ಬಿಎಸ್‌ಎಸ್‌ಕೆ ಪುನರಾರಂಭಿಸದಿದ್ದರೆ ಕಾನೂನು ಹೋರಾಟ

| Published : Oct 06 2024, 01:15 AM IST

ಬಿಎಸ್‌ಎಸ್‌ಕೆ ಪುನರಾರಂಭಿಸದಿದ್ದರೆ ಕಾನೂನು ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

LEGAL ACTION IF BUSSK IS NOT RESUMED

- ಬಿಎಸ್‌ಎಸ್‌ಕೆ ಬಚಾವೊ ಆಂದೋಲನ ಸಮಿತಿಯ ಅಧ್ಯಕ್ಷ ಸಿಂದೋಲ ಆಗ್ರಹ । ಜಿಲ್ಲೆಯಲ್ಲಿ ಇಬ್ಬರು ಮಂತ್ರಿಗಳಿದ್ದರೂ ರೈತ ಪರ ನಿರ್ಧಾರ ಇಲ್ಲ

-----

ಕನ್ನಡಪ್ರಭ ವಾರ್ತೆ, ಬೀದರ್‌

ಕಾರ್ಖಾನೆ ನಂಬಿಕೊಂಡು ಇದೀಗ ಬದುಕು ಸಾಗಿಸಲಾಗದೇ ಕಂಗಾಲಾಗಿರುವ ಅಲ್ಲಿಯ ಕಾರ್ಮಿಕರ ಹಾಗೂ ಲಕ್ಷಾಂತರ ರೈತ ಕುಟುಂಬಗಳ ಹಿತದೃಷ್ಟಿಯಿಂದ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ಪುನರಾರಂಭಿಸಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಮುಂದೆ ಬರಬೇಕೆಂದು ಬಿಎಸ್‌ಎಸ್‌ಕೆ ಬಚಾವೋ ಆಂದೋಲನ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ನ್ಯಾಯವಾದಿ ಹನುಮಂತರಾಯ ಸಿಂದೋಲ ಆಗ್ರಹಿಸಿದರು.

ಅವರು ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಎಸ್‌ಎಸ್‌ಕೆ 1969-70ರಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭಿಸಿತು. ಮೊದಲು ಕೇವಲ ಪ್ರತಿ ಹಂಗಾಮಿಗೆ 1250 ಟನ್ ಕಬ್ಬು ನುರಿಸುವ ಕಾರ್ಯ ಆರಂಭವಾಗಿ ನಂತರ ಅದು 3500ಕ್ಕೆ ತಲುಪಿತು. ಇಂಥ ಸಾಮರ್ಥ್ಯವುಳ್ಳ ಕಾರ್ಖಾನೆಯನ್ನು ಈಗಿನ ರಾಜಕೀಯ ಧುರಿಣರೇ ಹಾಳು ಮಾಡಿದಂತಾಗಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ, ಮಹಾತ್ಮಾ ಗಾಂಧಿ ಸಹಕಾರಿ ಸಕ್ಕರೆ ಕಾರ್ಖಾನೆ, ಭಾಲ್ಕೇಶ್ವರ ಶುಗರ್ಸ್‌ ಲಿಮಿಟೆಡ್‌ ಹೀಗೆ ಖಾಸಗಿ ಕಾರ್ಖಾನೆಗಳು ತಲೆ ಎತ್ತಿರುವುದರಿಂದ ಹಿಂದೆ ಬಿಎಸ್‌ಎಸ್‌ಕೆಗೆ ಅಧ್ಯಕ್ಷರಾದವರೇ ಸ್ವತಃ ಕಾರ್ಖಾನೆ ತೆರೆದಿರುವ ಕಾರಣ ಬಿಎಸ್‌ಎಸ್‌ಕೆ ಹಾಳಾಗಲು ಮುಖ್ಯ ಕಾರಣವಾಗಿದೆ. ಡಿಸಿಸಿ ಬ್ಯಾಂಕ್‌ ಬಿಎಸ್‌ಎಸ್‌ಕೆ ಮೇಲೆ 300 ಕೋಟಿ ರು. ಸಾಲದ ಶೂಲ ಹೊರಿಸಿದ್ದರಿಂದ ಅದು ಬಂದ್‌ ಆಗಲು ಕಾರಣವಾಗಿದೆ ಎಂದು ಸ್ವತಃ ಹಾಲಿ ಜಿಲ್ಲಾ ಉಸ್ತುವಾರಿ ಸಚಿವರೇ ಹೇಳುತ್ತಿದ್ದು, ರೈತರ ಬಗ್ಗೆ ನಿಜವಾದ ಕನಿಕರ ಇದ್ದರೆ ನಿಮ್ಮ ಸಹೋದರರೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿದ್ದಾರೆ. ಸರ್ಕಾರದಿಂದ ಆಗಲಿ ಅಥವಾ ಡಿಸಿಸಿ ಬ್ಯಾಂಕ್‌ನಿಂದ ಕಾಲಾವಕಾಶ ಕೊಡಿಸಿ ಕಾರ್ಖಾನೆ ಪುನರಾರಂಭಕ್ಕೆ ಮಹತ್ವ ನೀಡಿ ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಈಗಾಗಲೇ ಎನ್‌ಎಸ್‌ಎಸ್‌ಕೆ, ಎಂಜಿಎಸ್‌ಎಸ್‌ಕೆ, ಕಾರ್ಖಾನೆಗಳ ಮೇಲೆ ಡಿಸಿಸಿ ಬ್ಯಾಂಕಿನ ಸಾಲ ಇದ್ದರೂ ಅವು ನಡೆಯುತ್ತಿವೆ. ಈ ಕಾರ್ಖಾನೆ ಏಕೆ ನಡೆಯುವದಿಲ್ಲ. ಮಂಡ್ಯದಲ್ಲಿ ಮೈ ಶುಗರ್ಸ್‌ ಲಿಮಿಟೆಡ್‌ ಕಾರ್ಖಾನೆ ಬಂದ್‌ ಆದರೆ ಸರ್ಕಾರ ಸ್ವತಃ ಕಾಳಜಿ ವಹಿಸಿ ಅದನ್ನು ಪುನರಾರಂಭಿಸಿದೆ. ಆದರೆ ಬಿಎಸ್‌ಎಸ್‌ಕೆಗೆ ಏಕೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಇಬ್ಬರು ರಾಜ್ಯ ಸರ್ಕಾರದ ಸಚಿವರಿದ್ದೀರಿ ಇಲ್ಲಿ ನಿಮ್ಮದೆ ಪಕ್ಷದ ಸರ್ಕಾರವಿದೆ. ಹೀಗಿರುವಾಗ ಏಕೆ ಇದನ್ನು ಪ್ರಾರಂಭಿಸಲು ಮುತುವರ್ಜಿ ತೋರುತ್ತಿಲ್ಲ? ಈ ಕಾರ್ಖಾನೆ ಆರಂಭವಾದರೆ ನಿಮ್ಮ ಸ್ವಾಯುತ್ತದ ಕಾರ್ಖಾನೆಗಳಿಗೆ ಧಕ್ಕೆಯಾಗುತ್ತದೆ ಎಂಬ ಭಯವೇ? ಎಂದು ಪ್ರಶ್ನೆ ಮಾಡಿರುವ ಸಿಂಧೋಲ, ಅನ್ನದಾತರಿಗೆ ಅನ್ನ ನೀಡುವ ಈ ಕಾರ್ಖಾನೆ ಆರಂಭವಾಗದಿದ್ದರೆ ಕಾನೂನು ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಸಮಿತಿಯ ಸದಸ್ಯ ಅನಂತರೆಡ್ಡಿ ಮಾತನಾಡಿ, 172 ಎಕರೆ 10 ಗುಂಟೆ ವಿಸ್ತಾರವಾದ ಜಮೀನಿನನ್ನು ಹೊಂದಿರುವ ಕಾರ್ಖಾನೆ ಬಂದ್ ಆಗಲು ಇಲ್ಲಿಯ ಎಲ್ಲ ಜನಪ್ರತಿನಿಧಿಗಳು ಜವಾಬ್ಧಾರರಾಗಿದ್ದಾರೆ. 25 ಸಾವಿರ ಶೇರುದಾರ ಸದಸ್ಯರನ್ನು ಹೊಂದಿರುವ ಈ ಕಾರ್ಖಾನೆಯ ಗೋಳು ಕೇಳುರ‍್ಯಾರು ಎಂದರು.

ಸದಸ್ಯರಾದ ಸಂಘಟಕರಾದ ಭಗವಾನ ನೌಬಾದಕರ್, ಗಣಪತಿ ಶಂಭು ಮಾತನಾಡಿದರು. ಸಮಿತಿಯ ಇತರೆ ಸದಸ್ಯರಾದ ಘಾಳೆಪ್ಪ ಸೋರಳ್ಳಿ, ಸಿದ್ದಪ್ಪ ಪೊಲೀಸ್‌ ಪಾಟೀಲ್‌, ನಾಗಶೆಟ್ಟೆಪ್ಪ ಹಚ್ಚೆ, ಗುಂಡಪ್ಪ ಬುಧೇರಾ, ಬಜರಂಗ ಖಾಶೆಂಪುರ, ಸೂರ್ಯಕಾಂತ ಪಾಟೀಲ ಗೂನಳ್ಳಿ, ಜಾನಸನ್‌ ಘೋಡೆ, ಚನ್ನಮಲ್ಲಪ್ಪ ಹಜ್ಜರಗಿ, ಅಮರ ಕರನಳ್ಳಿ ಇದ್ದರು.

........ಬಾಕ್ಸ್‌..........

ಬಿಎಸ್‌ಎಸ್‌ಕೆ 135ಕೋಟಿ ರು. ಹಗರಣದ ಸಿಬಿಐ ತನಿಖೆ ಕೋರಿ ದೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆದ ಹಗರಣದ ತನಿಖೆಯ ಮಾದರಿಯಲ್ಲಿ ಬಿಎಸ್‌ಎಸ್‌ಕೆ ಯಲ್ಲಿ ನಡೆದಿದೆ ಎನ್ನಲಾದ 135 ಕೋಟಿ ರು.ಗಳ ಹಗರಣದ ತನಿಖೆ ನಡೆಸಬೇಕೆಂದು ಸಿಬಿಐಗೆ ದೂರು ಸಲ್ಲಿಸಲಾಗುವುದೆಂದು ಸಮಿತಿಯ ಕಾನೂನು ಸಲಹೆಗಾರರು ಹಾಗೂ ಹಿರಿಯ ವಕೀಲರಾದ ಜೈರಾಜ ಬುಕ್ಕಾ ತಿಳಿಸಿದ್ದಾರೆ.

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಅಧಿಕಾರ ದುರುಪಯೋಗ ಹಾಗೂ ಅಭಿವೃದ್ಧಿ ಮಾಡದೇ ಹಣ ಲಪಟಾಯಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕಿದೆ. ಈ ಕುರಿತಾಗಿ ನಿವೃತ್ತ ನ್ಯಾಯಾಧೀಶರ ತಂಡ ರಚಿಸಿ ನಿಷ್ಪಕ್ಷಪಾತ ತನಿಖೆಯಾಗಬೇಕು. ಈ ಮೊದಲು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೇವಲ ಬೆಂಗಳೂರು ಉಚ್ಛ ನ್ಯಾಯಾಲಯದಲ್ಲಿ ಹಾಕಬಹುದಿತ್ತು ಆದರೆ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಆಂಜನೆಯ ಹಾಗೂ ನ್ಯಾಯಮೂರ್ತಿಗಳಾದ ಅಶೋಕ ಕಿಣಗಿ ಅವರ ಆದೇಶದ ಮೆರೆಗೆ ಕಲಬುರಗಿ ಉಚ್ಛ ನ್ಯಾಯಾಲಯದಲ್ಲಿಯೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬಹುದಾಗಿದ್ದು, ಕಾರ್ಖಾನೆಯಲ್ಲಿ ನಡೆದ 135 ಕೋಟಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲು ಅಪೀಲು ಸಲ್ಲಿಸಲಾಗುವುದೆಂದು ಬುಕ್ಕಾ ಹೇಳಿದರು.

-----------

ಫೋಟೊ: ಫೈಲ್‌ 5ಬಿಡಿ2