ಸಾರಾಂಶ
ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ತೆರವಾದ ಪರಿಷತ್ ಸ್ಥಾನಕ್ಕೆ ಜು.12ರಂದು ಮತದಾನ ನಡೆಯಲಿದ್ದು ಕಾಂಗ್ರೆಸ್‌ನಿಂದ ಬಾದರ್ಲಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ತೆರವಾಗಿರುವ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆಯಾಗುವ ಸ್ಥಾನಕ್ಕೆ ಕೇಂದ್ರ ಚುನಾವಣಾ ಆಯೋಗವು ಉಪಚುನಾವಣೆ ಘೋಷಣೆ ಮಾಡಿದೆ.ಇದೇ ತಿಂಗಳು 25ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದ್ದು, ಜು.2ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಜು.3ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜು.5ರಂದು ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಜು.12ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಜರುಗಲಿದೆ. ಅದೇ ದಿನ ಸಂಜೆ 5 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇರೆಗೆ ಈ ಸ್ಥಾನ ಆಡಳಿತಾರೂಢ ಕಾಂಗ್ರೆಸ್ ಪಾಲಾಗುವುದು ನಿಶ್ಚಿತ. ಈಗಾಗಲೇ ಕಾಂಗ್ರೆಸ್ ಪಕ್ಷ ಪಕ್ಷದ ಅಭ್ಯರ್ಥಿಯನ್ನಾಗಿ ಬಸವನಗೌಡ ಬಾದರ್ಲಿ ಅವರ ಹೆಸರನ್ನು ಘೋಷಿಸಿದೆ. ಹೀಗಾಗಿ, ಮತದಾನ ನಡೆಯದೇ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ.
ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಸರ್ಕಾರವು ವಿಧಾನಪರಿಷತ್‌ಗೆ ಆಯ್ಕೆ ಮಾಡಿತ್ತು. ಆದರೆ, ಕಾರಣಾಂತರಗಳಿಂದ ಜ.25ರಂದು ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಬಿಜೆಪಿಗೆ ಮರಳಿದ್ದರು. 2028ರ ಜೂ.14ರವರೆಗೆ ಜಗದೀಶ್ ಶೆಟ್ಟರ್ ಅವಧಿ ಇತ್ತು. ಆದರೆ, ರಾಜೀನಾಮೆಯಿಂದಾಗಿ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ಘೋಷಣೆ ಮಾಡಲಾಗಿದೆ.