ಸಾರಾಂಶ
ದೋಟಿಹಾಳ ಹೋಬಳಿಯ ವಿಚಾರವಾಗಿ ಈಗಾಗಲೆ ಕಳೆದ ಅಧಿವೇಶನದಲ್ಲಿ ಚರ್ಚಿಸಲಾಗಿದೆ. ಹೊಸ ಹೋಬಳಿ ಪ್ರಸ್ತಾವನೆಗಳು ಇರದೆ ಕೆಲಸ ನನೆಗುದಿಗೆ ಬಿದ್ದಿದೆ.
ಕುಷ್ಟಗಿ:ಕಳೆದ ಐದು ದಿನಗಳಿಂದ ತಾಲೂಕಿನ ದೋಟಿಹಾಳ ಗ್ರಾಮದ ಬಸ್ ನಿಲ್ದಾಣದಲ್ಲಿ ದೋಟಿಹಾಳ ಕಂದಾಯ ಹೋಬಳಿ ವಿಸ್ತರಣಾ ಕೇಂದ್ರಕ್ಕೆ ಒತ್ತಾಯಿಸಿ ನಡೆಯುತ್ತಿದ್ದ ಅಹೋರಾತ್ರಿ ಧರಣಿ ಶುಕ್ರವಾರ ಅಂತ್ಯಗೊಂಡಿದೆ.ಕಂದಾಯ ಹೋಬಳಿ ವಿಸ್ತರಣಾ ಕೇಂದ್ರ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಸೋಮವಾರದಿಂದ ಧರಣಿ ಆರಂಭಿಸಲಾಗಿದ್ದು ಶುಕ್ರವಾರ ಧರಣಿ ಸ್ಥಳಕ್ಕೆ ಶಾಸಕ ದೊಡ್ಡನಗೌಡ ಪಾಟೀಲ ಭೇಟಿ ನೀಡಿ ಬೇಡಿಕೆ ಆಲಿಸಿ ಮನವಿ ಸ್ವೀಕರಿಸಿದರು.
ನಂತರ ಮಾತನಾಡಿದ ಶಾಸಕ ದೊಡ್ಡನಗೌಡ ಪಾಟೀಲ, ದೋಟಿಹಾಳ ಹೋಬಳಿಯ ವಿಚಾರವಾಗಿ ಈಗಾಗಲೆ ಕಳೆದ ಅಧಿವೇಶನದಲ್ಲಿ ಚರ್ಚಿಸಲಾಗಿದೆ. ಹೊಸ ಹೋಬಳಿ ಪ್ರಸ್ತಾವನೆಗಳು ಇರದೆ ಕೆಲಸ ನನೆಗುದಿಗೆ ಬಿದ್ದಿದೆ. ಈಗ ಹೋಬಳಿ ವಿಸ್ತರಣಾ ಕೇಂದ್ರವನ್ನಾದರೂ ಮಾಡಿಕೊಡಿ ಎನ್ನುವ ಬೇಡಿಕೆಯನ್ನು ಕಂದಾಯ ಇಲಾಖೆ ಸಚಿವರೊಂದಿಗೆ ಚರ್ಚಿಸುವ ಮೂಲಕ ಸೂಕ್ತ ಕ್ರಮಕ್ಕೆ ಮುಂದಾಗುತ್ತೇನೆ ಎಂದ ಅವರು, ಮಂಗಳವಾರ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಗಣ್ಯರು ಬೆಂಗಳೂರಿಗೆ ಬನ್ನಿ. ಅಲ್ಲಿ ನೇರವಾಗಿ ಸಚಿವರನ್ನು ಭೇಟಿ ಮಾಡಿ ಹೋಬಳಿ ವಿಸ್ತರಣಾ ಕೇಂದ್ರದ ಸಮಗ್ರ ಮಾಹಿತಿ ತಿಳಿಸಿ ಮುಂದಿನ ದಾರಿ ಕಂಡುಕೊಳ್ಳೋಣ ಎಂದು ತಿಳಿಸಿದರು. ಬಳಿಕ ಹೋರಾಟ ಸಮಿತಿಗೆ ಜ್ಯೂಸ್ ನೀಡುವ ಮೂಲಕ ಧರಣಿ ಅಂತ್ಯಗೊಳಿಸಿದರು.ಈ ವೇಳೆ ಹೋರಾಟ ಸಮಿತಿ ಅಧ್ಯಕ್ಷ ಶ್ರೀನಿವಾಸ ಕಂಟ್ಲಿ, ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ, ಹನಮಂತರಾವ ದೇಸಾಯಿ, ಲಾಡಸಾಬ್ ಕೊಳ್ಳಿ, ಉಮೇಶ ಮಡಿವಾಳರ, ಶಂಕ್ರಪ್ಪ ಅಂಗಡಿ, ಸಂಗಪ್ಪ ಕಡಿವಾಲ, ಯಮನೂರ ಕ್ಯಾದಿಗುಂಪಿ, ಪರಶುರಾಮ, ಬಸವರಾಜ ಗಾಣಿಗೇರ, ದೇವರಾಜ ಕಟ್ಟಿಮನಿ, ಕರಿಯಪ್ಪ ಪೂಜಾರಿ, ಮಂಜೂರಲಿ ಬನ್ನು, ಸೇರಿದಂತೆ ಅನೇಕರು ಇದ್ದರು.