ಬಿಜೆಪಿ ಸೋಲಿಸಲು ರಾಜ್ಯದಲ್ಲಿ ಒಂದೇ ಕಡೆ ಎಡಪಕ್ಷ ಸ್ಪರ್ಧೆ!

| Published : Apr 08 2024, 01:09 AM IST / Updated: Apr 08 2024, 08:32 AM IST

ಸಾರಾಂಶ

2019ರ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನೇ ಸೋಲಿನ ದವಡೆಗೆ ಸಿಲುಕಿಸಿ ಗಮನ ಸೆಳೆದಿದ್ದ ಸಿಪಿಐ ಈ ಬಾರಿ ಇಡೀ ರಾಜ್ಯದಲ್ಲಿ ಯಾವೊಂದು ಕ್ಷೇತ್ರದಲ್ಲೂ ಸ್ಪರ್ಧಿಸದೆ ಶಸ್ತ್ರತ್ಯಾಗ ಮಾಡಿದ್ದರೆ, ಮತ್ತೊಂದು ಎಡಪಕ್ಷ ಸಿಪಿಎಂ ಒಂದೇ ಒಂದು ಕಡೆ ಸ್ಪರ್ಧೆಗೆ ಅಣಿಯಾಗಿದೆ.

ಸಂದೀಪ್‌ ವಾಗ್ಲೆ

 ಮಂಗಳೂರು :  2019ರ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನೇ ಸೋಲಿನ ದವಡೆಗೆ ಸಿಲುಕಿಸಿ ಗಮನ ಸೆಳೆದಿದ್ದ ಸಿಪಿಐ ಈ ಬಾರಿ ಇಡೀ ರಾಜ್ಯದಲ್ಲಿ ಯಾವೊಂದು ಕ್ಷೇತ್ರದಲ್ಲೂ ಸ್ಪರ್ಧಿಸದೆ ಶಸ್ತ್ರತ್ಯಾಗ ಮಾಡಿದ್ದರೆ, ಮತ್ತೊಂದು ಎಡಪಕ್ಷ ಸಿಪಿಎಂ ಒಂದೇ ಒಂದು ಕಡೆ ಸ್ಪರ್ಧೆಗೆ ಅಣಿಯಾಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸಿಪಿಎಂನ ಜಿಲ್ಲಾ ಕಾರ್ಯದರ್ಶಿ ಮುನಿ ವೆಂಕಟಪ್ಪ ಕಣಕ್ಕಿಳಿಯಲಿದ್ದಾರೆ. ಬಿಜೆಪಿ ಸೋಲಿಸುವ ಒಂದೇ ಉದ್ದೇಶದಿಂದ ಎರಡೂ ಪಕ್ಷಗಳು ಸ್ಪರ್ಧಾ ಕಣದಿಂದ (ಒಂದು ಕ್ಷೇತ್ರ ಹೊರತುಪಡಿಸಿ) ದೂರ ಉಳಿಯಲು ನಿರ್ಧರಿಸಿವೆ!

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 2019ರ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಕೇವಲ 13,339 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಆಗ 17,227 ಮತ ಗಳಿಸಿದ ಸಿಪಿಐ ಅಭ್ಯರ್ಥಿ ಎನ್‌. ಜಯಣ್ಣ, ದೇವೇಗೌಡರ ಸೋಲಿಗೆ ಪ್ರಮುಖ ಕಾರಣಕರ್ತರಾಗಿದ್ದರು. ಮತ ವಿಭಜನೆಯಿಂದಾಗಿ ಅಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ದಾಖಲಿಸಿದ್ದರು. ಇದನ್ನು ಮನಗಂಡ ಸಿಪಿಐ ಈ ಬಾರಿ ಯಾವೊಂದು ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.

ಸಿಪಿಎಂ ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆ ಮಾಡಿದ್ದು, 18,648 ಮತ ಗಳಿಸಿತ್ತು. ಸದ್ಯದ ಮಟ್ಟಿಗೆ ರಾಜ್ಯದಲ್ಲಿ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಸಿಪಿಎಂ ಪ್ರಾಬಲ್ಯ ಕೊಂಚ ಉಳಿದುಕೊಂಡಿರುವುದರಿಂದ ಕ್ಷೇತ್ರ ಉಳಿಸಿಕೊಳ್ಳಲು ಅಲ್ಲಿ ಒಂದೇ ಕಡೆ ಸ್ಪರ್ಧೆಗೆ ಸಿಪಿಎಂ ನಿರ್ಧರಿಸಿದೆ.

‘ಕೈ’ಗೆ ಬೆಂಬಲ, ಸ್ವತಂತ್ರ ಪ್ರಚಾರ!:

ಈ ಬಾರಿ ವಿಶೇಷವಾಗಿ ಕೆಂಬಾವುಟದ ಎರಡೂ ಪಕ್ಷಗಳು ‘ಇಂಡಿಯಾ’ ಒಕ್ಕೂಟಕ್ಕೆ ಸೇರಿದ್ದು, ರಾಜ್ಯದಲ್ಲೂ ಕಾಂಗ್ರೆಸ್‌ಗೆ ನೇರ ಬೆಂಬಲ ಘೋಷಣೆ ಮಾಡುವ ತೀರ್ಮಾನ ಕೈಗೊಂಡಿವೆ. ಆದರೆ, ಕಾಂಗ್ರೆಸ್‌ ಜತೆ ಸೇರಿ ಪ್ರಚಾರ ಮಾಡುತ್ತಿಲ್ಲ. ಸ್ವತಂತ್ರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿ ಬಿಜೆಪಿ ವಿರುದ್ಧ ಸಮರ ಸಾರಿವೆ.

ಬಿಜೆಪಿಯನ್ನು ಸೋಲಿಸಬೇಕು ಎನ್ನುವುದೇ ನಮ್ಮ ಪಕ್ಷದ ಏಕೈಕ ಗುರಿ. ಆದರೆ ಕಾಂಗ್ರೆಸ್‌ ಜತೆಗೂಡಿ ಪ್ರಚಾರ ನಡೆಸಲ್ಲ. ಈಗಾಗಲೇ ತಾಲೂಕು ಮಟ್ಟದ ಸಮಾವೇಶಗಳು, ಜಿಲ್ಲಾಮಟ್ಟದ ಕಾರ್ಯಾಗಾರ ನಡೆಸಿದ್ದೇವೆ. ಈಗ ಮನೆ, ಮನೆ ಪ್ರಚಾರ ಕಾರ್ಯದಲ್ಲಿ ಕಾರ್ಯಕರ್ತರು ತೊಡಗಿದ್ದಾರೆ ಎಂದು ದ.ಕ. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.‘ಕತ್ತಿ- ಸುತ್ತಿಗೆ’ ಬಲ ಕುಸಿತ:

1980ರ ದಶಕದವರೆಗೆ ಪ್ರಧಾನವಾಗಿ ದ.ಕ. ಸೇರಿದಂತೆ ಇತರೆಡೆಗಳಲ್ಲಿ ಎಡಪಕ್ಷಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದು, ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡುತ್ತಿದ್ದವು. 1983ರಲ್ಲಿ ರಾಜ್ಯದಲ್ಲಿ ಎಡಪಕ್ಷಗಳ 6 ಮಂದಿ ಶಾಸಕರಿದ್ದರು. ಕರಾವಳಿಯಿಂದ ಒಟ್ಟು ನಾಲ್ಕು ಮಂದಿ ಎಡಪಕ್ಷಗಳ ಶಾಸಕರು ಆಯ್ಕೆಯಾಗಿದ್ದರು. ಸಿಪಿಐನಿಂದ ಶಾಸಕರಾಗಿದ್ದ ಬಿ.ವಿ. ಕಕ್ಕಿಲ್ಲಾಯರು ರಾಜ್ಯಸಭೆ ಸದಸ್ಯರೂ ಆಗಿದ್ದರು. ಕ್ರಮೇಣ ಕೆಂಬಾವುಟದ ಪ್ರಭಾವ ಕ್ಷೀಣಿಸತೊಡಗಿದ್ದು, ರಾಜ್ಯದಲ್ಲಿ ಕೊನೆಯದಾಗಿ 2004ರಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ಜಿ.ವಿ.ಶ್ರೀರಾಮ ರೆಡ್ಡಿ ಶಾಸಕರಾದದ್ದೇ ಅಂತಿಮ, ನಂತರ ಯಾವ ಚುನಾವಣೆಯಲ್ಲೂ ಎಡಪಕ್ಷಗಳು ರಾಜ್ಯದ ಯಾವ ವಿಧಾನಸಭಾ ಕ್ಷೇತ್ರದಲ್ಲಾಗಲಿ, ಲೋಕಸಭೆಯಲ್ಲಾಗಲಿ ಅಧಿಕಾರ ಸ್ಥಾಪಿಸಿಲ್ಲ.ಕೋಟ್‌:

ಚಿಕ್ಕಬಳ್ಳಾಪುರ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಸಮರ ಸಾರಲು, ಅದಕ್ಕಾಗಿ ಪ್ರಬಲ ಎದುರಾಳಿಯಾಗಿರುವ ಕಾಂಗ್ರೆಸ್‌ನ್ನು ಬೆಂಬಲಿಸಲು ಸಿಪಿಎಂ ಪಕ್ಷ ತೀರ್ಮಾನ ಕೈಗೊಂಡಿದೆ. ಬಿಜೆಪಿ ಈ ದೇಶದ ದೊಡ್ಡ ಶತ್ರು. ಕಳೆದ 10 ವರ್ಷಗಳಲ್ಲಿ ಕೋಮು ಭಾವನೆ ಕೆರಳಿಸಿ ಬಿಜೆಪಿ ರಾಜಕಾರಣ ನಡೆಸಿದೆ. ಕಾರ್ಪೊರೇಟ್‌ಗಳಿಗೆ ಸಹಕಾರಿಯಾದರೆ ವಿನಃ ಅಭಿವೃದ್ಧಿ ಮಾಡಿಲ್ಲ. ಬಡವರಿಗೆ ಏನೂ ಪ್ರಯೋಜನವಾಗಿಲ್ಲ. ಬಿಜೆಪಿಯ ಕೋಮು ಧ್ರುವೀಕರಣದಿಂದ ಅಂಥದ್ದೇ ಎಸ್‌ಡಿಪಿಐ ಸೃಷ್ಟಿಯಾಗಿದೆ. ಇದನ್ನೆಲ್ಲ ಕೊನೆಗಾಣಿಸಲು ಬಿಜೆಪಿ ವಿರುದ್ಧ ಸಮರ ಸಾರಿದ್ದೇವೆ.

- ಯಾದವ ಶೆಟ್ಟಿ, ದ.ಕ. ಜಿಲ್ಲಾ ಸಿಪಿಎಂ ಕಾರ್ಯದರ್ಶಿ