ವಿಜಯಪುರ: ಮಾಂಸ ಮಾರಾಟದ ವರ್ತಕರು-ಉದ್ದಿಮೆದಾರರು ಇತರೆ ತ್ಯಾಜ್ಯವನ್ನು ಬೀದಿಯಲ್ಲಿ ಅಥವಾ ವರಾಂಡದಲ್ಲಿ ಎಸೆಯುವುದು ಹಾಗೂ ಹಾಕುವುದನ್ನು ಮಹಾನಗರ ಪಾಲಿಕೆ ನಿಷೇಧಿಸಿದ್ದು, ಆದಾಗ್ಯೂ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಪರಿಸರ ವಿಭಾಗದ ಕಾರ್ಯಪಾಲಕ ಅಭಿಯಂತರರು ಎಚ್ಚರಿಕೆ ನೀಡಿದ್ದಾರೆ.

ತ್ಯಾಜ್ಯ ಉತ್ಪಾದಿಸುವ ಪ್ರತಿಯೊಬ್ಬ ನಾಗರೀಕರು, ಉದ್ದಿಮೆದಾರರು ಎಲ್ಲೆಂದರಲ್ಲಿ ತ್ಯಾಜ್ಯ ವಿಸರ್ಜಿಸದೆ ತ್ಯಾಜ್ಯ ವಿಂಗಡಣೆ ಮಾಡಬೇಕು. ವಿಂಗಡಣೆ ಮಾಡಿದ ತ್ಯಾಜ್ಯವನ್ನು ಮಹಾನಗರ ಪಾಲಿಕೆ ನಿತ್ಯ ಕಳುಹಿಸಿಕೊಡುವ ತ್ಯಾಜ್ಯ ವಾಹನಕ್ಕೆ ಹಾಕಬೇಕು. ಇನ್ನೊಂದೆಡೆ ಬೀದಿ ನಾಯಿಗಳಿಗೆ ಪಾಲಿಕೆ ಸ್ಥಾಪಿಸಿರುವ ಫೀಡಿಂಗ್ ಝೋನ್‌ಗಳಿಗೆ ಉಪಹಾರದ ರೂಪದಲ್ಲಿ ಹಾಕಬೇಕು. ಆದರೆ, ಕಳೆದ ಕೆಲ ದಿನಗಳಿಂದ ತ್ಯಾಜ್ಯವನ್ನು ಮಹಾನಗರ ಪಾಲಿಕೆಯ ವಾಹನಕ್ಕೆ ವಿಲೇವಾರಿ ಮಾಡದೇ ತ್ಯಾಜ್ಯವನ್ನು ರಸ್ತೆ ಬದಿ, ಖಾಲಿ ನಿವೇಶನ, ಸಾರ್ವಜನಿಕ ಇತರೆ ಸ್ಥಳಗಳಲ್ಲಿ ಸಾರ್ವಜನಿಕರು ಎಸೆಯುತ್ತಿದ್ದಾರೆ. ಮಾಂಸ ಮಾರಾಟದ ವರ್ತಕರು ಮಾಂಸದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿಗೊಳಿಸದೆ ಮಾಂಸದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದರಿಂದ ಅನೈರ್ಮಲ್ಯತೆಯೊಂದಿಗೆ ಬೀದಿನಾಯಿಗಳ ಆಕ್ರಮಣಾಕಾರಿ ಪ್ರವೃತ್ತಿ ಹೆಚ್ಚಳವಾಗಿದೆ. ಮಟನ್ ಮತ್ತು ಚಿಕನ್ ಉದ್ದಿಮೆದಾರರು ತಮ್ಮ ಬಳಿ ಸಂಗ್ರಹವಾಗುವ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕದೇ ಹಾಗೂ ಎಸೆಯದೇ ಪಾಲಿಕೆಯ ವಾಹನಕ್ಕೆ ಹಾಕುವುದು ಕಡ್ಡಾಯ. ಒಂದು ವೇಳೆ ತಪ್ಪಿದಲ್ಲಿ ದಂಡ ವಿಧಿಸಿ. ಕರ್ನಾಟಕ ಪೌರ ಅಧಿನಿಯಮ 1976 ರೀತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.