ಹಿರಿಯ ನಾಗರಿಕರಿಗೆ ಕಾನೂನು ಅರಿವು ನೆರವು ನೀಡುವ ಕಾರ್ಯಕ್ರಮ ಬುಧವಾರ ರಾಣಿಬೆನ್ನೂರು ನಗರದ ನಿವೃತ್ತ ನೌಕರರ ಭವನದಲ್ಲಿ ಜರುಗಿತು.

ಹಾವೇರಿ:ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ರಾಣಿಬೆನ್ನೂರು ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ, ನಿವೃತ್ತ ನೌಕರರ ಸಂಘದ ಸಹಯೋಗದಲ್ಲಿ ಹಿರಿಯ ನಾಗರಿಕರಿಗೆ ಕಾನೂನು ಅರಿವು ನೆರವು ನೀಡುವ ಕಾರ್ಯಕ್ರಮ ಬುಧವಾರ ರಾಣಿಬೆನ್ನೂರು ನಗರದ ನಿವೃತ್ತ ನೌಕರರ ಭವನದಲ್ಲಿ ಜರುಗಿತು.

ನ್ಯಾಯವಾದಿ ಟಿ.ಎಸ್. ಜಂಗೆಡ್ಡೇರ ಅವರು ಮಾತನಾಡಿ, ಹಿರಿಯ ನಾಗರಿಕರ ಪಾಲನೆ- ಪೋಷಣೆ ಸಂರಕ್ಷಣಾ ಕಾಯ್ದೆ-2007 ಮಾಹಿತಿ ನೀಡಿದರು ಹಾಗೂ ಕಾನೂನಿನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕುಮಾರ ಮಡಿವಾಳರ ಮಾತನಾಡಿ, ಮನುಷ್ಯನಿಗೆ ಮುಪ್ಪು ವಯೋಸಹಜವಾಗಿ ಬರಲಿದೆ. ಹಾಗಾಗಿ ಇಳಿ ವಯಸ್ಸಿನಲ್ಲಿರುವವರನ್ನು ಪ್ರೀತಿ ಹಾಗೂ ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಡಾ.ಕಿರಣಕುಮಾರ ಅಗಡಿ ಮಾತನಾಡಿ, ವಯಸ್ಸಾದಂತೆ ದೇಹದ ಜೀರ್ಣಶಕ್ತಿ ಕಡಿಮೆಯಾಗುತ್ತದೆ. ಆದ್ದರಿಂದ ಹಿರಿಯರು ಸುಲಭವಾಗಿ ಜೀರ್ಣವಾಗುವ ನಾರಿನಾಂಶ, ಕ್ಯಾಲ್ಸಿಯಂ ಮತ್ತು ವಿಟಮಿನ್ ಇರುವ ಆಹಾರ ಸೇವಿಸಬೇಕು. ಹಸಿ ತರಕಾರಿ, ಹಣ್ಣುಗಳು, ಧಾನ್ಯಗಳು ಹಾಗೂ ಹಾಲಿನ ಉತ್ಪನ್ನಗಳು ಉತ್ತಮವಾಗಿದೆ. ಉಪ್ಪು, ಸಕ್ಕರೆ ಮತ್ತು ಎಣ್ಣೆಯುಕ್ತ ಆಹಾರವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಿ.ಎಂ. ಕರ್ಜಗಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ಆಶು ನದಾಫ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ.ಜಯಶ್ರೀ ಎಂ., ತಯ್ಯಾಬ ಪಾಟೀಲ, ಡಿ.ಎಸ್. ಅಣಜಿ, ವಕೀಲರ ಸಂಘ, ನಿವೃತ್ತ ನೌಕರರ ಸಂಘದ ಸರ್ವ ಪದಾಧಿಕಾರಿಗಳು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.