ಗ್ರಾಮದ ರಾಜಣ್ಣ ಮತ್ತು ವೆಂಕಟೇಶ್ ಗೌಡ ಅವರಿಗೆ ಸೇರಿದ ಕುರಿಗಳ ಶೆಡ್ ಮೇಲೆ ಚಿರತೆ ದಾಳಿ ನಡೆಸಿದ್ದು, ಘಟನೆಯಿಂದ ರೈತರಿಗೆ ಸುಮಾರು ಒಂದು ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

ಚಿಕ್ಕಬಳ್ಳಾಪುರ: ಕುರಿಗಳ ಶೆಡ್‌ಗೆ ನುಗ್ಗಿದ ಚಿರತೆಯೊಂದು ಕುರಿಗಳ ಮೇಲೆ ದಾಳಿ ನಡೆಸಿ 9 ಕುರಿಗಳನ್ನು ಕೊಂದು, 4 ಕುರಿಗಳನ್ನು ತೀವ್ರ ಗಾಯಗೊಳಿಸಿರುವ ಘಟನೆ ತಾಲೂಕಿನ ಪರಸಿದಿನ್ನೆ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಗ್ರಾಮದ ರಾಜಣ್ಣ ಮತ್ತು ವೆಂಕಟೇಶ್ ಗೌಡ ಅವರಿಗೆ ಸೇರಿದ ಕುರಿಗಳ ಶೆಡ್ ಮೇಲೆ ಚಿರತೆ ದಾಳಿ ನಡೆಸಿದ್ದು, ಘಟನೆಯಿಂದ ರೈತರಿಗೆ ಸುಮಾರು ಒಂದು ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಗ್ರಾಮದ ಮುಖಂಡ ಕೇಶವಮೂರ್ತಿ ಮಾತನಾಡಿ, ಗ್ರಾಮದ ಸುತ್ತಮುತ್ತಲೂ ಅರಣ್ಯ ಪ್ರದೇಶವಿದ್ದು, ಚಿರತೆ ಸೇರಿದಂತೆ ಕಾಡುಪ್ರಾಣಿಗಳ ಹಾವಳಿಯಿಂದ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಯಾವ ಸಮಯದಲ್ಲಿ ಕಾಡುಪ್ರಾಣಿಗಳು ದಾಳಿ ಮಾಡುತ್ತವೆ ಎಂಬ ಭಯದಲ್ಲಿ ಜೀವನ ನಡೆಸುವಂತಾಗಿದೆ. ಈಗಾಗಲೇ ಈ ಘಟನೆ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಕುರಿಗಳನ್ನು ಕಳೆದುಕೊಂಡಿರುವ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಚಿರತೆ ದಾಳಿಯಿಂದ ಕುರಿಗಳನ್ನು ಕಳೆದುಕೊಂಡಿರುವ ರೈತರಿಗೆ ತಕ್ಷಣ ಪರಿಹಾರ ಒದಗಿಸಬೇಕು ಹಾಗೂ ಗ್ರಾಮದಲ್ಲಿ ಚಿರತೆಯ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸಿಕೆಬಿ-5 ತಾಲೂಕಿನ ಪರಸಿದಿನ್ನೆ ಗ್ರಾಮದಲ್ಲಿ ಚಿರತೆ ದಾಳಿಗೆ ಬಲಿಯಾಗಿರುವ ಕುರಿಗಳು