ಹಾವೇರಿ ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ನವೆಂಬರ್-2025ರ ಅಂಗವಾಗಿ ಕಾನೂನು ಬದ್ಧ ದತ್ತು ಪ್ರಕ್ರಿಯೆ ಕುರಿತು ಪ್ರಚಾರಾಂದೋಲನ ಮತ್ತು ಜಾಥಾ ಕಾರ್ಯಕ್ರಮ ನಡೆಯಿತು.
ಹಾವೇರಿ: ಮಕ್ಕಳು ಇಲ್ಲದವರು ಮಕ್ಕಳನ್ನು ಕಾನೂನುಬದ್ಧವಾಗಿ ದತ್ತು ಪಡೆದುಕೊಳ್ಳಬೇಕು. ಮಕ್ಕಳ ದತ್ತು ಪ್ರಕ್ರಿಯೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದತ್ತು ಕೇಂದ್ರದ ಮೂಲಕ ನಡೆಯುತ್ತಿದ್ದು, ದೇಶದಾದ್ಯಂತ ಈ ವ್ಯವಸ್ಥೆ ಜಾರಿಯಲ್ಲಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.
ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಇತ್ತೀಚೆಗೆ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ನವೆಂಬರ್-2025ರ ಅಂಗವಾಗಿ ಕಾನೂನು ಬದ್ಧ ದತ್ತು ಪ್ರಕ್ರಿಯೆ ಕುರಿತು ಪ್ರಚಾರಾಂದೋಲನ ಮತ್ತು ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕುಟುಂಬದ ಪ್ರೀತಿ ವಂಚಿತ, ಅನಾಥ, ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳ ಪುನರ್ವಸತಿಗೆ ಹಾಗೂ ಶಾಶ್ವತ ಕುಟುಂಬದ ವ್ಯವಸ್ಥೆಯನ್ನು ಕಾನೂನುಬದ್ಧವಾಗಿ ಕಲ್ಪಿಸಲು ದತ್ತು ಕಾರ್ಯಕ್ರಮ ಸಹಕಾರಿಯಾಗಿದೆ. ಮಕ್ಕಳ ಸಾಗಾಣಿಕೆ ಮತ್ತು ಮಾರಾಟ ಅಪರಾಧವಾಗಿದೆ. ಮಕ್ಕಳ ಹಕ್ಕುಗಳನ್ನು ವಂಚಿಸುವುದು ಅಪರಾಧವಾಗಿದೆ. ಈ ನಿಟ್ಟಿನಲ್ಲಿ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನದಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ದತ್ತು ಮಾಸಾಚರಣೆ ಆಚರಿಸಲಾಗುತ್ತಿದೆ. ಈ ವರ್ಷ “ವಿಶೇಷಚೇತನ ಮಕ್ಕಳನ್ನು ದತ್ತು ನೀಡುವ ಕುರಿತು” ಅರಿವು ಮೂಡಿಸಲಾಗುತ್ತಿದೆ. ವಿಶೇಷಚೇತನ ಮಕ್ಕಳಿಗೆ ತಂದೆ -ತಾಯಿಯ ಪ್ರೀತಿ ವಾತ್ಸಲ್ಯ ನೀಡಿ ಕೌಟುಂಬಿಕ ವಾತಾವರಣ ಕಲ್ಪಿಸಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಶೈಲಜಾ ಎಚ್.ವಿ. ಅವರು ಮಾತನಾಡಿ, ಮಕ್ಕಳನ್ನು ಕಾನೂನು ಪ್ರಕಾರ ದತ್ತು ಪಡೆದುಕೊಳ್ಳಬೇಕು ಹಾಗೂ ಎಲ್ಲ ಮಕ್ಕಳಿಗೂ ತಂದೆ-ತಾಯಿ ಪ್ರೀತಿ ಮತ್ತು ವಾತ್ಸಲ್ಯ ಸಿಗುವಂತಾಗಬೇಕು ಎಂದು ಹೇಳಿದರು.
ಭಿತ್ತಿಪತ್ರ ಬಿಡುಗಡೆ: ಇದೇ ಸಂದರ್ಭದಲ್ಲಿ ಅತಿಥಿಗಳು ದತ್ತು ಮಾಸಾಚರಣೆ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು ಹಾಗೂ ಸಹಿ ಸಂಗ್ರಹಣೆ ಬೋರ್ಡ್‌ನಲ್ಲಿ ಸಹಿ ಮಾಡುವ ಮೂಲಕ ಚಾಲನೆ ನೀಡಿದರು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ್ ಎಲ್., ಡಿವೈಎಸ್‌ಪಿ ಪಾಟೀಲ, ಶಹರ ಠಾಣೆ ಸಿಪಿಐ ಮೋತಿಲಾಲ್ ಪವಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ ಎಚ್., ಸರ್ಕಾರಿ ಶುಶ್ರೂಷ ಶಾಲೆ ಹಾಗೂ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸರಸ್ವತಿ ವೈ.ಎಸ್., ಜಿಲ್ಲಾ ಮಕ್ಕಳ ಸಮಿತಿ ಅಧ್ಯಕ್ಷೆ ಗೀತಾ ಪಾಟೀಲ ಇದ್ದರು. ವಿನಯ ಗುಡದೂರ ಸ್ವಾಗತಿಸಿದರು.