ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಕುಂಟೋಜಿ ಬಳಿ ಭೀಕರ ಬೈಕ್ ಅಪಘಾತದಲ್ಲಿ ಮೂವರು ಸಾವನ್ನಪ್ಪಿ, ನಾಲ್ವರು ಗಂಭೀರ ಗಾಯಗೊಂಡಿರುವ ಸ್ಥಳಕ್ಕೆ ಎಸ್ಪಿ ಋಷಿಕೇಶ ಸೋನಾವಣೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ವೇಳೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ನಗರ, ಪಟ್ಟಣ, ಗ್ರಾಮೀಣ ರಸ್ತೆಗಳ ಮೇಲೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಅಲ್ಲದೇ, ಗೂಡ್ಸ್, ಟಂಟಂ, ಕಾರು, ಲಾರಿ, ಟಿಪ್ಪರ್ ವಾಹನ ಸವಾರರು ಮದ್ಯಪಾನ ಮಾಡಿ ವಾಹನ ಓಡಿಸುವುದು ಮತ್ತು ಲೈಸನ್ಸ್ ಇಲ್ಲದೇ ವಾಹನಗಳನ್ನು ಓಡಿಸುವುದು ಕಾನೂನು ಬಾಹಿರ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮದ ಜೊತೆಗೆ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಲೂಕಿನ ಕುಂಟೋಜಿ ಗ್ರಾಮದ ಬಳಿ ಅಪಘಾತ ನಡೆಯಬಾರದಿತ್ತು. ಬೈಕ್ ಸವಾರನ ಬೇಜವಾಬ್ದಾರಿ ಮತ್ತು ಅತಿ ವೇಗದಿಂದಾಗಿ ದುರ್ಘಟನೆ ನಡೆದಿದ್ದು, ಪ್ರಕರಣ ದಾಖಲಿಸಲಾಗಿದೆ.ಇಂತಹ ಅಪಘಾತಗಳನ್ನು ನಿಯಂತ್ರಿಸಲು ರಾತ್ರಿ ಸಮಯದಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಗೂ ಕುಡಿದು ವಾಹನ ಓಡಿಸುವವರ ಬಗ್ಗೆ ನಿಗಾವಹಿಸಲು ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲು ನಮ್ಮ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರು ರಾತ್ರಿ 11ರ ನಂತರ ಹಾಗೂ ನಸುಕಿನಜಾವ ರಸ್ತೆಗಳಲ್ಲಿ ಹಾಗೂ ಅವುಗಳ ಮಧ್ಯದಲ್ಲಾಗಲಿ ಸಂಚರಿಸುವುದು ವಾಯು ವಿಹಾರ ನಡೆಸುವುದು ಮಾಡಬಾರದು ಎಂದರು.
ವಾಹನ ಸವಾರರಿಗೆ ಸಮರ್ಪಕವಾಗಿ ರಸ್ತೆ ಕಾಣುವುದಿಲ್ಲ. ಇಂತಹ ಸಂದರ್ಭದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಸಾರ್ವಜನಿಕರು ಹೆಚ್ಚು ಜಾಗೃತಿ ವಹಿಸಬೇಕು. ಈಗಾಗಲೇ ಪ್ರತಿವರ್ಷವೂ ಬೈಕ್ ಸವಾರರು ಅಪರಾಧಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು, ಅಪರಾಧಗಳು ಆಗದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಲು ಅಪರಾಧ ತಡೆ ಮಾಸಾಚರಣೆ ಆಚರಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಕೇವಲ ಪೊಲೀಸರಿಂದ ಅಪರಾಧಗಳ ತಡೆ ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯ ಎಂದು ಮನವರಿಕೆ ಮಾಡಿದರು.ಅಪರಾಧಗಳು ನಡೆದ ಮೇಲೆ ತನಿಖೆ ನಡೆಸುವುದಕ್ಕಿಂತ, ಆಪರಾಧ ಆಗದಂತೆ ನೋಡಿಕೊಳ್ಳುವುದು ಉತ್ತಮ. ಈ ತಿಂಗಳಿನಲ್ಲಿ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ಏರ್ಪಡಿಸುವುದು, ಕರಪತ್ರಗಳು ಮತ್ತು ಸಾರ್ವಜನಿಕ ಸಭೆಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು. ಈ ವೇಳೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪ್ಪಾರೆಡ್ಡಿ ಹಾಗೂ ಸಿಬ್ಬಂದಿ ಇದ್ದರು.
--------------ಕೋಟ್........ಎಲ್ಲದಕ್ಕೂ ಪೊಲೀಸರನ್ನೇ ದೂರುವುದು ಸರಿಯಲ್ಲ, ಪತ್ರಕರ್ತರಿಗೂ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಜವಾಬ್ದಾರಿ ಇರುತ್ತದೆ. ಪತ್ರಕರ್ತರು ಬರೀ ಪೊಲೀಸರ ತಪ್ಪುಗಳನ್ನೆ ಎತ್ತಿ ಬರೆಯವುದಕ್ಕಿಂತ ಜವಾಬ್ದಾರಿ ಹಾಗೂ ಕಾನೂನು ಜ್ಞಾನದ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳುವಂತೆ ಮಾಡಬೇಕು. ಎಲ್ಲರೂ ಕೂಡಿದರೆ ಅಪಘಾತ ಮತ್ತು ಅಪರಾಧಗಳನ್ನು ತಡೆಯಲು ಸಾಧ್ಯ.
- ಋಷಿಕೇಶ ಸೋನಾವಣೆ, ಜಿಲ್ಲಾ ಎಸ್ಪಿ