ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ವಿನಾ ಕಾರಣ ಸಾರ್ವಜನಿಕರನ್ನು ಸರ್ಕಾರಿ ಕಚೇರಿಗಳ ಸುತ್ತ ಅಲೆದಾಡಿಸುವ ಅಧಿಕಾರಿಗಳ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ತಾಲೂಕಿನ ಗೂಳೂರು ಹೋಬಳಿ ವ್ಯಾಪ್ತಿಯ ಗೊರ್ತಪಲ್ಲಿ ಗ್ರಾಮದಲ್ಲಿ ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಸ್ಥಳದಲ್ಲಿಯೇ ಸಾರ್ವಜನಿಕರ ಸಮಸ್ಯೆಗಳನ್ನ ಬಗೆಹರಿಸುವ ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವುದೇ ಜನಸ್ಪಂದನಾ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.
ಅಲೆದಾಟ ತಪ್ಪಿಸುವ ಉದ್ದೇಶವಿವಿಧ ಕೆಲಸಗಳಿಗಾಗಿ ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಕಚೇರಿಗಳಿಗೆ ಬಂದು ಕೆಲಸವಾಗದೆ ವಾಪಸ್ ಹೋಗುವಂತಹ ಪರಿಸ್ಥಿತಿ ಇದೆ. ಈ ರೀತಿ ಕಚೇರಿಗಳ ಸುತ್ತ ಅಲೆದಾಡುವುದನ್ನು ತಪ್ಪಿಸಿ, ಅಧಿಕಾರಿಗಳೇ ಜನರ ಮನೆಬಾಗಿಲಿಗೆ ಬಂದು ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜನಸ್ಪಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಇದೇ ವೇಳೆ 75 ಫಲಾನುಭವಿಗಳಿಗೆ ಪಿಂಚಣಿ, 70 ಮಂದಿಗೆ ಆರೋಗ್ಯ ಕಾರ್ಡ್, 25 ಮಂದಿಗೆ ನರೇಗ ಯೋಜನೆಯ ಜಾಬ್ ಕಾರ್ಡ್ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳಿಗೆ 25 ಲಕ್ಷ ರೂ.ಗಳ ಸಾಲದ ಚೆಕ್ ಸೇರಿದಂತೆ ಪ್ರಮಾಣ ಪತ್ರಗಳನ್ನು ವಿತರಿಸಿದರು.ಬಾಲ್ಯವಿವಾಹ ತಡೆಗಟ್ಟಿ
ತಾಲೂಕಿನಲ್ಲಿ ಇತ್ತೀಚಿಗೆ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಕಳವಳವ್ಯಕ್ತಪಡಿಸಿದ ಅವರು ಯಾವುದೇ ಕಾರಣಕ್ಕೂ 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡಬೇಡಿ, ಅನಿಷ್ಠ ಪದ್ದತಿಗಳಲ್ಲಿ ಒಂದಾಗಿರುವ ಬಾಲ್ಯ ವಿವಾಹ ಪದ್ದತಿಯನ್ನು ಸಮಾಜದಿಂದ ತೊಲಗಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು. ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಮ್ಮ ಸುತ್ತಮುತ್ತಲಿನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.ಇಂದಿನ ಜನಸ್ಪಂದನಾ ಕಾರ್ಯಕ್ರಮದಲ್ಲಿ ನಿವೇಶನ, ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಸಾರಿಗೆ, ಪಡಿತಚೀಟಿ, ಪಿಂಚಣಿ ಸೇರಿದಂತೆ 100ಕ್ಕೂ ಹೆಚ್ಚಿನ ಅರ್ಜಿಗಳನ್ನು ಸ್ವೀಕರಿಸಲಾಯಿತು. ಹಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಎನ್.ಮನೀಷಾ, ಡಿ.ಹೆಚ್.ಓ ಮಹೇಶ್ ಕುಮಾರ್, ತಾ.ಪಂ ಇಒ ರಮೇಶ್, ಸಿಡಿಪಿಓ ರಾಮಚಂದ್ರಪ್ಪ, ಟಿಹೆಚ್‍ಓ ಡಾ.ಸತ್ಯನಾರಾಯಣರೆಡ್ಡಿ, ಬೆಸ್ಕಾಂ ಎಇಇ ಸೋಮಶೇಕರ್, ಗೊರ್ತಪಲ್ಲಿ ಗ್ರಾ.ಪಂ ಅಧ್ಯಕ್ಷ ಸದಾಶಿವರೆಡ್ಡಿ, ಉಪಾದ್ಯಕ್ಷೆ ಉಮಾದೇವಿ ಇದ್ದರು..