ವಿದ್ಯಾರ್ಥಿಗಳಲ್ಲಿ ಆಸಕ್ತಿದಾಯಕ ಕಲಿಕೆಯನ್ನು ಹೆಚ್ಚಿಸಲು ಉಪನ್ಯಾಸಕರು ನಿರಂತರವಾಗಿ ಶೈಕ್ಷಣಿಕ ಚಟುವಟಿಕೆ ಹಾಗೂ ಕಲಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಾಲಗುರುಮೂರ್ತಿ ಹೇಳಿದರು.
ಕನ್ನಡಪ್ರಭ ವಾರ್ತೆ, ತುಮಕೂರುವಿದ್ಯಾರ್ಥಿಗಳಲ್ಲಿ ಆಸಕ್ತಿದಾಯಕ ಕಲಿಕೆಯನ್ನು ಹೆಚ್ಚಿಸಲು ಉಪನ್ಯಾಸಕರು ನಿರಂತರವಾಗಿ ಶೈಕ್ಷಣಿಕ ಚಟುವಟಿಕೆ ಹಾಗೂ ಕಲಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಾಲಗುರುಮೂರ್ತಿ ಹೇಳಿದರು. ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ತರಬೇತಿ ಸಂಸ್ಥೆ ವತಿಯಿಂದ ನಗರದಲ್ಲಿ ನಡೆದ ವಿಷಯವಾರು ಪುನಶ್ಚೇತನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಫಲಿತಾಂಶ ಅತ್ಯಂತ ಕಡಿಮೆಯಾಗಿದ್ದು, ನೀವೆಲ್ಲರೂ ನಿತ್ಯ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಇಂತಹ ಪುನಶ್ಚೇತನಾ ಕಾರ್ಯಾಗಾರಗಳು ಸಹಕಾರಿಯಾಗಲಿವೆ ಎಂದು ಉಪನ್ಯಾಸಕರಿಗೆ ತಿಳಿಸಿದರು. ಪ್ರಸ್ತುತ ದ್ವಿತೀಯ ಪಿಯೂಸಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಮುಂದಿನ ದಿನಗಳಲ್ಲಿ ಎರಡು ಪೂರ್ವ ಸಿದ್ಧತಾ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಇಲಾಖೆಯ ವಿಷಯವಾರು ಮೂರು ಮಾದರಿ ಪ್ರಶ್ನೆಪತ್ರಿಕೆಗಳ ಬಗ್ಗೆ ಗಮನಹರಿಸಿರಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಫಲಿತಾಂಶ ಉತ್ತಮಪಡಿಸಲು ಸಿದ್ಧರಾಗಬೇಕು ಎಂದು ಹೇಳಿದರು. ತರಬೇತಿ ಸಂಸ್ಥೆಯ ಉಪನಿರ್ದೇಶಕ ಮಂಜುನಾಥ್ ಮಾತನಾಡಿ, ಇಲಾಖೆಯ ಪ್ರತಿಯೊಂದು ಕಾರ್ಯಕ್ರಮವೂ ನಿಯಮ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿರುತ್ತವೆ ಎಂದರು.ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ನೇ.ರಂ.ನಾಗರಾಜು ಮಾತನಾಡಿ, ಇಲಾಖೆಯ ಪುನಶ್ಚೇತನ ಕಾರ್ಯಕ್ರಮಗಳನ್ನು ಕಾಲೇಜು ಪ್ರಾರಂಭದ ದಿನಗಳಲ್ಲಿ ನಡೆಸಿದರೆ ಉಪನ್ಯಾಸಕರು ಇನ್ನಷ್ಟು ಕ್ರಿಯಾಶೀಲರಾಗಲು ಅನುಕೂಲವಾಗುತ್ತದೆ ಎಂದು ಹೇಳಿದರು. ಜಿಲ್ಲಾ ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಸತೀಶ್ ಸಿ.ಜಿ, ಎಂಪ್ರೆಸ್ ಪಿ.ಯೂ. ಕಾಲೇಜು ಉಪ ಪ್ರಾಚಾರ್ಯ ಕಂಪ್ಲಪ್ಪ, ಇಲಾಖೆ ಅಧಿಕಾರಿಗಳಾದ ರಾಮಣ್ಣ, ರಂಗರಾಜು ಹಾಗೂ ಜಿಲ್ಲೆಯ ವಿವಿಧ ಕಾಲೇಜುಗಳ ಉಪನ್ಯಾಸಕರು ಭಾಗವಹಿಸಿದ್ದರು.