ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಯೋಗ ಅತ್ಯಂತ ಸಹಕಾರಿ: ಪೂರಣ್‌ ವರ್ಮ

| Published : Apr 08 2024, 01:09 AM IST

ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಯೋಗ ಅತ್ಯಂತ ಸಹಕಾರಿ: ಪೂರಣ್‌ ವರ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಉಜಿರೆ ಶ್ರೀ ಧ.ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ಚಿಣ್ಣರ ಯೋಗಾಸನದ ಎಂಟನೇ ಶಿಬಿರ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಇಂದಿನ ಒತ್ತಡಮಯ ಜೀವನದಲ್ಲಿ ಮಕ್ಕಳು ಕೆಟ್ಟ ಆಹಾರ ಪದ್ಧತಿಯ ಕಾರಣದಿಂದ ಅನೇಕ ಮಾನಸಿಕ ದೈಹಿಕ ರೋಗದಿಂದ ಬಳಲುತ್ತಿದ್ದು ಇದಕ್ಕೆ ಯೋಗ ಮತ್ತು ಪ್ರಕೃತಿ ತತ್ವದ ಅಭ್ಯಾಸ ಗಳೇ ಅತ್ಯಂತ ಸಹಕಾರಿ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಐಟಿ ಹಾಗೂ ವಸತಿ ನಿಲಯಗಳ ಕಾರ್ಯನಿರ್ವಹಣಾ ಅಧಿಕಾರಿ ಪೂರಣ್ ವರ್ಮ ಹೇಳಿದರು.

ಅವರು ಉಜಿರೆಯಲ್ಲಿನ ಶ್ರೀ ಧ.ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ಚಿಣ್ಣರ ಯೋಗಾಸನದ ಎಂಟನೇ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಪೌಷ್ಟಿಕ ಆಹಾರ ಹಾಗೂ ಉತ್ತಮ ಜೀವನ ಶೈಲಿಯು ಎಲ್ಲ ರೀತಿಯ ಋಣಾತ್ಮಕ ಅಂಶಗಳನ್ನು ದೂರಮಾಡಲು ಈ ರೀತಿಯ ಜಾಗೃತಿ ಶಿಬಿರಗಳನ್ನು ಏರ್ಪಡಿಸುವುದು ಅತೀವ ಅವಶ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ, ಮಕ್ಕಳ ಸರ್ವತೋಮುಖ ವಿಕಾಸಕ್ಕಾಗಿ 80ರ ದಶಕದಲ್ಲಿಯೇ ಶಿಬಿರಗಳ ಮೂಲಕ ವೀರೇಂದ್ರ ಹೆಗ್ಗಡೆ ಅವರ ದೂರ ದರ್ಶಿತ್ವದ ಫಲವಾಗಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಪರಿಚಯ ಮತ್ತು ಪ್ರಚಾರ ನಿರಂತರ ನಡೆಯುತ್ತಿದೆ. ಮಕ್ಕಳಲ್ಲಿನ ದಿವ್ಯಶಕ್ತಿಯ ಜಾಗೃತಿಗಾಗಿ ನಡೆಯುತ್ತಿರುವ ಈ ಶಿಬಿರ ಅತ್ಯಂತ ಮಹತ್ವಪೂರ್ಣವಾಗಿದೆ ಎಂದರು.

ಮುಂಡಾಜೆ ಪಿ.ಡಿ.ಓ. ಗಾಯತ್ರಿ ಇದ್ದರು. ಶಿಬಿರ ಮೂರು ದಿನಗಳ ಕಾಲ ನಡೆಯಲಿದ್ದು ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಮೂಲತತ್ವವನ್ನು ಅರಿಯಲು ಸೂಕ್ಷ್ಮ ವ್ಯಾಯಾಮ, ಯೋಗಾಸನಗಳು, ಪ್ರಾಣಾಯಾಮ,ಜುಂಬ ಡ್ಯಾನ್ಸ್, ಪೇಪರ್ ಕ್ರಾಫ್ಟ್ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.

ಶಿಬಿರದ ಸಂಚಾಲಕ ಹಾಗೂ ಯೋಗ ವಿಭಾಗದ ಡೀನ್ ಹಾಗೂ ಶಾಂತಿವನದ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಶಿಬಿರದ ಚಟುವಟಿಕೆಗಳನ್ನು ವಿವರಿಸಿ ಸ್ವಾಗತಿಸಿದರು. ಯೋಗ ವಿಭಾಗದ ಸಹಪ್ರಾಧ್ಯಾಪಕ ಉದಯ ಸುಬ್ರಹ್ಮಣ್ಯ ವಂದಿಸಿದರು. ಯೋಗ ವಿಭಾಗ ಹಾಗೂ ಆಹಾರ ಮತ್ತು ಪೌಷ್ಟಿಕತೆ ವಿಭಾಗದ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಸಹಕರಿಸಿದರು.