾಗಿ ಕೊಡುವುದಿಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು.
ವಲಯ ಶಿಕ್ಷಣಾಧಿಕಾರಿಗೆ ಸೂಚನೆ:ದೂರವಾಣಿಯಲ್ಲಿ ಉತ್ತರ ವಲಯದ ಶಿಕ್ಷಣಾಧಿಕಾರಿಗೆ ಸಂಪರ್ಕಿಸಿದ ಶಾಸಕರು, ಹೆಮ್ಮನಬೇತೂರು ಶಾಲೆಯ ಸಮಸ್ಯೆ ಬಗ್ಗೆ ವಿವರಿಸಿ, ಶಿಕ್ಷಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ವಾರಕ್ಕೆರೆಡು ಮೊಟ್ಟೆ ಕೊಡುವ ಬದಲು ಒಂದೇ ಕೊಡುತ್ತಾರೆ. ರಜೆ ಹೋದ ಶಿಕ್ಷಕರು ಹಾಜರಿ ಪುಸ್ತಕದಲ್ಲಿ ದಾಖಲಿಸಿಲ್ಲ. ಮಕ್ಕಳ ಸಂಖ್ಯೆ ಕಡಿಮೆ ಇದೆ. ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ತಮಗೆ ವರದಿ ನೀಡಬೇಕು. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ನೀಡಬೇಕು ಎಂದು ಸೂಚಿಸಿದರು.
ನರೇಗಾದಡಿ ಹೈಟೆಕ್ ಶೌಚಾಲಯ, ಭೋಜನಾಲಯ, ಶಾಲಾ ಕಾಂಪೌಂಡ್, ಆಟದ ಮೈದಾನ ನಿರ್ಮಾಣ ಮಾಡುವಂತೆ ಗ್ರಾಪಂ ಪಿಡಿಒಗೆ ದೂರವಾಣಿ ಮೂಲಕ ಸಂಪರ್ಕಿಸಿ ಸೂಚನೆ ನೀಡಿದರು.ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ ಅಣಜಿ, ಹಿರಿಯ ವಕೀಲ ಮಂಜಪ್ಪ, ಸದಸ್ಯ ದುರುಗಪ್ಪ, ತಿಪ್ಪೇಸ್ವಾಮಿ, ರೇವಣಸಿದ್ದಯ್ಯ, ರಂಗನಾಥ, ಕರಿಬಸಪ್ಪ, ಬಸವಲಿಂಗಪ್ಪ, ಶಾಲೆ ಮುಖ್ಯ ಶಿಕ್ಷಕ ನಾಗರಾಜ, ಪಾಲಕರು ಹಾಗೂ ಗ್ರಾಮಸ್ಥರು ಇದ್ದರು.
ಅನಂತರ ಹೆಮ್ಮನಬೇತೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ, ಮಕ್ಕಳ ಹಾಜರಾತಿ, ಪ್ರತಿದಿನ ಮಕ್ಕಳಿಗೆ ಕೊಡುವ ಆಹಾರ ಪದಾರ್ಥಗಳು, ಸೊಪ್ಪು, ತರಕಾರಿ, ಎಣ್ಣೆ, ಬೇಳೆ ಕಾಳುಗಳನ್ನು ಪರಿಶೀಲಿಸಿದರು. ಮಕ್ಕಳಿಗೆ, ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡಬೇಕು. ಯಾವುದೇ ರೀತಿಯ ಸಮಸ್ಯೆಯಾಗದಂತೆ ಗಮನ ಹರಿಸಬೇಕೆಂದು ಅಂಗನವಾಡಿ ಕೇಂದ್ರದ ಕಾರ್ಯಕರ್ತೆಗೆ ಸೂಚನೆ ನೀಡಿದರು.- - - -17ಕೆಡಿವಿಜಿ3, 4, 5:
ದಾವಣಗೆರೆ ತಾಲೂಕು ಹೆಮ್ಮೆನಬೇತೂರು ಸರ್ಕಾರಿ ಶಾಲೆಗೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಂಗಳವಾರ ದಿಢೀರ್ ಭೇಟಿ ನೀಡಿ, ಶಾಲೆ ಸಿಬ್ಬಂದಿ ಹಾಗೂ ಮಕ್ಕಳ ಹಾಜರಾತಿ ಪುಸ್ತಕ ಪರಿಶೀಲಿಸಿದರು.