ಅಶೋಕೆಯ ಮೂಲಮಠದ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಶುಕ್ರವಾರದ ಧರ್ಮಸಭೆಯಲ್ಲಿ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಆಶೀರ್ವಚನ ನೀಡಿದರು.

ಗೋಕರ್ಣ: ಪಂಚಭೂತಗಳ ಮೇಲೆ ನಾವು ನಿಯಂತ್ರಣ ಸಾಧಿಸಬಹುದು. ಪ್ರಕೃತಿ ನಮಗೆ ಕೊಟ್ಟಿದ್ದನ್ನು ಕಾಲ ಹಾಗೂ ದೇಶಕ್ಕೆ ತಕ್ಕಂತೆ ಮತ್ತು ಶಾಸ್ತ್ರ ನಿಯಮದಂತೆ ಆಹಾರ ಸೇವಿಸಿದರೆ ಹಾಗೂ ನಿಯಮಬದ್ಧವಾದ ಉಪವಾಸದಿಂದ ಸಾಮಾನ್ಯನೂ ಅಗ್ನಿಜಯ ಸಾಧಿಸಬಹುದು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.

ಅಶೋಕೆಯ ಮೂಲಮಠದ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಶುಕ್ರವಾರದ ಧರ್ಮಸಭೆಯಲ್ಲಿ ''''ಅನ್ನಂ ಬ್ರಹ್ಮ'''' ಮಾಲಿಕೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಮಹಾನ್ ವ್ಯಕ್ತಿಗಳ ಜೀವನದಲ್ಲಿಯೂ ಕಷ್ಟಗಳು ಬರುತ್ತವೆ ಎಂದರು. ನಳ - ದಮಯಂತಿಯ ಚರಿತ್ರೆಯ ಮೂಲಕ ನಳನಿಗೆ ಅಗ್ನಿಯ ಮೇಲಿದ್ದ ಪ್ರಭಾವ ಹಾಗೂ ಬಲವನ್ನು ವಿವರಿಸಿ, ನಳನು ಸಂಕಷ್ಟಗಳ ಸರಮಾಲೆಯ ಮಧ್ಯದಲ್ಲಿದ್ದಾಗ ಆತನ ಮಹತ್ವ ಮತ್ತು ಸಾಮರ್ಥ್ಯ ಜಗತ್ತಿನ ಮುಂದೆ ಪ್ರಕಟವಾಯಿತು. ಪಂಚಭೂತಗಳ ಮೇಲೆ ನಳನು ಸಾಧಿಸಿಕೊಂಡಿದ್ದ ನಿಯಂತ್ರಣದಿಂದ ಇದು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.

ತೇಗು ಬಂದ ನಂತರ ಊಟ ನಿಲ್ಲಿಸಬೇಕು ಎನ್ನಲಾಗಿದೆ. ಆದರೆ ಆ ಸಮಯದಲ್ಲಿ ಎಲೆಯ ಮೇಲೆ ಉಳಿದಿರುವ ಆಹಾರವನ್ನು ಹಾಗೆಯೇ ಬಿಡಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ನಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಆಹಾರವನ್ನು ಎಲೆಗೆ ಹಾಕಿಸಿಕೊಳ್ಳಬಾರದು. ಬಡಿಸುವವರಿಗೂ ಈ ಬಗ್ಗೆ ಪರಿವೆ ಅಗತ್ಯ. ಬಾಳೆಎಲೆಯಲ್ಲಿ ಊಟ ಬಿಟ್ಟರೆ ಅದು ವ್ಯರ್ಥ. ಆದರೆ ಹೆಚ್ಚಾದ ಆಹಾರವನ್ನು ನಾವು ಸೇವಿಸಿದರೆ ಅದು ಅನರ್ಥಕ್ಕೆ ಕಾರಣ. ಒಂದೊಮ್ಮೆ ಎಲೆಯಲ್ಲಿ ಆಹಾರವನ್ನು ಬಿಟ್ಟರೆ ಅದು ನಿಜವಾಗಿ ವ್ಯರ್ಥವಲ್ಲ. ಅದು ಬೇರೆ ಯಾವುದೋ ಜೀವಿಯ ಪಾಲಿಗೆ ಆಹಾರವಾಗುತ್ತದೆ ಎಂದು ಹೇಳಿದರು.

ಜೀವನದಲ್ಲಿ ಆರೋಗ್ಯ, ಶಾಂತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಬೇಕಾದರೆ ಆಹಾರದ ಬಗ್ಗೆ ಜವಾಬ್ದಾರಿ ಇರಬೇಕು, ಜಠರಾಗ್ನಿಯನ್ನು ಕಾಪಾಡಬೇಕು ಮತ್ತು ಅನ್ನವನ್ನು ದೇವಸ್ವರೂಪವೆಂದು ಭಾವಿಸಿ ಗೌರವಿಸಬೇಕು ಎಂದು ಸಮಾಜಕ್ಕೆ ಕರೆ ನೀಡಿದರು. ಶ್ರೀಕ್ಷೇತ್ರ ಹಟ್ಟಿಯಂಗಡಿಯ ಧರ್ಮದರ್ಶಿ ವೇ.ಮೂ. ಬಾಲಚಂದ್ರ ಭಟ್ಟ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಜೆಡಿಎಸ್ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಸೂರಜ್ ನಾಯ್ಕ ಸೋನಿ, ಶೇಖರ ನಾಯ್ಕ ಶ್ರೀಗಳ ಆಶೀರ್ವಾದ ಪಡೆದರು. ಮಂಜುನಾಥ ಸುವರ್ಣಗದ್ದೆ, ಶಾಂತಾರಾಮ ಹೆಗಡೆ ಕೊಂಡದಕುಳಿ, ದಿನಪ್ರಧಾನರಾಗಿ ಆರ್.ಎಸ್. ಹೆಗಡೆ ಹರಗಿ ದಂಪತಿ ಉಪಸ್ಥಿತರಿದ್ದರು.

ನಾಮಧಾರಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ:

ಪಾರಂಪರಿಕವಾಗಿ ಶ್ರೀರಾಮಚಂದ್ರಾಪುರ ಮಠಕ್ಕೆ ನಡೆದುಕೊಳ್ಳುತ್ತಿರುವ ನಾಮಧಾರಿ ಸಮಾಜದ ಗುರುಬಂಧುಗಳಿಂದ ಸ್ವರ್ಣಪಾದುಕಾ ಪೂಜೆ ನಡೆಯಿತು. ಪೂಜೆಯನ್ನು ಸ್ವೀಕರಿಸಿ ಸಮಾಜವನ್ನು ಆಶೀರ್ವದಿಸಿದ ಶ್ರೀಗಳು, ಪರಸ್ಪರ ಗುರು ಶಿಷ್ಯರ ಭೇಟಿ ಆಗಾಗ ನಡೆದಾಗ ಬಾಂಧವ್ಯ ಗಟ್ಟಿಯಾಗಲು ಸಾಧ್ಯ. ಗುರುಪರಂಪರೆಯ ಅನುಗ್ರಹ ಈ ಸಮಾಜದ ಮೇಲೆ ಸದಾ ಇರಲಿದ್ದು, ಸಮಾಜದ ಆಗುಹೋಗುಗಳ ಜತೆಗೆ ಶ್ರೀಮಠ ಸದಾ ಇರಲಿದೆ ಎಂದರು.

ನಾಮಧಾರಿ ಸಮಾಜದ ಕುಮಟಾ ತಾಲೂಕು ಅಧ್ಯಕ್ಷ ಅರುಣಕುಮಾರ ಜಿ. ನಾಯ್ಕ, ಶೇಖರ ನಾಯ್ಕ, ಹರೀಶ ನಾಯ್ಕ, ಅಶೋಕ ನಾಯ್ಕ ಹಾಗೂ ಸಮಾಜ ಬಂಧುಗಳು ಉಪಸ್ಥಿತರಿದ್ದರು.