ಶಿವಕುಮಾರ ಕುಷ್ಟಗಿ

ಗದಗ: ಗದಗ- ಬೆಟಗೇರಿ ನಗರಸಭೆ ವ್ಯಾಪ್ತಿ ಸೇರಿದಂತೆ ಜಿಲ್ಲೆಯ ಪುರಸಭೆ, ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಎಲ್ಇಡಿ ಬಲ್ಬ್ ಅಳವಡಿಸುವ ಯೋಜನೆಗೆ ಚಾಲನೆ 2019ರಲ್ಲಿ(7 ವರ್ಷವಾದರೂ) ದೊರೆತಿದ್ದರೂ ಜಿಲ್ಲೆಯಲ್ಲಿರುವ ವಿದ್ಯುತ್ ಕಂಬಗಳ ಸಮೀಕ್ಷೆ ಪೂರ್ಣಗೊಂಡಿಲ್ಲ. ಈಗ ಮತ್ತೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಪೌರಾಡಳಿತ ನಿರ್ದೇಶನಾಲಯದ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ.

ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಬೀದಿದೀಪಗಳನ್ನು ತೆಗೆದು ಅವುಗಳ ಬದಲಿಗೆ ಅತ್ಯಾಧುನಿಕ ಎಲ್‌ಇಡಿ ಬೀದಿದೀಪಗಳನ್ನು ಅಳವಡಿಸಲು ಗದಗ- ಬೆಟಗೇರಿ ನಗರಸಭೆ, ಗಜೇಂದ್ರಗಡ, ಲಕ್ಷ್ಮೇಶ್ವರ, ಮುಂಡರಗಿ, ನರಗುಂದ, ರೋಣ ಪುರಸಭೆಗಳು ಹಾಗೂ ಮುಳಗುಂದ, ನರೇಗಲ್ಲ ಮತ್ತು ಶಿರಹಟ್ಟಿ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಬೇಕಿತ್ತು. ಬೀದಿದೀಪಗಳ ನಿರ್ವಹಣೆಯನ್ನು ಸುಗಮಗೊಳಿಸಲು ಕೇಂದ್ರೀಕೃತ ನಿರ್ವಹಣೆ ಹಾಗೂ ನಿಗಾ ವ್ಯವಸ್ಥೆ ತಂತ್ರಜ್ಞಾನವನ್ನು ಅಳವಡಿಸಬೇಕಾಗಿದೆ.

ಯಾರೂ ಗಮನ ಹರಿಸಿಲ್ಲ: 2019ರಲ್ಲಿಯೇ ಈ ಯೋಜನೆಗೆ ತರಲಾಗಿದ್ದರೂ 2 ವರ್ಷಗಳ ಕಾಲ ಕೋವಿಡನಲ್ಲಿ ಅದರ ನಂತರದ ಒಂದು ವರ್ಷ ಆಡಳಿತ ಸುಧಾರಣೆಯಲ್ಲಿ ಕಳೆದು ಹೋಗಿದೆ. ಆದಾದ ನಂತರ 2023ರಿಂದ ಗದಗ- ಬೆಟಗೇರಿ ನಗರಸಭೆಯಲ್ಲಿ ಆಡಳಿತ ಮಂಡಳಿ ಅಧಿಕಾರದಲ್ಲಿದ್ದರೂ ಇಲ್ಲದಂತಿದೆ.

ಹಲವಾರು ರೀತಿಯ ವ್ಯಾಜ್ಯಗಳು, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಗೊಂದಲ, ಕಾನೂನು ಹೋರಾಟಗಳಿಗೆ ಸಾಕ್ಷಿಯಾಗಿದ್ದು, ಸದಸ್ಯರು ಸರಿಯಾಗಿ ಅಧಿಕಾರ ನಡೆಸಿಲ್ಲ, ಸಾಮಾನ್ಯ ಸಭೆಗಳು ನಡೆದಿಲ್ಲ, ಅವಳಿ ನಗರದ ಬೀದಿದೀಪಗಳ ನಿರ್ವಹಣೆಯ ಬಗ್ಗೆ ಯಾರೂ ಕಿಂಚಿತ್ತು ಗಮನ ಹರಿಸಿಲ್ಲ. ಈಗಲೂ ಅದೇ ಪರಿಸ್ಥಿತಿ ಮುಂದುವರಿದಿದೆ.


ಸಮೀಕ್ಷೆ ಪ್ರಾರಂಭವೇ ಆಗಿಲ್ಲ: ​ಈ ಹಿಂದೆ ಈ ಯೋಜನೆಯ ಸಮೀಕ್ಷಾ ಕಾರ್ಯಕ್ಕೆ 2026ರ ಜು. 26ರ ವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ, ಮಾ. 2ರಂದು ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ಜಂಟಿ ನಿರ್ದೇಶಕರು(ಅಭಿವೃದ್ಧಿ) ನಡೆಸಿದ ವಿಡಿಯೋ ಸಂವಾದದಲ್ಲಿ ಯೋಜನೆಗೆ ವೇಗ ನೀಡುವಂತೆ ನಿರ್ದೇಶಿಸಿದ್ದಾರೆ. ರಾಜ್ಯಮಟ್ಟದ ಈ ಸೂಚನೆಯ ಹಿನ್ನೆಲೆ, ಏಜೆನ್ಸಿಗಳಿಗೆ ನೀಡಲಾಗಿದ್ದ 6 ತಿಂಗಳ ಕಾಲಾವಕಾಶವನ್ನು ಕಡಿತಗೊಳಿಸಿ, ಪ್ರಸಕ್ತ ಮಾ. 31ರೊಳಗಾಗಿ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಮೀಕ್ಷೆ ಮುಗಿಸಿ ಪೂರ್ಣ ಪ್ರಮಾಣದ ವರದಿ ಸಲ್ಲಿಸಲು ಸೂಚಿಸಲಾಗಿದೆ. ಆದರೆ ಏಪ್ರಿಲ್ ಅಂತ್ಯಕ್ಕೆ ಬಂದು ತಲುಪಿದ್ದರೂ ಅವಳಿ ನಗರದಲ್ಲಿ ಇಂದಿಗೂ ಸಮೀಕ್ಷೆ ಕಾರ್ಯ ಪ್ರಾರಂಭವೇ ಆಗಿಲ್ಲ.

ಗಮನಹರಿಸದ ಅಧಿಕಾರಿಗಳು

ಗದಗ- ಬೆಟಗೇರಿ ನಗರಸಭೆ ಆಡಳಿತಾಧಿಕಾರಿಗಳಾಗಿ ಕಳೆದೊಂದು ವರ್ಷದಿಂದ ಜಿಲ್ಲಾಧಿಕಾರಿಗಳೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ನಗರಸಭೆಯ ಪೌರಾಯುಕ್ತರನ್ನು ಕೇಳಿದರೆ ಅದು ಜಿಲ್ಲಾ ನಗರಾಭಿವೃದ್ಧಿ ಕೋಶದ ಹಂತದಲ್ಲಿದೆ. ಅಲ್ಲಿ ವಿಳಂಬವಾಗುತ್ತಿದೆ ಎನ್ನುತ್ತಾರೆ.

ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳನ್ನು ಕೇಳಿದರೆ ಈ ಬಗ್ಗೆ ಈಗಾಗಲೇ 2 ಬಾರಿ ಟೆಂಡರ್ ಕರೆಯಲಾಗಿದೆ. ಪ್ರತಿ ಬಾರಿಯೂ ಸಿಂಗಲ್ ಟೆಂಡರ್ ಆದ ಹಿನ್ನೆಲೆ ವಿಳಂಬವಾಗಿದೆ ಎನ್ನುತ್ತಾರೆ.

ಪ್ರಸ್ತುತ ಗದುಗಿನ ಮಟ್ಟಕ್ಕೆ ಈ ಎರಡೂ ಸಂಸ್ಥೆಗಳು ಜಿಲ್ಲಾಧಿಕಾರಿಗಳ ವ್ಯಾಪ್ತಿಯಲ್ಲೇ ಇರುವುದರಿಂದ ಅವರು ಗಮನ ಹರಿಸುತ್ತಿಲ್ಲ ಎನ್ನುವುದಕ್ಕೆ ಇಷ್ಟೊಂದು ವರ್ಷ ವಿಳಂಬವಾಗಿದೆ ಎನ್ನುವುದು ವಾಸ್ತವ ಸಂಗತಿ.

ಹೊಸ ಕಂಬ: ಸಿಸಿಎಂಎಸ್ ಮೂಲಕ ಎಲ್ಲ ಕಂಬಗಳಿಗೆ ಪಾರಂಪರಿಕ ಬಲ್ಬ್ ಗಳನ್ನು ಬದಲಿಸಿ ಎಲ್ಇಡಿ ಅಳವಡಿಸುವುದಕ್ಕಾಗಿ ಸಮೀಕ್ಷೆ ಆದೇಶ ಮಾಡಿದ್ದಾರೆ. ಈಗಾಗಲೇ ನಮ್ಮ ಬಳಿ ಇರುವ ವಿದ್ಯುತ್ ಕಂಬಗಳ ಮಾಹಿತಿ(14786) ನೀಡಲಾಗಿದೆ. ಹೊಸ ಕಂಬಗಳನ್ನು ಅಳವಡಿಸಲಾಗಿದ್ದರೆ, ಇನ್ನು ಯಾವ ಯಾವ ಹೊಸ ಏರಿಯಾಗಳಲ್ಲಿ ಬೀದಿದೀಪಗಳ ಅಳವಡಿಕೆ ಅವಶ್ಯಕತೆ ಇದೆ. ಈ ಕುರಿತು ಸಮೀಕ್ಷಾ ತಂಡಕ್ಕೆ ನಮ್ಮ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ ಎಂದು ನಗರಸಭೆ ಅಭಿಯಂತರ ಲಕ್ಷ್ಮಣ ಎ.ಜೆ. ತಿಳಿಸಿದರು.ಸಮೀಕ್ಷೆ ಪೂರ್ಣಗೊಳಿಸಿ: ಬೀದಿದೀಪಗಳ ವಿಷಯವಾಗಿ ಹಲವಾರು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಾರ್ವಜನಿಕರು ಹಲವಾರು ಬಾರಿ ದೂರು ನೀಡಿದರೂ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವ ಸಿದ್ಧ ಉತ್ತರ ನೀಡುತ್ತಿದ್ದಾರೆ. ಕೂಡಲೇ ಸಮೀಕ್ಷೆ ಪೂರ್ಣಗೊಳಿಸಿ ಅವಳಿ ನಗರದ ಎಲ್ಲ ಕಡೆಗಳಲ್ಲಿಯೂ ಎಲ್ಇಡಿ ಬಲ್ಬ್ ಗಳನ್ನು ಅಳವಡಿಸಬೇಕು. ಸಾರ್ವಜನಿಕರ ತೆರಿಗೆ ಹಣವನ್ನು ಉಳಿಸಬೇಕು ಎಂದರು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ತಿಳಿಸಿದರು.