ದಲಿತರಿಗೆ ಸಿಎಂ ಸ್ಥಾನ ನೀಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

| Published : Nov 07 2025, 01:15 AM IST

ದಲಿತರಿಗೆ ಸಿಎಂ ಸ್ಥಾನ ನೀಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸ್ಥಾನವನ್ನು ದಲಿತ ನಾಯಕರೊಬ್ಬರಿಗೆ ನೀಡುವಂತೆ ಕೋರಿ ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಅವರಿಗೆ ಮನವಿ ಸಲ್ಲಿಸುತ್ತೇವೆ. ಆಗಲೂ ಸ್ಪಂದಿಸದಿದ್ದರೆ 10 ಲಕ್ಷ ಜನರೊಂದಿಗೆ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ ಎಂದರು.

ಕನ್ನಡಪ್ರಭ ವಾರ್ತೆ ರಾಮನಗರ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ದಲಿತ ನಾಯಕರೊಬ್ಬರಿಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ವಿಧಾನಸೌಧ ಮುತ್ತಿಗೆ ಹಾಕಿ ಮುಖ್ಯಮಂತ್ರಿ ಸ್ಥಾನ ಪಡೆಯಬೇಕಾಗುತ್ತದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಎಚ್ಚರಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನವನ್ನು ದಲಿತ ನಾಯಕರೊಬ್ಬರಿಗೆ ನೀಡುವಂತೆ ಕೋರಿ ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಅವರಿಗೆ ಮನವಿ ಸಲ್ಲಿಸುತ್ತೇವೆ. ಆಗಲೂ ಸ್ಪಂದಿಸದಿದ್ದರೆ 10 ಲಕ್ಷ ಜನರೊಂದಿಗೆ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ ಎಂದರು.

ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿ ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ಅವರನ್ನು ಮುಂದಿನ ಎರಡೂವರೆ ವರ್ಷಗಳವರೆಗೆ ಮುಂದುವರೆಸುವುದಾದರೆ ಯಾವುದೇ ತಕರಾರು ಇಲ್ಲ. ಬದಲಾವಣೆ ಮಾಡುವುದಾದರೆ ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ಡಾ.ಜಿ.ಪರಮೇಶ್ವರ್ , ಸತೀಶ್ ಜಾರಕಿಹೊಳಿ ಹಾಗೂ ಡಾ.ಎಚ್.ಸಿ. ಮಹದೇವಪ್ಪ ಅವರ ಪೈಕಿ ಯಾರಾದರು ಒಬ್ಬರಿಗೆ ಮುಖ್ಯಮಂತ್ರಿ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ದಲಿತ ನಾಯಕರು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ಅಲ್ಲದೆ, ಪಕ್ಷದಲ್ಲಿ ಮುಂಚೂಣಿಯಲ್ಲಿ ನಿಂತು ಕಾಂಗ್ರೆಸ್ ಅನ್ನು ಹಲವು ಬಾರಿ ಅಧಿಕಾರಕ್ಕೆ ತಂದಿದ್ದಾರೆ. ನವೆಂಬರ್ 21ರ ನಂತರ ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಈ ನಾಯಕರ ಪೈಕಿ ಒಬ್ಬರಿಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಪಕ್ಷದೊಳಗೆಯೇ ಮುಖ್ಯಮಂತ್ರಿ ಬದಲಾವಣೆ ಕೂಗು ಎದ್ದಿದ್ದು, ಕಳೆದ 7 ದಶಕಗಳಿಂದ ದಲಿತ ಶಾಸಕರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಸಾಧ್ಯವಾಗಿಲ್ಲ. ದಲಿತರಿಗೆ ಮುಖ್ಯಮಂತ್ರಿ ಅವಕಾಶ ಹತ್ತಿರವಾದಾಗಲೆಲ್ಲ ಆ ಪಕ್ಷದವರೇ ಕಸಿದು ಬೇರೆಯವರಿಗೆ ನೀಡಿದ್ದಾರೆ. ದಶಕಗಳಿಂದಲೂ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನ ವಂಚಿಸುತ್ತಾ ಬಂದಿದೆ ಎಂದು ಟೀಕಿಸಿದರು.

ಈ ದಲಿತ ನಾಯಕರಿಗೆ ಹೋಲಿಕೆ ಮಾಡಿದರೆ ಡಿ.ಕೆ.ಶಿವಕುಮಾರ್ ಅವರಿಗೆ ಇನ್ನೂ ಅವಕಾಶ ಇದೆ. 2028ರ ವಿಧಾನಸಭಾ ಚುನಾವಣೆಗೆ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಣೆ ಮಾಡಿದರೆ ನಾವುಗಳು ಬೆಂಬಲಿಸುತ್ತೇವೆ. ಇಲ್ಲದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಷ್ಟದ ದಿನಗಳು ದೂರ ಉಳಿದಿಲ್ಲ ಎಂದು ವೆಂಕಟಸ್ವಾಮಿ ಎಚ್ಚರಿಸಿದರು.

ಪ್ರಜಾ ವಿಮೋಚನಾ ಚಳವಳಿ ಮುಖಂಡ ಮುನಿ ಆಂಜನಪ್ಪ ಮಾತನಾಡಿ, ದಲಿತ ಸಂಘಟನೆಗಳು ಮತ್ತು ದಲಿತ ಜನಾಂಗವು ರಾಜಕೀಯವಾಗಿ ಜಾಗೃತಿಗೊಂಡು ಬೀದಿಗಿಳಿದು ದಲಿತ ಮುಖ್ಯಮಂತ್ರಿ ಹೋರಾಟಕ್ಕೆ ಚಾಲನೆ ನೀಡುವ ಕಾಲ ಸನ್ನಿಹಿತವಾಗಿದೆ. ಮುಖ್ಯಮಂತ್ರಿ ಸ್ಥಾನ ಸಿಗದಿದ್ದರೆ 10 ಲಕ್ಷ ಜನರನ್ನು ಸೇರಿಸಿ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ ಎಂದು ತಿಳಿಸಿದರು.

ಕಳೆದ 70 ವರ್ಷಗಳಿಂದ ಕಾಂಗ್ರೆಸ್ ವರಿಷ್ಠರು ದಲಿತ ಜನಾಂಗಗಳ ತಾಳ್ಮೆಯನ್ನು ಪರೀಕ್ಷಿಸುತ್ತಾ ಬಂದಿದೆ. ಅಂದಿನ ಬಿ.ಬಸವಲಿಂಗಪ್ಪ, ಮಲ್ಲಿಕಾರ್ಜುನಸ್ವಾಮಿ, ಎನ್.ರಾಚಯ್ಯ, ಕೆ.ಎಚ್.ರಂಗನಾಥ್ , ಬಿ.ರಾಚಯ್ಯ , ಇದೀಗ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಗಳಾಗುವ ಸಂದರ್ಭದಲ್ಲಿ ವರಿಷ್ಠರು ಪ್ರಬಲ ಜಾತಿಗಳ ಒತ್ತಡಕ್ಕೆ ಮಣಿದು ಅವರನ್ನು ಹಿಂದಕ್ಕೆ ಸರಿಸಿದೆ ಎಂದು ಟೀಕಿಸಿದರು.

ರಾಜ್ಯದ ಜನಸಂಖ್ಯೆಯಲ್ಲಿ ಶೇಕಡ 25ರಷ್ಟು ದಲಿತರು ಇದ್ದಾರೆ. ಆದರೂ ಶೇಕಡ 1 ರಿಂದ 3 ರಷ್ಟು ಜನಸಂಖ್ಯೆ ಇರುವ ಸಮುದಾಯದ ನಾಯಕರು ಮುಖ್ಯಮಂತ್ರಿ ಸ್ಥಾನ ಅಲಂಕಿಸುತ್ತಿದ್ದಾರೆ. ದಲಿತ ಜನಾಂಗಗಳ ಋಣ ತೀರಿಸುವ ಕಾರ್ಯವು ಕಾಂಗ್ರೆಸ್ ವರಿಷ್ಠರಿಗೆ ಇದುವರೆಗೂ ಸಾಧ್ಯವೇ ಆಗಿಲ್ಲ. ಇಂದಿಗೂ ಸಹ ದಲಿತರ ಋಣದಲ್ಲಿರುವುದನ್ನು ಕಾಂಗ್ರೆಸ್ ಮರೆಯಬಾರದು ಎಂದು ಮುನಿ ಆಂಜನಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮತಾ ಸೈನಿಕ ದಳ ಮುಖಂಡ ಜಿ.ವೆಂಕಟರಮಣಪ್ಪ, ಆರ್‌ಪಿಐ ಪಕ್ಷದ ಮುಖಂಡ ಡಾ.ಜಿ.ಗೋವಿಂದಯ್ಯ, ಮುಖಂಡರಾದ ಹರೀಶ್ ಬಾಲು, ಸುರೇಶ್ , ಮಳವಾಡಿ ಮಂಜು, ಕುಮಾರ್ ಇದ್ದರು.6ಕೆಆರ್ ಎಂಎನ್ 1.ಜೆಪಿಜಿ

ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.